ಯುವಸಮುದಾಯ ಚುನಾವಣೆಯ ಮಹತ್ವ ಅರಿತುಕೊಳ್ಳಬೇಕು: ಸಹಾಯಕ ಆಯುಕ್ತ ಮದನ್ ಮೋಹನ್ ಕೆಎಸ್

Update: 2023-01-25 18:15 GMT

ಕೊಣಾಜೆ: ವ್ಯವಸ್ಥೆಯಲ್ಲಿ ಬದಲಾವಣೆ ಹಾಗೂ ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಲು 18ರ ಯುವಸಮುದಾಯ  ಜಾಗೃತರಾಗಿ ಸೂಕ್ತ ವ್ಯಕ್ತಿಯನ್ನು ಚುನಾಯಿಸಬೇಕಿದೆ.  ಅದಕ್ಕಾಗಿ ಯುವಸಮುದಾಯ ಹೆಚ್ಚಾಗಿ  ಪ್ರಜಾಪ್ರಭುತ್ವದ ಆಚರಣೆಯಾಗಿರುವ ಚುನಾವಣೆಯಲ್ಲಿ ಭಾಗವಹಿಸಬೇಕು ಎಂದು  ಸಹಾಯಕ ಆಯುಕ್ತ ಮದನ್ ಮೋಹನ್ ಕೆಎಎಸ್ ಅಭಿಪ್ರಾಯಪಟ್ಟರು.

ಅವರು  ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಚುನಾವಣಾ ಸಾಕ್ಷರತಾ  ಕ್ಲಬ್   ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಎರಡನೇ ಮಹಡಿಯ ಚಿಂತನಾ ಸಭಾಂಗಣದಲ್ಲಿ ಆಯೋಜಿಸಿದ್ದ 13 ನೇ  ರಾಷ್ಟ್ರೀಯ ಮತದಾರರ ದಿನ  ಕ್ಕೆ ಚಾಲನೆ ನೀಡಿ ಮಾತನಾಡಿದರು.

ಜ.25 ಅನ್ನುವುದು ಚುನಾವಣಾ ಆಯೋಗ ಸ್ಥಾಪನೆಯಾದ ದಿನ, ಅದನ್ನು ಆಚರಿಸಲಾಗುತ್ತಿದೆ. ಕಳೆದ 8 ವರ್ಷಗಳಿಂದ ಚುನಾವಣಾ ಆಯೋಗ ಹಾಗೂ ರಾಜ್ಯ ಮುಖ್ಯ ಚುನಾವಣಾ  ಕಚೇರಿ ಹೊರಡಿಸಿರುವ ಆದೇಶದಂತೆ  ಪ್ರಜಾಪ್ರಭುತ್ವದ ಆಚರಣೆಯಾಗಿರುವ ಚುನಾವಣೆಯ ಮಹತ್ವವನ್ನು ತಿಳಿಸುವ ದಿನದ ಜಾಗೃತಿಯಾಗಿದೆ.   ಹೊಸ ವೋಟರ್ ಐಡಿಗೆ  ಆನ್ಲೈನ್ ಮೂಲಕ  ವಿದ್ಯಾರ್ಥಿಗಳು ಅರ್ಜಿ ಹಾಕಿರಿ.  ಸಂವಿಧಾನದ ಆಶಯದಂತೆ  ಯಾರು ಕೂಡ ಶ್ರೇಷ್ಟರಲ್ಲ, 18ರ ನಂತರ ಎಲ್ಲರೂ ಸಮಾನ ನಾಗರಿಕರು. ದೇಶದ ಜವಾಬ್ದಾರಿಯುತ   ಪ್ರಜೆಗಳಾಗಿರುತ್ತಾರೆ. ಬೇರೆ ರಾಜ್ಯದವರೂ ವೋಟರ್ ಅಪ್ಲೈಯಿಂಗ್ ಆಪ್ ಮೂಲಕ ಫಾರ್ಮ್-8 ಭರ್ತಿ ಗೊಳಿಸಿ , ಹಳೇ ವೋಟರ್ ಐಡಿಯನ್ನು ದಾಖಲಿಸಿ, ಹೊಸ ವಿಳಾಸವನ್ನು ನಮೂದಿಸುವ ಮೂಲಕ  ಚುನಾವಣೆಯ ಹಕ್ಕನ್ನು ಪಡೆಯಬಹುದಾಗಿದೆ.  ಹೊಸ ವೋಟರ್ ಐಡಿಗೆ ಅರ್ಜಿ ಸಲ್ಲಿಸುವವರು ಫಾರ್ಮ್ ಸಂಖ್ಯೆ-6ರ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ | ಸತೀಶ್ ಕುಮಾರ್ ಭಂಡಾರಿ ವಹಿಸಿ ಮಾತನಾಡಿ,  ಚುನಾವಣೆಯ ಹಕ್ಕು ಪಡೆಯಲು ಸರಕಾರ ಇನ್ನಷ್ಟು ಸರಳೀಕೃತ ವಿಧಾನವನ್ನು ನಡೆಸಬೇಕಿದೆ. ನಿಟ್ಟೆ ಪರಿಗಣಿತ ವಿ.ವಿ  ವಿದ್ಯಾರ್ಥಿಗಳನ್ನು  ಚುನಾವಣಾ ಜಾಗೃತಿಯನ್ನು ಪ್ರತಿವರ್ಷವೂ ಮಾಡುತ್ತಿದೆ. ವಿ.ವಿಯ ಚುನಾವಣಾ ಸಾಕ್ಷರತಾ ಕ್ಲಬ್ ಕಾರ್ಯವೂ  ಪರಿಣಾಮಕಾರಿಯಾಗಿರುವುದು ಶ್ಲಾಘನೀಯ ಎಂದರು.

ಕುಲಸಚಿವ ಪ್ರೊ. ಹರ್ಷ ಹಾಲಹಳ್ಳಿ ಉಪಸ್ಥಿತರಿದ್ದರು.

ನಿಟ್ಟೆ ಚುನಾವಣಾ ಸಾಕ್ಷರತಾ ಕ್ಲಬ್ ನ ನೋಡೆಲ್ ಅಧಿಕಾರಿ ಸುಮಾ ಯನ್.ಯಸ್  ಸ್ವಾಗತಿಸಿದರು. ಲಿಸಾ ನಿರೂಪಿಸಿದರು. ದಿಯಾ ವಂದಿಸಿದರು.

ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿಯ  ವಿದ್ಯಾರ್ಥಿನಿ ಚೈತ್ರಾಲಿ ಮತದಾರರ ದಿನಾಚರಣೆಯ ಪ್ರಾಮುಖ್ಯತೆ ತಿಳಿಸಿದರು. ಈ ಸಂದರ್ಭ ವಿದ್ಯಾರ್ಥಿಗಳಿಂದ ಚುನಾವಣಾ ಜಾಗೃತಿ ಕುರಿತ ಕಿರುನಾಟಕ ಪ್ರದರ್ಶನಗೊಂಡಿತು.

Similar News