ಹವಾಮಾನ ವೈಪರೀತ್ಯ ತಡೆಯಲು ಎಲ್ಲಾ ದೇಶಗಳು ಕೈಜೋಡಿಸಬೇಕಿದೆ: ಪ್ರೊ. ರಾಬರ್ಟ್ ಇವಾನ್ಸ್

Update: 2023-01-25 18:39 GMT

ಮಂಗಳೂರು: ವಿಶ್ವಂತ ಅತ್ಯಂತ ಶ್ರೀಮಂತ ದೇಶ ಬ್ರಿಟನ್ ಹವಾಮಾನ ವೈಪರೀತ್ಯದ ಬಗ್ಗೆ ನಿಧಾನ ಧೋರಣೆ ಅನುಸರಿಸಿದೆ. ಅತ್ಯಂತ ದೊಡ್ಡ ದೇಶ ಚೀನಾವೂ ಗಮನಾರ್ಹ ಕ್ರಮ ತೆಗೆದುಕೊಂಡಂತಿಲ್ಲ. ಹೀಗಾಗಿ ಯುರೋಪಿಯನ್ ಒಕ್ಕೂಟ ಹಾಗೂ ಸಾರ್ಕ್ ನ ಪ್ರಮುಖ ಭಾಗ ಭಾರತ ಈ ನಿಟ್ಟಿನಲ್ಲಿ ಮುಂದಡಿಯಿಡಬೇಕಿದೆ, ಎಂದು ಯುರೋಪಿಯನ್ ಸಂಸತ್ತಿನ ಮಾಜಿ ಸದಸ್ಯ, ಲಂಡನ್ ವಿಶ್ವವಿದ್ಯಾನಿಲಯದ ಹಾಲೋವೇ ಕಾಲೇಜಿನ ಪ್ರಾಧ್ಯಾಪಕ ಪ್ರೊ. ರಾಬರ್ಟ್ ಇವಾನ್ಸ್ ಅಭಿಪ್ರಾಯಟ್ಟಿದ್ದಾರೆ.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಬುಧವಾರ ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಹಾಗೂ ಪತ್ರಿಕೋದ್ಯಮ ವಿಭಾಗಗಳ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸದಲ್ಲಿ ಯುರೋಪಿಯನ್ ಒಕ್ಕೂಟ ಹಾಗೂ ಸಾರ್ಕ್  ಎಂಬ ವಿಷಯದ ಕುರಿತು ಮಾತನಾಡಿದ ಅವರು, ಅವರು ಹವಾಮಾನ ವೈಪರೀತ್ಯ ವಿಚಾರ ತಡೆಯಲು ಒಟ್ಟಾಗಿ ಶ್ರಮಿಸಬೇಕಿದೆ ಎಂದರು.

ಸಾರ್ಕ್ ಮತ್ತು ಯುರೋಪಿಯನ್ ಒಕ್ಕೂಟಗಳ ನಡುವಿನ ನಡುವಿನ ಸಂಬಂಧ ಸುಧಾರಣೆ ನಿಧಾನವಾಗಿದ್ದರೂ ಆಶಾದಾಯಕವಾಗಿದೆ. ಎರಡೂ ಒಕ್ಕೂಟದ ರಾಷ್ಟ್ರಗಳ ನಡುವಿನ ಆಮದು- ರಫ್ತು ಸಮತೋಲನದಿಂದ ಕೂಡಿದೆ. ಶ್ರೀಮಂತ ದೇಶಗಳ ಒಕ್ಕೂಟವಾಗ ಯುರೋಪಿಯನ್ ಯೂನಿಯನ್ ಪಾಕಿಸ್ತಾನ, ಬಾಂಗ್ಲಾದೇಶಗಳ ಜೊತೆಯೂ ಉತ್ತಮ ಸಂಬಂಧ ಹೊಂದಿದ್ದರೂ, ಭಾರತಕ್ಕೆ ಆಗಬಹುದಾದ ಲಾಭ ಹೆಚ್ಚು. ಪ್ರಧಾನಮಂತ್ರಿ ನರೇಂದ್ರ ಮೋದಿ ಧನಾತ್ಮಕ ಹೆಜ್ಜೆ ಇಟ್ಟಿದ್ದಾರೆ ಎಂದರು.

ಇದೇ ವೇಳೆ ಅವರು, ಯುರೋಪಿಯನ್ ಒಕ್ಕೂಟವನ್ನು ತೊರೆದ ಬ್ರಿಟನ್ ಗೆ ಲಾಭಕ್ಕಿಂತ ನಷ್ವವೇ ಆಗಿದೆ, ಎಂದು ಅಭಿಪ್ರಾಯಪಟ್ಟ ಅವರು 27 ದೇಶಗಳ ಒಕ್ಕೂಟವಾದ ಯುರೋಪಿಯನ್ ಯೂನಿಯನ್ ತೊರೆದು ಬ್ರಿಟನ್ ತನ್ನ ಗಡಿಗಳ ಮೇಲೆ ನಿಯಂತ್ರಣ ಕಳೆದುಕೊಂಡಿದೆ. ನಿರಾಶ್ರಿತರ ನುಸುಳುವಿಕೆ ಹೆಚ್ಚಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ರಾಜಕೀಯವಾಗಿ ಪರಿಸ್ಥಿತಿಯನ್ನು ಬ್ರಿಟನ್ ನಿಭಾಯಿಸಿದ್ದರೂ ಸ್ಪಷ್ಟ ಚಿತ್ರಣ ಸಿಗಲು ಇನ್ನೂ ಕೆಲವು ವರ್ಷ ಬೇಕಾಗಬಹುದು ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಯರಾಜ್ ಅಮೀನ್ ಅವರು ಮಾತನಾಡಿ, ಯುರೋಪಿಯನ್ ಒಕ್ಕೂಟದ ಸಹಾಯದಿಂದ ಪ್ರಾದೇಶಿಕ ಸಮಗ್ರತೆಯನ್ನು ಬಲಪಡಿಸಿಕೊಳ್ಳುವ ಅವಕಾಶವನ್ನು ದಕ್ಷಿಣ ಏಷ್ಯಾದ ದೇಶಗಳು ತಮ್ಮ ಕಚ್ಚಾಟದಿಂದ ಕೈಚೆಲ್ಲಿದ್ದು ದುರಾದೃಷ್ಟ. ಈಗ ಯೂನಿಯನ್ ದ್ವಿಪಕ್ಷೀಯ ಸಂಬಂಧಕ್ಕಷ್ಟೇ ಹೆಚ್ಚು ಮಹತ್ವ ನೀಡುತ್ತಿದೆ, ಎಂದರು. ಉಸ್ತುವಾರಿ ಪ್ರಾಂಶುಪಾಲ ಡಾ. ಹರೀಶ ಎ ಕಾರ್ಯಕ್ರಮಕ್ಕೆ ಶುಭಕೋರಿದರು.

ಮಾಹೆಯ ಯುರೋಪಿಯನ್ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ನೀತಾ ಇನಾಂದಾರ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಶಾನಿ .ಕೆ. ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಲತಾ ಎ. ಪಂಡಿತ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜ್ಯಶಾಸ್ತ್ರ ವಿಭಾಗದ ಡಾ. ಆಶಾಲತಾ ಧನ್ಯವಾದ ಸಮರ್ಪಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಗಾಯತ್ರಿ ಎನ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ವಿಭಾಗಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Similar News