ಗಾಂಧಿ ಇಂದಿಗೂ ಮುಖ್ಯರಾಗಲು 10 ಕಾರಣಗಳು

Update: 2023-06-30 05:56 GMT

ನಾನು ಇಲ್ಲಿ ವಿವರಿಸಿರುವ ಗಾಂಧಿ ಯವರ ಜೀವನ ಪಾಠಗಳು ಈ ದೇಶಕ್ಕೆ ಮಾತ್ರವೇ ಪ್ರಸ್ತುತವಾಗಬೇಕಿಲ್ಲ. ಆದಾಗ್ಯೂ, ಆಕ್ರಮಣಕಾರಿ ಧಾರ್ಮಿಕ ಬಹುಮತ, ಆಕ್ರಮಣಶೀಲ ಮತ್ತು ನಿಂದನೆಯ ರಾಜಕೀಯ ಸಂಸ್ಕೃತಿ, ನಾಯಕರು ಮತ್ತು ಸರಕಾರಗಳಿಂದ ಸುಳ್ಳು ಮತ್ತು ಅಸತ್ಯಗಳ ಶುದ್ಧೀಕರಣ, ನೈಸರ್ಗಿಕ ಪರಿಸರವನ್ನು ಹಾಳುಮಾಡುವುದು ಮತ್ತು ವ್ಯಕ್ತಿತ್ವ ಆರಾಧನೆಗಳ ಸೃಷ್ಟಿಯ ವಾತಾವರಣದಲ್ಲಿ, ಈ ಪಾಠಗಳು ಎಲ್ಲೆಡೆಗಿಂತಲೂ ಹೆಚ್ಚಾಗಿ ಭಾರತದಲ್ಲಿ ಪ್ರಸಕ್ತ.

ಮುಂದಿನ ವಾರ ನಾವು ಮಹಾತ್ಮ ಗಾಂಧಿ ಹುತಾತ್ಮರಾದ ಎಪ್ಪತ್ತೈದನೇ ವಾರ್ಷಿಕೋತ್ಸವವನ್ನು ಆಚರಿಸುತ್ತೇವೆ. ಅವರ ಮರಣವಾಗಿ ಇಷ್ಟು ಕಾಲದ ನಂತರ, ಗಾಂಧಿ ಇನ್ನೂ ಮುಖ್ಯರೇ? ಅವರು ಮುಖ್ಯರಾಗಬೇಕೇ? ಈ ಅಂಕಣದಲ್ಲಿ, 21ನೇ ಶತಮಾನದ ಮೂರನೇ ದಶಕದಲ್ಲಿ ಗಾಂಧಿ, ಅವರ ಜೀವನ ಮತ್ತು ಆಲೋಚನೆಗಳು ಇಂದಿಗೂ ಮುಖ್ಯವಾಗಿರುವುದಕ್ಕೆ ಹತ್ತು ಪ್ರಮುಖ ಕಾರಣಗಳನ್ನು ನಾನು ನೀಡುತ್ತೇನೆ.

