ಪದ್ಮ ಪ್ರಶಸ್ತಿ ಗೌರವಗಳು ರಾಜಕೀಯ ಕೂಲಿಯಾಗದಿರಲಿ

Update: 2023-01-28 04:23 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಕೆಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ಕಾರಣಕ್ಕಾಗಿಯೇ ಸಮಾಜ ಕೆಲವರನ್ನು ಗೌರವಿಸುತ್ತದೆ. ಕೆಲವೊಮ್ಮೆ ಪ್ರಶಸ್ತಿ ಪಡೆದವರ ಕಾರಣದಿಂದ ಪ್ರಶಸ್ತಿಯೇ ವಿಶೇಷ ಗೌರವವನ್ನು ಪಡೆದುಕೊಳ್ಳುತ್ತದೆ.  ‘ಒಂದು ಕಾಲದಲ್ಲಿ ಇಂಥವರಿಗೆ ಸಂದ ಪ್ರಶಸ್ತಿ ಇದು’ ಎನ್ನುವ ಕಾರಣಕ್ಕಾಗಿಯೇ ಆ ಪ್ರಶಸ್ತಿಯನ್ನು ಪಡೆಯಲು ಉಳಿದವರು ಹಂಬಲಿಸುತ್ತಾರೆ. ಕೆಲವೊಮ್ಮೆ, ಈ ಪ್ರಶಸ್ತಿಗಳು ಸಲ್ಲಬಾರದವರಿಗೆ ಸಂದುತನ್ನ ಪ್ರತಿಷ್ಠೆಯನ್ನು ಕಳೆದುಕೊಂಡಿರುತ್ತದೆ. ಸರಕಾರದ ಇಂತಹ ಪ್ರಶಸ್ತಿಗಳು ಅರ್ಹ ಸಾಧಕರನ್ನು ಅವಮಾನಿಸಿ ಬಿಡುತ್ತವೆ. ದಶಕಗಳ ಹಿಂದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಬಗ್ಗೆಯೂ ಇಂತಹದೇ ಅಭಿಪ್ರಾಯವಿತ್ತು. ಈ ಪ್ರಶಸ್ತಿಗಾಗಿ ಲಾಬಿ ಎಷ್ಟರಮಟ್ಟಿಗೆ ಇತ್ತೆಂದರೆ, ರಾಜ್ಯದಲ್ಲಿ ಯಾವ ಪಕ್ಷ ಆಳುತ್ತಿದೆಯೋ ಆ ಪಕ್ಷದ ಕಾರ್ಯಕರ್ತರೆಲ್ಲರೂ ಪ್ರಶಸ್ತಿಗಾಗಿ ಸರದಿಯಲ್ಲಿ ನಿಂತು ಬಿಡುತ್ತಿದ್ದರು. ಸಾಧಕರೆಲ್ಲ ‘‘ಎಲ್ಲಿ ಸರಕಾರ ತಮಗೆ ಪ್ರಶಸ್ತಿ ನೀಡಿ ಅವಮಾನಿಸುತ್ತದೋ’’ ಎಂದು ರಾಜ್ಯೋತ್ಸವದ ಹಿಂದಿನ ರಾತ್ರಿ ನಿದ್ದೆಯಿಲ್ಲದೆ ಕಳೆಯಬೇಕಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಸಂಬಂಧಿಸಿ ಕೆಲವು ಕಠಿಣ ನಿಯಮಗಳು ಮಾಡಿರುವುದರಿಂದ ಈ ಅನಾಹುತ ತಪ್ಪಿದೆ.

