ನಮ್ಮ ಸಂವಿಧಾನ ಹಕ್ಕುಗಳೊಂದಿಗೆ ಕರ್ತವ್ಯವನ್ನು ತಿಳಿಸುತ್ತದೆ: ಮಮತಾದೇವಿ ಜಿ.ಎಸ್

Update: 2023-01-26 08:53 GMT

ಭಟ್ಕಳ: ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಟ ಸಂವಿಧಾನ ನಮ್ಮದು. ಇದು ನಾಗರೀಕರ ಹಕ್ಕುಗಳೇನು ಎನ್ನುವುದರ ಜೊತೆಗೆ ನಾಗರೀಕರ ಕರ್ತವ್ಯವನ್ನೂ ಹೇಳಿಕೊಡುತ್ತದೆ ಎಂದು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್ ಹೇಳಿದರು.

ಅವರು ಗುರುವಾರ ಇಲ್ಲಿನ ತಾಲೂಕು ಕ್ರಿಡಾಂಗಣದಲ್ಲಿ ನಡೆದ 74ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿದರು.

ರಾಷ್ಟ್ರ ನಿರ್ಮಾಣದಲ್ಲಿ ನಮ್ಮ ಪಾತ್ರವೇನು? ಎಂಬುದರ ಕುರಿತಂತೆ ಇಂದು ನಾವೂ ಆಲೋಚನೆಯನ್ನು ಮಾಡಬೇಕಾಗಿದೆ. ಸಂವಿಧಾನದ ಆದರ್ಶ, ಮೌಲ್ಯ ಹಾಗೂ ಆಶಯಗಳನ್ನು ಎತ್ತಿ ಹಿಡಿಯುವ ಕಾರ್ಯ ಪ್ರತಿಯೊಬ್ಬರಿಂದಲೂ ಆಗಬೇಕು ಎಂದು ಮಮತಾದೇವಿ ಕರೆ ನೀಡಿದರು.

ಶಾಸಕ ಸುನಿಲ್ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಶ್ಚಿಮ ಘಟ್ಟ ಸರಂಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿದರು. ತಹಶೀಲ್ದಾರ್ ಅಶೋಕ್ ಭಟ್ ಸ್ವಾಗತಿ ಪ್ರಸ್ತಾವಿಕವಾಗಿ ಮಾತನಾಡಿದರು.

ಶಿಕ್ಷಕ ಶ್ರೀಧರ್ ಶೇಟ್‌ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ದೈಹಿಕ ಶಿಕ್ಷಣ ಅಧೀಕ್ಷಕ ರವೀಂದ್ರ ನಾಯ್ಕ ಧನ್ಯವಾದ ಅರ್ಪಿಸಿದರು. ಭಟ್ಕಳ ಪುರಸಭೆ ಅಧ್ಯಕ್ಷ ಫರ್ವೇರ್ ಕಾಶಿಮಜಿ, ಭಟ್ಕಳ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ್ ನಾಯ್ಕ, ಪೊಲೀಸ್‌ ಅಧೀಕ್ಷಕ ಶ್ರೀಕಾಂತ್, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಪ್ರಭಾಕರ್‌ ಚಿಕ್ಕನಮನೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಸಾಧಕರಿಗೆ ಸ್ಮರಣಿಕೆ ಮತ್ತು ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಕವಾಯತು, ಮನೋರಂಜನಾ ಕಾರ್ಯಕ್ರಮ ನಡೆಯಿತು.

ಬರಿಗಾಲಲ್ಲಿ ಪ್ರದರ್ಶನ ನೀಡಿದ ವಿದ್ಯಾರ್ಥಿಗಳು-ಸಾರ್ವಜನಿಕರಿಂದ ಅಸಮಧಾನ: ಗುರುವಾರ ತಾಲೂಕು ಕ್ರೀಡಾಂಗಣದಲ್ಲಿ ನಡೆದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಶಾಲೆಯ ವಿದ್ಯಾರ್ಥಿಗಳು ಮನೋರಂಜನಾ ಕಾರ್ಯಕ್ರಮ ನೀಡಿದ್ದು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ಆದರೆ ವಿದ್ಯಾರ್ಥಿಗಳು ಉರಿಬಿಸಿಲಿನಲ್ಲಿ ನೆಲ ಹಾಸು ಇಲ್ಲದೆ ಬರಿಗಾಲಿನಲ್ಲಿ ನೃತ್ಯ, ಪಿರಾಮಿಡ್ ಮತ್ತಿತರ ಕಸರತ್ತು ಪ್ರದರ್ಶನ ಮಾಡಿದ್ದು ತಾಲೂಕಾಡಳಿತವು ನೆಲಹಾಸು ವ್ಯವಸ್ಥೆ ಮಾಡುವಲ್ಲಿ ನಿರ್ಲಕ್ಷ್ಯ ತಾಳಿದೆ ಎಂದು ಕಾರ್ಯಕ್ರಮ ವೀಕ್ಷಿಸುತ್ತಿದ್ದ ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದರು.

ಸುಮಾರು 2 ಗಂಟೆ ನಡೆದ ಮನೋರಂಜನಾಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೆಲದ ಮೇಲೆಯೇ ಪ್ರದರ್ಶನ ನೀಡಿದರು. ಕೆಲವೊಂದ ನೃತ್ಯಗಳು ನೆಲದ ಮೇಲೆ ಮಲಗಿಕೊಂಡು ಮಾಡಿದ್ದು ವಿದ್ಯಾರ್ಥಿಗಳ ಬಟ್ಟೆ, ದೇಹಕ್ಕೆ ಮಣ್ಣು ಮುತ್ತಿಕೊಂಡು ಅಂದಗೆಡಿಸಿತ್ತು. ಇದರಿಂದಾಗಿ ಕಾರ್ಯಕ್ರಮದಲ್ಲಿ ಹಾಜರಿದ್ದ ಪಾಲಕರು ಸೇರಿದಂತೆ ಸಾರ್ವಜನಿಕರು ಮಾಧ್ಯಮಗಳ ಮುಂದೆ ತಾಲೂಕಾಡಳಿತದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು

Similar News