ಇಖ್ರಾ ಅರೆಬಿಕ್‌ ಸ್ಕೂಲ್‌ನಲ್ಲಿ ಗಣರಾಜ್ಯೋತ್ಸವ ಆಚರಣೆ, ರಕ್ತದಾನ ಶಿಬಿರ

Update: 2023-01-26 11:10 GMT

ಮಂಗಳೂರು: ಭಾರತದ 74ನೇ ಗಣರಾಜ್ಯೋತ್ಸವ ಆಚರಣೆಯ ಅಂಗವಾಗಿ ನಗರದ ಇಖ್ರಾ ಅರೆಬಿಕ್‌ ಸ್ಕೂಲ್‌ನಲ್ಲಿ ಗಣ್ಯರ ಸಮ್ಮುಖದಲ್ಲಿ ಶಾಸಕ ಯು ಟಿ ಖಾದರ್‌ ಧ್ವಜಾರೋಹಣ ನೆರವೇರಿಸಿದರು. ಈ ದಿನವನ್ನು ಸ್ಮರಣೀಯವಾಗಿಸಲು ಶಾಲೆಯಲ್ಲಿ ರಕ್ತದಾನ ಶಿಬಿರವನ್ನೂ ಆಯೋಜಿಸಲಾಯಿತು.

ಧ್ವಜಾರೋಹಣದ ನಂತರ ಮಾತನಾಡಿದ ಶಾಸಕರು, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಅಗತ್ಯವನ್ನು ಒತ್ತಿ ಹೇಳಿದರು. ಸಂವಿಧಾನ ಮತ್ತದರ ಆಶಯಗಳ ಬಗ್ಗೆ ಮಾತನಾಡಿದ ಖಾದರ್‌, ದೇಶದ ಸಂವಿಧಾನವನ್ನು ರಕ್ಷಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕೆಂದರಲ್ಲದೆ ಭ್ರಾತೃತ್ವದ ಜೀವನದ ಮಹತ್ವವನ್ನು ವಿವರಿಸಿದರು.

ಪತ್ರಕರ್ತ ಹಾಗೂ ವಿ4 ಸುದ್ದಿ ವಾಹಿನಿಯ ಮುಖ್ಯ ಸಂಪಾದಕ ತಾರಾನಾಥ್‌ ಗಟ್ಟಿ ಕಾಪಿಕಾಡ್‌ ಮಾತನಾಡಿ, ಸಂವಿಧಾನ ಪ್ರದತ್ತ ಹಕ್ಕುಗಳನ್ನು ಬಳಸಿಕೊಂಡು ದೇಶ ನಿರ್ಮಾಣ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.

ಪತ್ರಕರ್ತ ಆರಿಫ್‌ ಪಡುಬಿದ್ರಿ ತಮ್ಮ ಭಾಷಣದಲ್ಲಿ ದೇಶದ ವೈವಿಧ್ಯತೆಯ ಮಹತ್ವವನ್ನು ವಿವರಿಸಿದರು ಹಾಗೂ ಸಮಾಜದಲ್ಲಿ ಪ್ರತಿಯೊಬ್ಬರನ್ನೂ ಗೌರವಿಸಬೇಕು ಎಂದರು.

ಬ್ಲಡ್‌ ಡೋನರ್ಸ್‌ ಮಂಗಳೂರು ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ್‌, ಇಖ್ರಾ ಅರೆಬಿಕ್‌ ಸ್ಕೂಲ್‌ ಪ್ರಾಂಶುಪಾಲ ಮೌಲಾನ ಸಲೀಂ ನದ್ವಿ, ಮೆಸೇಜ್ ಆಫ್‌ ಹ್ಯುಮಾನಿಟಿ ಸದಸ್ಯ ಫರ್ಹಾನ್‌ ನದ್ವಿ ಉಪಸ್ಥಿತರಿದ್ದರು.

ಹಜ್‌ ಕೇಂದ್ರ ಸಮಿತಿಯ ಹನೀಫ್‌, ಕೆಪಿಸಿಸಿ ಉಪಾಧ್ಯಕ್ಷ ಐವನ್‌ ಡಿʼಸೋಜ ಸಹಿತ ಹಲವು ಸಾಮಾಜಿಕ ಮತ್ತು ರಾಜಕೀಯ ನೇತಾರರು ಉಪಸ್ಥಿತರಿದ್ದರು.

Similar News