ಸರಕಾರಿ ನೌಕರರರಿಂದ ಫೆ.7ಕ್ಕೆ ವಿಧಾನಸೌಧ ಚಲೋ

Update: 2023-01-25 12:28 GMT

ಬೆಂಗಳೂರು, ಜ.25: ಸರಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಫೆ.7ರಂದು ‘ವಿಧಾನಸೌಧ ಚಲೋ’ ನಡೆಸಲು ಅಖಿಲ ಕರ್ನಾಟಕ ರಾಜ್ಯ ಸರಕಾರಿ ಒಕ್ಕೂಟವು ಕರೆ ನೀಡಿದೆ. 

ಬುಧವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಒಕ್ಕೂಟದ ಅಧ್ಯಕ್ಷ ಜೈಕುಮಾರ್ ಎಚ್.ಎಸ್. ಮಾತನಾಡಿ, ಸರಕಾರಿ ನೌಕರರಿಗೆ ಮಾರಕವಾದ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕು. 2023-24ನೆ ಆಯವ್ಯಯದಲ್ಲಿ 7ನೆ ವೇತನ ಆಯೋಗದಂತೆ ಅನುದಾನವನ್ನು ಮೀಸಲಿಡಬೇಕು. ರಾಜ್ಯದಲ್ಲಿ ಬಾಕಿಯಿರುವ 2.80 ಲಕ್ಷಕ್ಕೂ ಅಧಿಕ ಹುದ್ದೆಗಳನ್ನು ಕೂಡಲೇ ತುಂಬಬೇಕು ಎಂದು ಆಗ್ರಹಿಸಿದರು. 

ಸರಕಾರಿ ಸೇವೆಗಳನ್ನು ಖಾಸಗೀಕರಣ ಮಾಡುವುದನ್ನು ಕೈ ಬಿಟ್ಟು, ಹೊರಗುತ್ತಿಗೆ ಆಧಾರದ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡಬೇಕು. ಕೋವಿಡ್ ಸಮಯದಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ಬಾಕಿಯಿರುವ 18 ತಿಂಗಳ ತುಟಿಭತ್ಯೆಯನ್ನು ಬಿಡುಗಡೆ ಮಾಡಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು. 

ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ನೌಕರರ ಸಮನ್ವಯ ಸಮಿತಿಯ ಅಧ್ಯಕ್ಷ ಡಿ. ಶಿವಶಂಕರ್, ರಂಗಪ್ಪ ಸಿ., ಎಸ್. ಅಭಿಜಿತ್ ಮತ್ತಿತರು ಉಪಸ್ಥಿತರಿದ್ದರು. 

Similar News