ಗಾಂಧಿಯವರು ಮುಖ್ಯರಾಗಲು ಮೊದಲ ಕಾರಣವೆಂದರೆ, ಅವರು ಭಾರತ ಮತ್ತು ಜಗತ್ತಿಗೆ ಬಲವನ್ನು ಬಳಸದೆ ಅನ್ಯಾಯದ ಅಧಿಕಾರವನ್ನು ವಿರೋಧಿಸುವು ದನ್ನು ತೋರಿಸಿಕೊಟ್ಟರು. ಕುತೂಹಲಕಾರಿಯೆಂದರೆ, ಸತ್ಯಾಗ್ರಹದ ಕಲ್ಪನೆಯು ಗಾಂಧಿಯವರ ನೇತೃತ್ವದಲ್ಲಿ ಭಾರತೀಯರು ಜನಾಂಗೀಯ ತಾರತಮ್ಯ ಕಾನೂನು 
ಗಳ ವಿರುದ್ಧ ಪ್ರತಿಭಟಿಸಿ ನ್ಯಾಯಾಲಯದ ಬಂಧನದಲ್ಲಿದ್ದಾಗ 1906ರ ಸೆಪ್ಟಂಬರ್ 9ರಂದು ಜೋಹಾನ್ಸ್ ಬರ್ಗ್‌ನ ಎಂಪೈರ್ ಥಿಯೇಟರ್‌ನಲ್ಲಿ ನಡೆದ ಸಭೆಯಲ್ಲಿ ಹುಟ್ಟಿತು. ತೊಂಬತ್ತೈದು ವರ್ಷಗಳ ನಂತರ, ವಿಶ್ವ ವ್ಯಾಪಾರ ಕೇಂದ್ರವನ್ನು ಭಯೋತ್ಪಾದಕರು ಸ್ಫೋಟಿಸಿದರು. ಎರಡು 9/11’ಗಳು: ಒಂದು ಅಹಿಂಸಾತ್ಮಕ ಹೋರಾಟ ಮತ್ತು ವೈಯಕ್ತಿಕ ತ್ಯಾಗದ ಮೂಲಕ ನ್ಯಾಯವನ್ನು ಹುಡುಕುವುದು; ಇನ್ನೊಂದು ಭಯೋತ್ಪಾದನೆ ಮತ್ತು ಬಲದ ಮೂಲಕ ಶತ್ರುವನ್ನು ಬೆದರಿಸಲು ಪ್ರಯತ್ನಿಸುವುದು. ಇತಿಹಾಸವು ತೋರಿಸಿದಂತೆ, ಅನ್ಯಾಯದ ವಿರುದ್ಧದ ಪ್ರತಿಭಟನೆಯ ರೂಪವಾಗಿ ಸತ್ಯಾಗ್ರಹವು ಹೆಚ್ಚು ನೈತಿಕವಾಗಿದೆ, ಜೊತೆಗೆ ಪರ್ಯಾಯಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ದಕ್ಷಿಣ ಆಫ್ರಿಕಾ ಮತ್ತು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಅದರ ಮೊದಲ ಪುನರಾವರ್ತನೆಗಳ ನಂತರ, ಗಾಂಧಿಯವರ ವಿಧಾನವು ಅನೇಕ ಗಮನಾರ್ಹ ಅನುಸರಣೆಗಳನ್ನು ಕಂಡಿದೆ. ಮುಖ್ಯವಾಗಿ, ಬಹುಶಃ ಅಮೆರಿಕದಲ್ಲ್‌ನ ನಾಗರಿಕ ಹಕ್ಕುಗಳ ಹೋರಾಟ.

ಗಾಂಧಿಯವರು ಮುಖ್ಯರಾಗುವುದರ ಎರಡನೆಯ ಕಾರಣವೆಂದರೆ, ಅವರು ತಮ್ಮ ದೇಶ ಮತ್ತು ಸಂಸ್ಕೃತಿಯನ್ನು ಪ್ರೀತಿಸುತ್ತಿದ್ದರು. ಅದರ ವಿಕಾರ ಗುಣಗಳನ್ನು ಗುರುತಿಸಿ ಅವುಗಳನ್ನು ನಿವಾರಿಸಲು ಪ್ರಯತ್ನಿಸಿದರು. ಇತಿಹಾಸಕಾರ ಸುನಿಲ್ ಖಿಲ್ನಾನಿ ಒಮ್ಮೆ ಗಮನಿಸಿದಂತೆ, ಗಾಂಧಿ ಕೇವಲ ಬ್ರಿಟಿಷರೊಂದಿಗೆ ಹೋರಾಡಲಿಲ್ಲ. 
ಅವರು ಭಾರತದ ವಿರುದ್ಧವೂ ಹೋರಾಡುತ್ತಿದ್ದರು. ಅವರು ತಮ್ಮ ಸಮಾಜ, ನಮ್ಮ ಸಮಾಜ ಆಳವಾದ ಮತ್ತು ವ್ಯಾಪಕವಾದ ಅಸಮಾನತೆಯಿಂದ ರೂಪಿತವಾಗಿ ರುವುದನ್ನು ತಿಳಿದಿದ್ದರು. ಅಸ್ಪಶ್ಯತೆ ವಿರುದ್ಧದ ಅವರ ಹೋರಾಟವು ನಿಜವಾದ ಸ್ವಾತಂತ್ರ್ಯಕ್ಕಾಗಿ ಭಾರತೀಯರನ್ನು ಹೆಚ್ಚು ಯೋಗ್ಯರನ್ನಾಗಿ ಮಾಡುವ ಹಂಬಲ ದಿಂದ ಹೊಮ್ಮಿದ್ದಾಗಿತ್ತು. ಅವರು ಸಂಪೂರ್ಣವಾಗಿ ಸ್ತ್ರೀವಾದಿಯಾಗಿರದಿದ್ದರೂ, ಮಹಿಳೆಯರನ್ನು ಸಾರ್ವಜನಿಕ ಜೀವನಕ್ಕೆ ತರಲು ಸಾಕಷ್ಟು ಶ್ರಮಿಸಿದರು.