ಹತ್ತು ಹಲವು ಅನರ್ಹರಿಗೆ ಸಂದು ವಿವಾದಕ್ಕೀಡಾಗಿದ್ದರೂ, ಗಣರಾಜ್ಯೋತ್ಸವದ ದಿನ ಹಂಚುವ ಪದ್ಮ ಪ್ರಶಸ್ತಿ ಇನ್ನೂ ತನ್ನ ಪ್ರತಿಷ್ಠೆಯನ್ನು ಉಳಿಸಿಕೊಂಡಿದೆ. ಪ್ರಶಸ್ತಿ ಹಂಚಿಕೆಯ ಸಂದರ್ಭದಲ್ಲಿ ರಾಜಕೀಯ ತನ್ನ ಪ್ರಭಾವವನ್ನು ಬೀರುತ್ತದೆಯಾದರೂ, ದೇಶದ ಮೂಲೆ ಮೂಲೆಯಲ್ಲಿರುವ ರಾಜಕೀಯೇತರ ಅರ್ಹ ಸಾಧಕರನ್ನು ಗುರುತಿಸುವ ಮೂಲಕ ಈ ಪ್ರಶಸ್ತಿ ತನ್ನ ಗುಣಮಟ್ಟವನ್ನು ಒಂದಿಷ್ಟು ಉಳಿಸಿಕೊಂಡಿದೆೆ. ಈ ದೇಶದ ಒಕ್ಕೂಟ ವ್ಯವಸ್ಥೆ ಯ ಹಿರಿಮೆಯನ್ನು ಸಾರುವ, ವೈವಿಧ್ಯತೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಪದ್ಮ ಪ್ರಶಸ್ತಿ ತನ್ನದೇ ರೀತಿಯಲ್ಲಿ ಕೆಲಸ ಮಾಡುತ್ತಾ ಬಂದಿದೆ. ಹರೇಕಳ ಹಾಜಬ್ಬರಂತಹ ಅನಕ್ಷರಸ್ಥ ಸಾಧಕರು ಕೂಡ ತಮ್ಮ ಸಾಧನೆಯ ಕಾರಣಕ್ಕಾಗಿಯೇ ಪ್ರಶಸ್ತಿಯನ್ನು ಪಡೆದು, ಅದರ ಗೌರವವನ್ನು ಹೆಚ್ಚಿಸಿದ್ದಾರೆ. ಈ ಹಿಂದೆ ಕರ್ನಾಟಕದ ಹಲವು ಅರ್ಹರಿಗೆ ಈ ಪ್ರಶಸ್ತಿ ಸಂದಿರುವುದರಿಂದ, ಈ ಬಾರಿ ಕರ್ನಾಟಕದ ಪ್ರಶಸ್ತಿ ಪುರಸ್ಕೃತರ ಬಗ್ಗೆ ಜನರಿಗೆ ಸಹಜ ಕುತೂಹಲವಿತ್ತು. ಆದರೆ ಪದ್ಮವಿಭೂಷಣ ಮತ್ತು ಪದ್ಮಭೂಷಣ ಪ್ರಶಸ್ತಿ ಪಡೆದವರ ಹೆಸರು ಪ್ರಕಟವಾಗುತ್ತಿದ್ದಂತೆಯೇ ಜನರ ಕುತೂಹಲ ಠುಸ್ ಆಯಿತು. ಇದ್ದುದರಲ್ಲಿ ಪದ್ಮ ಪ್ರಶಸ್ತಿ ಪಡೆದವರಲ್ಲಿ ಅರ್ಹ ಸಾಧಕರಿದ್ದುದು ಸಮಾಧಾನ ತರುವ ವಿಷಯ. ಪದ್ಮಭೂಷಣ ಮತ್ತು ಪದ್ಮವಿಭೂಷಣಗಳೆರಡೂ ಈ ಬಾರಿ ಕರ್ನಾಟಕದ ಇಬ್ಬರು ಬಿಜೆಪಿ ನಾಯಕರಿಗೆ ಸಂದಿದೆ. ಒಬ್ಬರು ತಮ್ಮ ರಾಜಕೀಯ ವರ್ಚಸ್ಸನ್ನು ಬಿಜೆಪಿಗೆ ಪಣವಾಗಿಟ್ಟುದಕ್ಕೆ ಪದ್ಮ ವಿಭೂಷಣ ಪ್ರಶಸ್ತಿ ಪಡೆದುಕೊಂಡಿದ್ದರೆ, ಇನ್ನೊಬ್ಬರು ತಮ್ಮ ಸಾಹಿತ್ಯ, ಬರಹಗಳನ್ನು ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತಕ್ಕೆ ಒಪ್ಪಿಸಿಕೊಂಡದಕ್ಕೆ ಪದ್ಮಭೂಷಣವನ್ನು ಪಡೆದುಕೊಂಡಿದ್ದಾರೆ.

