ನಾಲ್ಕು ದಿನ ನೇರಳೆ ಮೆಟ್ರೋ ಸಂಚಾರ ವ್ಯತ್ಯಯ

Update: 2023-01-25 12:33 GMT

ಬೆಂಗಳೂರು, ಜ.25: ಸಿಲಿಕಾನ್ ಸಿಟಿ ಬೆಂಗಳೂರಿನ ನಮ್ಮ ಮೆಟ್ರೋ ಸೇವೆಯ ನೇರಳೆ ಮಾರ್ಗದಲ್ಲಿ ಜ.27ರಿಂದ ನಾಲ್ಕು ದಿನಗಳ ಕಾಲ ರೈಲುಗಳ ಸಂಚಾರ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.  

ಶುಕ್ರವಾರದಿಂದ ಸೋಮವಾರದವರೆಗೆ ನೇರಳೆ ಮಾರ್ಗದ ವಿಸ್ತರಣೆ ಕಾರ್ಯ ಪ್ರಾರಂಭಿಸುತ್ತಿರುವ ಹಿನ್ನೆಲೆ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಇದು ಬಹುತೇಕ ಮೈಸೂರು ರಸ್ತೆ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣಗಳ ನಡುವೆ ಸೇವೆಗಳ ಮೇಲೆ ಪರಿಣಾಮ ಬೀರಲಿದೆ. 

ಮೆಟ್ರೋ ಸಂಚಾರ ಸೌಲಭ್ಯ ಸೇವೆಯು ಸಾಮಾನ್ಯವಾಗಿ ಪ್ರತಿದಿನ ಮುಂಜಾನೆ 5 ರಿಂದ ರಾತ್ರಿ 11ರವರೆಗೆ ಲಭ್ಯವಿರುತ್ತದೆ. ಈ ಅವಧಿಯಲ್ಲಿ ಮೆಟ್ರೋ ರೈಲು ಸಂಚಾರವಿರುತ್ತದೆ. ಆದರೆ, ಶುಕ್ರವಾರದಿಂದ ಸೋಮವಾರದವರೆಗೆ ಸಂಚಾರ ವ್ಯತ್ಯಯ ಉಂಟಾಗಲಿದ್ದು, ಕೆಂಗೇರಿಯಿಂದ ಆಚೆ ಚಲ್ಲಘಟ್ಟದವರೆಗೆ ಮಾರ್ಗವನ್ನು ವಿಸ್ತರಿಸುವ ಯೋಜನೆಯನ್ನು ರೂಪಿಸುತ್ತಿರುವುದಾಗಿ ರೈಲು ನಿಗಮ  ತಿಳಿಸಿದೆ. 

ಈ ಅವಧಿಯಲ್ಲಿ, ನೇರಳೆ ಮಾರ್ಗದ ರೈಲುಗಳು ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಸಂಚರಿಸುತ್ತವೆ. ಸಾಮಾನ್ಯ ವೇಳಾಪಟ್ಟಿಯಂತೆ ನೇರಳೆ ಮಾರ್ಗದಲ್ಲಿ ಕೆಂಗೇರಿ ನಿಲ್ದಾಣದವರೆಗೆ ಮಂಗಳವಾರ ಮುಂಜಾನೆ 5 ಗಂಟೆಗೆ ಸೇವೆಗಳನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ.

ನಮ್ಮ ಮೆಟ್ರೋದ ಹಸಿರು ಮಾರ್ಗದ ಕಾರ್ಯಾಚರಣೆಗಳು ಮತ್ತು ಸೇವೆಗಳು ಪರಿಣಾಮ ಬೀರುವುದಿಲ್ಲ. ಕೆಂಗೇರಿ ಆಚೆಗಿನ ವಿಸ್ತರಣೆ ಮಾರ್ಗದ ಕಾರ್ಯಾರಂಭವನ್ನು ತ್ವರಿತಗೊಳಿಸಲು ಪ್ರಯಾಣಿಕರು ಸಹಕರಿಸಬೇಕು ಎಂದು ಬಿಎಂಆರ್‍ಸಿಎಲ್ ಮನವಿ ಮಾಡಿದೆ. 

2023ರೊಳಗೆ ಬೆಂಗಳೂರಿನ ನಿವಾಸಿಗಳಿಗೆ ಮೂರು ಹೊಸ ವಿಸ್ತರಣೆಗಳನ್ನು ನೀಡಲು ಹಲವಾರು ಮೆಟ್ರೋ ಕಾಮಗಾರಿಗಳ ನಡೆಯುತ್ತಿದೆ. ಅವುಗಳ ನಡುವೆ, ಇದು ಕೂಡ ಇದೆ. ಈ ಮೆಟ್ರೋವ್ಯವಸ್ಥೆಯು ನಗರದ ಹಲವಾರು ಪ್ರದೇಶಗಳನ್ನು ಸಂಪರ್ಕಿಸುತ್ತದೆ ಮತ್ತು ಪ್ರಯಾಣವನ್ನು ಸುಲಭಗೊಳಿಸುತ್ತದೆ. 

ಮತ್ತೊಂದೆಡೆ ನಮ್ಮ ಮೆಟ್ರೋ ತನ್ನ ನಿರ್ಮಾಣ ಸ್ಥಳಗಳ ಬಳಿ 15 ದಿನಗಳ ಅವಧಿಯಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತಗಳ ಮೂಲಕ ಸುದ್ದಿಯಲ್ಲಿದೆ. ಅದರಲ್ಲೂ ನಾಗವಾರ ವ್ಯಾಪ್ತಿಯಲ್ಲಿ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಮೃತಪಟ್ಟ ಪ್ರಕರಣದಲ್ಲಿ ಇಂಜಿನಿಯರ್ ಮತ್ತು ಗುತ್ತಿಗೆದಾರ ಹೊಣೆಗಾರರು ಎಂದು ಐಐಎಸ್‍ಸಿ ತಜ್ಞರ ತಂಡ ವರದಿ ಸಲ್ಲಿಸಿದೆ.

Similar News