ಗಾಂಧಿಯವರು ಮುಖ್ಯರಾಗಲು ಮೂರನೇ ಕಾರಣವೆಂದರೆ, ಹಿಂದೂ ಧರ್ಮವನ್ನು ಅನುಸರಿಸುವಾಗ, ಅವರು ನಂಬಿಕೆಯ ಆಧಾರದ ಮೇಲೆ ಪೌರತ್ವವನ್ನು ವ್ಯಾಖ್ಯಾನಿಸಲು ನಿರಾಕರಿಸಿದರು. ಜಾತಿಯು ಹಿಂದೂಗಳನ್ನು ಅಡ್ಡಲಾಗಿ ವಿಭಜಿಸಿದರೆ, ಧರ್ಮವು ಭಾರತವನ್ನು ಲಂಬವಾಗಿ ವಿಭಜಿಸಿತು. ಈ ಲಂಬವಾದ ಮತ್ತು ಆಗಾಗ್ಗೆ ಚಾರಿತ್ರಿಕವಾಗಿ ವಿರುದ್ಧವಿದ್ದ ಬಣಗಳ ನಡುವೆ ಸೇತುವೆಗಳನ್ನು ನಿರ್ಮಿಸಲು ಗಾಂಧಿ ಹೆಣಗಾಡಿದರು. ಹಿಂದೂ-ಮುಸ್ಲಿಮ್ ಸಾಮರಸ್ಯದ ಅನ್ವೇಷಣೆಯು ನಿರಂತರ ಕಾಳಜಿಯಾಗಿತ್ತು; ಅವರು ಅದಕ್ಕಾಗಿ ಬದುಕಿದರು ಮತ್ತು ಕೊನೆಯಲ್ಲಿ ಅದಕ್ಕಾಗಿ ಸಾಯುವುದಕ್ಕೂ ಸಿದ್ಧರಾದರು.

ಗಾಂಧಿಯವರು ಮುಖ್ಯರಾಗಲು ನಾಲ್ಕನೇ ಕಾರಣವೆಂದರೆ, ಅಪ್ಪಟ ಗುಜರಾತಿ ಸಂಸ್ಕೃತಿಯವರಾಗಿ, ಗುಜರಾತಿ ಆಡುಭಾಷೆಯನ್ನು ಒಪ್ಪಿಕೊಂಡಿದ್ದರೂ, ಅವರು ಸಂಕುಚಿತ ಮನೋಭಾವದ ಪ್ರಾದೇಶಿಕವಾದಿಯಾಗಿರಲಿಲ್ಲ. ತಮ್ಮದಲ್ಲದ ಇತರ ಧರ್ಮಗಳ ಬಗ್ಗೆ ತಮ್ಮೊಳಗೆ ನೆಲೆ ಮತ್ತು ಪ್ರೀತಿಯನ್ನು ಹೊಂದಿದ್ದ ರೀತಿಯಲ್ಲಿಯೇ ಅವರು ತಮ್ಮದಲ್ಲದ ಭಾಷೆಗಳ ಬಗ್ಗೆಯೂ ನೆಲೆ ಮತ್ತು ಪ್ರೀತಿಯುಳ್ಳವರಾಗಿದ್ದರು. ಭಾರತದ ಧಾರ್ಮಿಕ ಮತ್ತು ಭಾಷಾ ವೈವಿಧ್ಯತೆಯ ಬಗ್ಗೆ ಅವರ ತಿಳುವಳಿಕೆಯು ವಿದೇಶದಲ್ಲಿದ್ದಾಗಿನ ಹಲವು ವರ್ಷಗಳಲ್ಲಿ ಗಾಢವಾಯಿತು. ಅವರ ಹತ್ತಿರದ ಒಡನಾಡಿಗಳು ಹಿಂದೂಗಳಂತೆಯೇ ಮುಸ್ಲಿಮರು ಅಥವಾ ಪಾರ್ಸಿಗಳಾಗಿದ್ದರು ಮತ್ತು ಅವರು ಗುಜರಾತಿಗಳಂತೆ ತಮಿಳು ಮಾತನಾಡುವವರೂ ಆಗಿದ್ದರು.