ಹಿರಿಯ ರಾಜಕಾರಣಿ ಎಸ್. ಎಂ. ಕೃಷ್ಣ ರಿಗೆ ಈ ಬಾರಿಯ ಪದ್ಮ ವಿಭೂಷಣ ಪ್ರಶಸ್ತಿ ಸಂದಿದೆ. ಆದರೆ ಬಿಜೆಪಿಗೆ ಪಕ್ಷಾಂತರಗೊಂಡು ಅವರು ಕಳೆದುಕೊಂಡಿರುವುದಕ್ಕೆ ಹೋಲಿಸಿದರೆ, ಈ ಪ್ರಶಸ್ತಿ ಯಿಂದ ಅವರು ಪಡೆದುಕೊಳ್ಳುವುದೇನೂ ಇಲ್ಲ. ಯಾವ ಸಾಧನೆಗಾಗಿ ಎಸ್. ಎಂ. ಕೃಷ್ಣ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ ಎನ್ನುವ ಪ್ರಶ್ನೆಗೆ ಬಿಜೆಪಿಯ ನಾಯಕರ ಬಳಿಯೇ ಸ್ಪಷ್ಟ ಉತ್ತರವಿಲ್ಲ. ಕಾಂಗ್ರೆಸ್‌ನಲ್ಲಿದ್ದಾಗ, ಮುಖ್ಯಮಂತ್ರಿಯಾಗಿ ಅವರು ರಾಷ್ಟ್ರಮಟ್ಟದಲ್ಲಿ ಒಂದಿಷ್ಟು ಸುದ್ದಿಯಾಗಿದ್ದರು ಎನ್ನುವುದು ಸುಳ್ಳಲ್ಲ. ಆ ಸಂದರ್ಭದಲ್ಲಿ ಆಂಗ್ಲ ನಿಯತಕಾಲಿಕವೊಂದರಲ್ಲಿ ಮುಖಪುಟದ ಸುದ್ದಿಯಾಗಿದ್ದರು. ಕಾರ್ಪೊರೇಟ್ ಶಕ್ತಿ ತಮ್ಮ ಲಾಭಕ್ಕಾಗಿ ಕೃಷ್ಣ ಅವರನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡಿತು. ಕೃಷ್ಣ ಬೆಂಗಳೂರನ್ನು ಸಿಂಗಾಪುರ ಮಾಡುವ ಕನಸನ್ನು ಕಂಡವರು. ಅವರ ಪಾಲಿಗೆ ಕರ್ನಾಟಕವೆಂದರೆ ಬೆಂಗಳೂರಷ್ಟೇ ಆಗಿತ್ತು. ಅವರ ಆಡಳಿತದ ಕಾಲದಲ್ಲಿ ಬೆಂಗಳೂರು ನಗರದಲ್ಲಾದ ಅಧ್ವಾನಗಳ ಪರಿಣಾಮವನ್ನು ಇದೀಗ ಜನರು ಅನುಭವಿಸುತ್ತಿದ್ದಾರೆ. ಇಷ್ಟಾದರೂ, ವಿದೇಶದಲ್ಲಿ ಕಲಿತ, ಸುಶಿಕ್ಷಿತ, ಮುತ್ಸದ್ದಿ ರಾಜಕಾರಣಿಯಾಗಿ ಎಸ್.ಎಂ. ಕೃಷ್ಣ ಗುರುತಿಸಿಕೊಂಡವರು. ಆ ಕಾರಣಕ್ಕಾಗಿಯೇ ಯುಪಿಎ ಸರಕಾರದ ಅವಧಿಯಲ್ಲಿ ವಿದೇಶಾಂಗ ಸಚಿವರಾದರು. ಆದರೆ ಆ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸುವಲ್ಲಿ ಎಡವಟ್ಟು ಮಾಡಿಕೊಂಡರು. ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಹತ್ತು ಹಲವು ಉನ್ನತ ಸ್ಥಾನಗಳನ್ನು ಅಲಂಕರಿಸಿದ ಎಸ್. ಎಂ. ಕೃಷ್ಣ ರಾಜಕೀಯವಾಗಿ ನಿವೃತ್ತಿಯಾಗುವ ಹೊತ್ತಿನಲ್ಲಿ ಬಿಜೆಪಿ ಸೇರಿಕೊಂಡರು. ಬದುಕಿನುದ್ದಕ್ಕೂ ಗಳಿಸಿಕೊಂಡ ವರ್ಚಸ್ಸನ್ನು ಅವರು ಅತಿ ಸಣ್ಣ ಬೆಲೆಗೆ ಬಿಜೆಪಿಗೆ ಮಾರಿಬಿಟ್ಟರು.

