ಬೆಂಗಳೂರು: ವಿಮಾನ ಪ್ರಯಾಣಿಕರ ಚೀಲದಲ್ಲಿ ಹೆಬ್ಬಾವು!

Update: 2023-01-28 07:04 GMT

ಬೆಂಗಳೂರು: ಬ್ಯಾಂಕಾಕ್‌ನಿಂದ ವನ್ಯಜೀವಿಗಳನ್ನು ಕಳ್ಳಸಾಗಣೆ ಮಾಡುವ ಪ್ರಕರಣವೊಂದನ್ನು ಬೇಧಿಸಿದ ಪೊಲೀಸರು ಮೂವರು ಪ್ರಯಾಣಿಕರನ್ನು ಬಂಧಿಸಿ, ಹೆಬ್ಬಾವು ಸೇರಿದಂತೆ 14 ಸರೀಸೃಪಗಳು ಹಾಗೂ ನಾಲ್ಕು ಸಸ್ತನಿಗಳನ್ನು ವಶಪಡಿಸಿಕೊಂಡಿರುವ ಘಟನೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ವಶಪಡಿಸಿಕೊಂಡ ವನ್ಯಜೀವಿಗಳನ್ನು ಕರ್ನಾಟಕ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಎಲ್ಲವೂ ಸುರಕ್ಷಿತ ಹಾಗೂ ಸುಭದ್ರವಾಗಿವೆ ಎಂದು ಹೇಳಲಾಗಿದೆ. ಘಟನೆ ಬಗ್ಗೆ ತನಿಖೆ ಮುಂದುವರಿಸಿದ ಪೊಲೀಸರು ಬೆಂಗಳೂರಿನ ಹೊರವಲಯದ ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿ, ಈ ಹಿಂದೆ ಕಳ್ಳಸಾಗಾಣಿಕೆ ಮೂಲಕ ತಂದ ಅನಕೊಂಡ, ಮಂಗಗಳು, ವಿವಿಧ ಪ್ರಬೇಧಗಳ ಹಕ್ಕಿಗಳು ಸೇರಿದಂತೆ 139 ವನ್ಯ ಪ್ರಾಣಿ ಪಕ್ಷಿಗಳನ್ನು ವಶಪಡಿಸಿಕೊಂಡಿದ್ದಾರೆ.

ಥಾಯ್ಲೆಂಡ್ ರಾಜಧಾನಿಯಿಂದ ಬಂದ ವಿಮಾನದಲ್ಲಿದ್ದ ಮಹಿಳೆ ಮತ್ತು ಮೂವರು ಪ್ರಯಾಣಿಕರನ್ನು ತಪಾಸಣೆಗೆ ಗುರಿಪಡಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಆಧಾರದಲ್ಲಿ ಡಿಆರ್‌ಐ ಬೆಂಗಳೂರು ಘಟಕದ ಸಿಬ್ಬಂದಿ ಕ್ರಮ ಕೈಗೊಂಡು, ನಾಲ್ಕು ಸಸ್ತನಿಗಳು ಹಾಗೂ ಆರು ಹೆಬ್ಬಾವು ಸೇರಿದಂತೆ 14 ಹಾವುಗಳನ್ನು ವಶಪಡಿಸಿಕೊಂಡರು. ಇವುಗಳನ್ನು ಚೆಕ್ ಇನ್ ಬ್ಯಾಗ್‌ನಲ್ಲಿ ಹುದುಗಿಸಿಡಲಾಗಿತ್ತು.

ಡಿಆರ್‌ಐ ತಂಡ ತಕ್ಷಣ ಕಳ್ಳಸಾಗಾಣಿಕೆದಾರರನ್ನು ಬಂಧಿಸಿತು ಹಾಗೂ ಬಳಿಕ ರಾಜ್ಯ ಅರಣ್ಯ ಇಲಾಖೆಯ ನೆರವಿನಿಂದ ವನ್ಯಜೀವಿಗಳನ್ನು ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್‌ಗೆ ಸುರಕ್ಷಿತವಾಗಿ ಸಾಗಿಸಲಾಯಿತು.

Similar News