ಗಾಂಧಿ ಮುಖ್ಯರಾಗುವುದಕ್ಕೆ ಐದನೇ ಕಾರಣವೆಂದರೆ, ಅವರು ದೇಶಪ್ರೇಮಿ ಮತ್ತು ಅಂತರ್‌ರಾಷ್ಟ್ರೀಯವಾದಿಯಾಗಿದ್ದರು. ಅವರು ಭಾರತೀಯ ನಾಗರಿಕತೆಯ 
ಶ್ರೀಮಂತಿಕೆ ಮತ್ತು ಪರಂಪರೆಯನ್ನು ಗೌರವಿಸುತ್ತಿದ್ದರೂ, 20ನೇ ಶತಮಾನದಲ್ಲಿ ಯಾವುದೇ ದೇಶವು ಬಾವಿಯ ಕಪ್ಪೆಯಾಗಿರಲು ಸಾಧ್ಯವಿಲ್ಲ ಎಂದು ತಿಳಿದಿದ್ದರು. ಒಬ್ಬನು ತನ್ನನ್ನು ಇನ್ನೊಬ್ಬರ ಕನ್ನಡಿಯಲ್ಲಿ ನೋಡಿಕೊಳ್ಳುವುದರ ಮಹತ್ವ ಗೊತ್ತಿತ್ತು. ಅವರು ಭಾರತೀಯತೆಯಿಂದ ಪ್ರಭಾವಿತರಾದಷ್ಟೇ ಪಾಶ್ಚಿಮಾತ್ಯದಿಂದಲೂ ಆಗಿದ್ದರು. ಅವರ ತಾತ್ವಿಕ ಮತ್ತು ರಾಜಕೀಯ ದೃಷ್ಟಿಕೋನವು ಗೋಖಲೆ ಮತ್ತು ರಾಯ್‌ಚಂದ್‌ಭಾಯಿಯಿಂದ ರೂಪಿತವಾದಂತೆ ಟಾಲ್ಸ್‌ಟಾಯ್ ಮತ್ತು ರಸ್ಕಿನ್ 
ಅವರಿಂದಲೂ ರೂಪುಗೊಂಡಿತ್ತು. ಅವರ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ನಿರ್ಣಾಯಕ ಪಾತ್ರಗಳನ್ನು ನಿರ್ವಹಿಸಿದ್ದ ಹೆನ್ರಿ ಮತ್ತು ಮಿಲ್ಲಿ ಪೋಲಾಕ್, ಹರ್ಮನ್ ಕಲ್ಲೆನ್ಬಾಚ್ ಮತ್ತು ಸಿ.ಎಫ್.ಆಂಡ್ರ್ಯೂಸ್ ಇವರೆಲ್ಲರೊಡನೆ ಮತ್ತು ಬೇರೆ ಜನಾಂಗದ ಇತರರೊಡನೆ ಅವರಿಗೆ ಆಳವಾದ ಸ್ನೇಹವಿತ್ತು.
ನಾನು ಇಲ್ಲಿಗೆ ನಿಲ್ಲುತ್ತೇನೆ ಮತ್ತು ಗಾಂಧಿಯವರ ಪರಂಪರೆಯ ಈ ಐದು ಅಂಶಗಳಿಲ್ಲದೆ, ಸ್ವತಂತ್ರ ಭಾರತವು ವಾಸ್ತವವಾಗಿ ಮಾಡಿದ್ದಕ್ಕಿಂತ ಸಂಪೂರ್ಣ ವಿಭಿನ್ನವಾದ ಮಾರ್ಗವನ್ನು ಹೇಗೆ ಆರಿಸಿಕೊಂಡಿರಬಹುದು ಎಂಬುದನ್ನು ವಿವರಿಸು ತ್ತೇನೆ. ಗಾಂಧಿಯವರು ಸಂವಾದದ ಪರವಾಗಿ ಹಿಂಸಾಚಾರವನ್ನು ತ್ಯಜಿಸಿದ ಕಾರಣ, ಇದು ನಮಗೆ, ಏಕ-ಪಕ್ಷದ ನಿರಂಕುಶ ರಾಜ್ಯವಾಗುವ (ನಿರ್ದಿಷ್ಟ ರಾಷ್ಟ್ರೀಯ ಪ್ರಜ್ಞೆಯನ್ನುಳ್ಳವರ ಗುಂಪು, ತಮ್ಮದೇ ರಾಜ್ಯವನ್ನು ರೂಪಿಸಲು ಮತ್ತು ಸರಕಾರವನ್ನು ಆಯ್ಕೆ ಮಾಡಲು ಹಿಂಸಾತ್ಮಕ ಮಾರ್ಗವನ್ನು ಆರಿಸಿದ್ದ ಬಹುಪಾಲು ಏಶ್ಯದ ಮತ್ತು ಆಫ್ರಿಕನ್ ದೇಶಗಳ ಹಣೆಬರಹ) ಬದಲು ಬಹು-ಪಕ್ಷದ ಪ್ರಜಾ 