ಎಸ್. ಎಂ. ಕೃಷ್ಣ ಅವರ ಆಗಮನವನ್ನು ರಾಜ್ಯ ಬಿಜೆಪಿ ಎಂದಿಗೂ ಗಂಭೀರವಾಗಿ ಸ್ವೀಕರಿಸಿರಲಿಲ್ಲ. ತನ್ನ ಮೇಲೆ ನಡೆಯಬಹುದಾಗಿದ್ದ ಐಟಿ ದಾಳಿಯಿಂದ ಬೆದರಿ ಅವರು ಬಿಜೆಪಿ ಸೇರಿದರು ಎಂದು ಬಿಜೆಪಿ ನಾಯಕರೇ ಸ್ವತಃ ನಂಬಿದ್ದಾರೆ. ಬಿಜೆಪಿ ಸೇರ್ಪಡೆಯ ಮೂಲಕ ತಮ್ಮ ವೈಯಕ್ತಿಕ ಬದುಕಿನ ದುರಂತದಿಂದ ಕೂಡ ಪಾರಾಗಲು ಅವರಿಗೆ ಅಸಾಧ್ಯವಾಯಿತು. ಅವರ ಅಳಿಯ ಸಿದ್ಧಾರ್ಥ ಅವರ ಆತ್ಮಹತ್ಯೆಗೂ ಎಸ್. ಎಂ. ಕೃಷ್ಣ ಅವರ ರಾಜಕೀಯ ಆತ್ಮಹತ್ಯೆಗೂ ದೊಡ್ಡ ವ್ಯತ್ಯಾಸವೇನೂ ಇಲ್ಲ. ರಾಜಕೀಯ ಬದುಕಿನ ಕಟ್ಟ ಕಡೆಯ ದಿನಗಳಲ್ಲಿ ‘ಸಮಯ ಸಾಧಕ ರಾಜಕಾರಣಿ’ ಎಂಬ ಬಿರುದು ಅವರನ್ನು ಅಂಟಿಕೊಂಡಿತು. ಪದ್ಮವಿಭೂಷಣ ಗೌರವದಿಂದ ಆ ಬಿರುದನ್ನು ಅಳಿಸಿ ಹಾಕಲು ಸಾಧ್ಯವಿಲ್ಲ. ಬದಲಿಗೆ, ಬಿಜೆಪಿ ಸೇರ್ಪಡೆಗೆ ಸಿಕ್ಕಿದ ಕೂಲಿಯಾಗಿ ಅವರು ಪದ್ಮವಿಭೂಷಣವನ್ನು ಪಡೆದುಕೊಂಡಿದ್ದಾರೆ ಎಂದು ಜನರು ಭಾವಿಸುವಂತಾಗಿದೆ.

