ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ಕೇಂದ್ರ ತಾರತಮ್ಯ: ರಮೇಶ್ ಬಾಬು ಆಕ್ರೋಶ

Update: 2023-01-27 14:33 GMT

ಬೆಂಗಳೂರು, ಜ.27: ಕೇಂದ್ರ ಸರಕಾರದ ತೆರಿಗೆ ಸಂಗ್ರಹ ಮತ್ತು ಆದಾಯ ಗಣನೀಯವಾಗಿ ಏರುತ್ತಿದ್ದು, ಇದಕ್ಕೆ ಸಮಾನಾಂತರವಾಗಿ ರಾಜ್ಯಗಳಿಗೆ ಹಣಕಾಸು ಸೌಲಭ್ಯ ಮತ್ತು ಅನುದಾನ ಹಂಚಿಕೆ ಮಾಡುತ್ತಿಲ್ಲ. ಪ್ರಕೃತಿ ವಿಪತ್ತು ಪರಿಹಾರ ಹಂಚಿಕೆ ಸಂದರ್ಭವನ್ನೂ ಒಳಗೊಂಡಂತೆ, ಜಿಎಸ್ಟಿ ಪಾಲು ಹಂಚಿಕೆಯವರೆಗೆ ತಾರತಮ್ಯದ ಜೊತೆಗೆ ಅಧಿಕಾರ ಕೇಂದ್ರೀಕರಣಕ್ಕೆ ಅವಕಾಶ ನೀಡುತ್ತಿದೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯಕ್ಕೆ ಬರಬೇಕಾದ (ರೈಲ್ವೆ, ನೀರಾವರಿ ಸೇರಿದಂತೆ) ಕೇಂದ್ರ ಅನುದಾನದ ಯೋಜನೆಗಳಿಗೆ ಹೆಚ್ಚುವರಿ ಅನುದಾನ, ಜಿಎಸ್‍ಟಿ ಸಂಗ್ರಹದಲ್ಲಿ ಹೆಚ್ಚುವರಿ ಪಾಲು, ಹಿಂದುಳಿದ ವರ್ಗಗಳ ಮೀಸಲಾತಿ ಕುರಿತು ಸಂವಿಧಾನ ತಿದ್ದುಪಡಿಯ ಕೋರಿಕೆಗೆ ರಾಜ್ಯ ಸರಕಾರದಿಂದ ಮನವಿ ಸಲ್ಲಿಸಿಲ್ಲ ಎಂದು ದೂರಿದ್ದಾರೆ.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ವಿಶೇಷ ಅನುದಾನಕ್ಕೆ ಮನವಿ ಅಥವಾ ಇತರೆ ಅವಕಾಶಗಳ ಕೋರಿ ರಾಜ್ಯದ ಪರವಾಗಿ ಮುಖ್ಯಮಂತ್ರಿ ಅಥವಾ ಸರಕಾರದ ಮುಖ್ಯ ಕಾರ್ಯದರ್ಶಿಗಳಿಂದಾಗಲಿ ಲಿಖಿತ ಮನವಿಯನ್ನು ಸಲ್ಲಿಸಿಲ್ಲ. ಕೆಲವು ಇಲಾಖೆಗಳು ನೇರವಾಗಿ ತಮ್ಮ ಇಲಾಖೆಗೆ ಸಂಬಂಧಪಟ್ಟಂತೆ ಮನವಿಗಳನ್ನು ಮಾಡಿದ್ದರೂ, ಅದರ ವಿವರ ರಾಜ್ಯ ಸರಕಾರದಲ್ಲಿ ಇಲ್ಲ ಎಂದು ಅವರು ಟೀಕಿಸಿದ್ದಾರೆ.

ರಾಜ್ಯ ಸರಕಾರ ಕೇಂದ್ರ ಆಯವ್ಯಯದಲ್ಲಿ ರಾಜ್ಯದ ಹಕ್ಕನ್ನು ಪ್ರತಿಪಾದಿಸುವಲ್ಲಿ ಸೋತಿದೆ. ಬರುವ ವಿಧಾನಸಭಾ ಚುನಾವಣೆಗೆ ಆತುರವನ್ನು ತೋರುತ್ತಿರುವ ರಾಜ್ಯ ಸರಕಾರ ಅಭಿವೃದ್ಧಿಯ ಅನುದಾನಗಳಿಗೆ ತನ್ನ ವೈಫಲ್ಯವನ್ನು ಒಪ್ಪಿಕೊಂಡಿದೆ. ಆಯವ್ಯಯಕ್ಕೆ ಪೂರಕವಾಗಿ ಸಂಸದರು, ವಿರೋಧ ಪಕ್ಷಗಳ ಸಭೆಯನ್ನು ನಡೆಸಿ, ಅವಶ್ಯಕವಿರುವ ಅಂಕಿಅಂಶಗಳನ್ನು ಸಂಗ್ರಹಿಸಿ ಯೋಜನೆ ಮತ್ತು ಅನುದಾನಕ್ಕೆ ಅಗ್ರಹಿಸಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಬೇಕಾಗಿತ್ತು ಎಂದು ರಮೇಶ್ ಬಾಬು ತಿಳಿಸಿದ್ದಾರೆ. 

ಕೇವಲ ಚುನಾವಣಾ ಪ್ರಚಾರಗಳಲ್ಲಿ ಮುಳುಗಿ ಹೋಗಿರುವ ಮುಖ್ಯಮಂತ್ರಿ, ರಾಜ್ಯದ ಪರವಾಗಿ ನಿಗದಿತ ಸಮಯದಲ್ಲಿ ತಮ್ಮ ಧ್ವನಿಯನ್ನು ದಾಖಲಿಸುವಲ್ಲಿ ವಿಫಲರಾಗಿದ್ದಾರೆ. ಕೇಂದ್ರದ ಬಜೆಟ್ ಮಂಡನೆಗೆ ಕೇವಲ ನಾಲ್ಕು ದಿನ ಬಾಕಿಯಿದ್ದು, ರಾಜ್ಯ ಸರಕಾರ ತನ್ನ ಅವಕಾಶವನ್ನು ಕೈಚೆಲ್ಲಿದೆ ಎಂದು ಅವರು ಹೇಳಿದ್ದಾರೆ. 

Similar News