ಪ್ರಭುತ್ವವಾಗಿ ಹೊರಹೊಮ್ಮಲು ನೆರವಾಯಿತು. ಗಾಂಧಿ ಮತ್ತು ಬಿ.ಆರ್. ಅಂಬೇಡ್ಕರ್ ಅವರಂತಹವರು ಲಿಂಗ ಮತ್ತು ಜಾತಿ ಸಮಾನತೆಗೆ ಒತ್ತು ನೀಡಿದ್ದ ರಿಂದ, ಈ ತತ್ವಗಳನ್ನು ನಮ್ಮ ಸಂವಿಧಾನದಲ್ಲಿ ಸಂಹಿತೆಯಾಗಿ ಮಾಡಲಾಗಿದೆ. ಗಾಂಧಿ ಮತ್ತು ಜವಾಹರಲಾಲ್ ನೆಹರೂ ಅವರಂತಹವರು ಧಾರ್ಮಿಕ ಮತ್ತು ಭಾಷಾ ಸ್ವಾತಂತ್ರ್ಯವನ್ನು ಒತ್ತಿಹೇಳಿದ್ದರಿಂದ, ಭಾರತವು ಇತರ ಹಲವು ದೇಶಗಳಿಗಿಂತ ಭಿನ್ನವಾಗಿ, ಒಂದೇ ಶ್ರೇಷ್ಠ ಧರ್ಮ ಮತ್ತು ಒಂದೇ ಶ್ರೇಷ್ಠ ಭಾಷೆಯ ಆಧಾರದ ಮೇಲೆ ಪೌರತ್ವವನ್ನು ವ್ಯಾಖ್ಯಾನಿಸಲಿಲ್ಲ.

ಅಂಬೇಡ್ಕರ್ ಮತ್ತು ನೆಹರೂ ಅವರ ಮಾತುಗಳು ಸೂಚಿಸುವಂತೆ, ಪ್ರಜಾಪ್ರಭುತ್ವ ಮತ್ತು ಅಂತರ್ಗತ ರಾಜಕೀಯ ನೀತಿಯೊಂದಿಗೆ ಸ್ವತಂತ್ರ ಭಾರತದ ಸೃಷ್ಟಿಗೆ ಗಾಂಧಿ ಮಾತ್ರ ಕೊಡುಗೆ ನೀಡಿದ್ದಾರೆ ಎಂದು ನಾನು ಒಂದು ಕ್ಷಣವೂ ಭಾವಿಸಲಾರೆ. ಆದಾಗ್ಯೂ, ಅವರು ತಮ್ಮ ನಾಯಕತ್ವ ಮತ್ತು ಪ್ರಜಾಪ್ರಭುತ್ವ, ಸಾಂಸ್ಕೃತಿಕ ಬಹುತ್ವ ಮತ್ತು ಸಾಮಾಜಿಕ ಸಮಾನತೆಗೆ ಪುನರಾವರ್ತಿತ ಒತ್ತು ನೀಡುವ ಮೂಲಕ ನಿರ್ಣಾಯಕ ಪಾತ್ರವನ್ನು ವಹಿಸಿದರು.