ಇನ್ನು ಆರೆಸ್ಸೆಸ್‌ನ ಹಿರಿಯ ಚಿಂತಕ, ಕಾದಂಬರಿಕಾರ ಎಸ್. ಎಲ್. ಭೈರಪ್ಪರಂತೂ ತನಗೆ ಪದ್ಮಭೂಷಣ ಸಿಗುವುವುದರ ಹಿಂದಿನ ಕಾರಣವನ್ನು ಸ್ವತಃ ಬಹಿರಂಗ ಪಡಿಸಿದ್ದಾರೆ. ‘‘ಪ್ರಧಾನಿ ನರೇಂದ್ರ ಮೋದಿಯವರೇ ನನಗೆ ಪದ್ಮಭೂಷಣ ಸಿಗುವುದಕ್ಕೆ ಕಾರಣ’’ ಎನ್ನುವ ಮೂಲಕ ಅವರ ಅಪಾರ ಸಾಹಿತ್ಯಾಭಿಮಾನಿಗಳಲ್ಲಿ ಮುಜುಗರ ಸೃಷ್ಟಿಸಿದ್ದಾರೆ. ಕೇಂದ್ರ ಸರಕಾರದ ಬಲದಿಂದ ‘ರಾಷ್ಟ್ರೀಯ ಪ್ರೊಫೆಸರ್’ ಆಗಿ ಲಕ್ಷಾಂತರ ರೂಪಾಯಿಯನ್ನು ಜೇಬಿಗಿಳಿಸುತ್ತಾ ಬಂದಿದ್ದ ಎಸ್.ಎಲ್. ಭೈರಪ್ಪ ತಮ್ಮ ಸಾಹಿತ್ಯ, ಬರಹ ಮತ್ತು ಪತ್ರಿಕಾಗೋಷ್ಠಿಗಳ ಮೂಲಕ ಆರೆಸ್ಸೆಸ್, ಬ್ರಾಹ್ಮಣ್ಯವಾದ ಮತ್ತು ಬಿಜೆಪಿಗೆ ನೀಡಿದ ಕೊಡುಗೆಗೆ ಹೋಲಿಸಿದರೆ ಪದ್ಮಭೂಷಣ ಏನೇನೂ ಅಲ್ಲ. ಆದುದರಿಂದ, ತನಗೆ ಪ್ರಶಸ್ತಿ ಸಿಗಲು ಪ್ರಧಾನಿ ಮೋದಿ ಕಾರಣ ಎಂಬ ಅವರ ಮಾತು ಸರಿಯಾಗಿಯೇ ಇದೆ. ಜೊತೆಗೆ ತನ್ನ ಬರಹ, ಸಾಹಿತ್ಯಗಳ ಕುರಿತಂತೆ ಭೈರಪ್ಪ ಅವರಿಗೇ ಎಷ್ಟರಮಟ್ಟಿಗೆ ಕೀಳರಿಮೆಯಿದೆ ಎನ್ನುವುದನ್ನೂ ಇದು ಎತ್ತಿ ತೋರಿಸಿದೆ. ಆದುದರಿಂದ ಭೈರಪ್ಪರಿಗೆ ದೊರಕಿರುವ ಪದ್ಮಭೂಷಣದಿಂದ ಬಿಜೆಪಿ ಕಾರ್ಯಕರ್ತರು ಸಂತುಷ್ಟರಾಗಿದ್ದಾರೆಯೇ ಹೊರತು, ಕನ್ನಡದ ಸಾಹಿತ್ಯಾಭಿಮಾನಿಗಳಿಗೆ ಅದು ಯಾವ ಸಂಭ್ರಮವನ್ನೂ ನೀಡಿಲ್ಲ.

ಉಳಿದಂತೆ ಪದ್ಮ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ಹಲವು ಸಾಧಕರು ಕರ್ನಾಟಕದ ಹೆಸರನ್ನು ದಿಲ್ಲಿಯವರೆಗೆ ತಲುಪಿಸಿದ್ದಾರೆ. ಮುನಿ ವೆಂಕಟಪ್ಪ, ಖಾದರ್ ವಲ್ಲಿ, ರಶೀದ್ ಅಹ್ಮದ್ ಖಾದ್ರಿ, ರಾಣಿ ಮಾಚಯ್ಯ, ಎಸ್. ಸುಬ್ಬರಾಮನ್ ಇವರೆಲ್ಲರೂ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವುದು ಪ್ರಧಾನಿ ಮೋದಿಯ ಕಾರಣದಿಂದಲ್ಲ, ತಮ್ಮ ಸಾಧನೆಗಳ ಕಾರಣದಿಂದ. ಆದುದರಿಂದಲೇ ಅವರು ಕರ್ನಾಟಕದ ಹಿರಿಮೆಯನ್ನು, ಪ್ರಶಸ್ತಿಯ ಹಿರಿಮೆಯನ್ನು ಏಕಕಾಲದಲ್ಲಿ ಹೆಚ್ಚಿಸಿದ್ದಾರೆ.

Similar News