ಗಾಂಧಿಯವರು ಮುಖ್ಯರಾಗಲು ಆರನೇ ಕಾರಣವೆಂದರೆ, ಅವರು ಮೂಲತಃ ಪರಿಸರವಾದಿಯಾಗಿದ್ದರು. ಕಡಿವಾಣವಿಲ್ಲದ ಬೆಳವಣಿಗೆ ಮತ್ತು ಗ್ರಾಹಕೀಕರಣವು ಭೂಮಿಯಲ್ಲಿ ದುರಂತವನ್ನು ತರಬಹುದು ಎಂದು ಅರಿತಿದ್ದರು. ಅವರು ಡಿಸೆಂಬರ್ 1928ರಲ್ಲಿ ಬರೆದಂತೆ: ‘ಭಾರತವು ಪಾಶ್ಚಿಮಾತ್ಯರ ರೀತಿಯಲ್ಲಿ ಕೈಗಾರಿಕೀಕರಣಕ್ಕೆ ಹೋಗುವುದನ್ನು ದೇವರು ಒಪ್ಪಲಾರ. ಒಂದೇ ಒಂದು ಸಣ್ಣ ದ್ವೀಪ ಸಾಮ್ರಾಜ್ಯದ (ಇಂಗ್ಲೆಂಡ್) ಆರ್ಥಿಕ ಸಾಮ್ರಾಜ್ಯಶಾಹಿ ಇಂದು ಜಗತ್ತನ್ನು ಸಂಕೋಲೆಯಲ್ಲಿ ಇರಿಸುತ್ತಿದೆ. 300 ಮಿಲಿಯನ್ ಜನಸಂಖ್ಯೆಯ ಇಡೀ ರಾಷ್ಟ್ರವು ಇದೇ ರೀತಿಯ ಆರ್ಥಿಕ ಶೋಷಣೆಗೆ ಮುಂದಾದರೆ ಅದು ಜಗತ್ತನ್ನು ಮಿಡತೆ ಗಳಂತೆ ಬಿಚ್ಚಿಡುತ್ತದೆ’. ಇದು ಮುಂದಾಗುವುದರ ಕುರಿತ ಅಸಾಧಾರಣ ತಿಳುವಳಿಕೆ ಯಾಗಿತ್ತು, ಏಕೆಂದರೆ ಅತಿ ಬಂಡವಾಳ, ಅತಿ ಸಂಪನ್ಮೂಲ ಮತ್ತು ಅತಿ ಶಕ್ತಿಯನ್ನು ಬೇಡುವ ಪಶ್ಚಿಮದಿಂದ ಪ್ರವರ್ತಿತ ಕೈಗಾರಿಕೀಕರಣದ ಅನುಸರಣೆಯಲ್ಲಿ, ಚೀನಾ ಮತ್ತು ಭಾರತ ನಿಜವಾಗಿಯೂ ಜಗತ್ತನ್ನು ಮಿಡತೆಗಳಂತೆ ಬೆತ್ತಲಾಗಿಸುವ ಬೆದರಿಕೆಯೊಡ್ಡಿವೆ. ಗಾಂಧಿ ತಮ್ಮ ಜೀವನದಲ್ಲಿ ಮತ್ತು ಕೆಲಸದಲ್ಲಿ ಸಂಯಮ ಮತ್ತು ಜವಾಬ್ದಾರಿಯ ನೀತಿಯನ್ನು ಪ್ರತಿಪಾದಿಸಿದರು. ನಮ್ಮ ಭೂಮಿಯ ಭವಿಷ್ಯವು ಅವರನ್ನು ವ್ಯಾಪಕವಾಗಿ ಒಪ್ಪಿಕೊಳ್ಳುವಲ್ಲಿದೆ.

ಗಾಂಧಿ ಮುಖ್ಯರಾಗಲು ಏಳನೇ ಕಾರಣವೆಂದರೆ, ಅವರು ಹೊಸ ಮುಖಾ ಮುಖಿಗಳು ಮತ್ತು ಹೊಸ ಅನುಭವಗಳನ್ನು ಹೊಂದಿದ್ದರಿಂದ ಅವರಿಗಿದ್ದ ಬೆಳೆಯುವ ಮತ್ತು ವಿಕಸನಗೊಳ್ಳುವ ಸಾಮರ್ಥ್ಯ. ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್‌ಅವರದ್ದೆಂದು ಪ್ರಾಯಶಃ ತಪ್ಪಾಗಿ ಹೇಳಲಾದ ಪ್ರಸಿದ್ಧ ಉಲ್ಲೇಖವು ಹೀಗಿದೆ: ‘ಸತ್ಯಗಳು ಬದಲಾದಾಗ, ನಾನು ನನ್ನ ಮನಸ್ಸನ್ನು ಬದಲಾಯಿಸು ತ್ತೇನೆ ಮತ್ತು ನೀವು ಹೇಗೆ, ಸರ್?’ ಆದರೆ ನಿಜವಾಗಿ 1934ರಲ್ಲಿ ಗಾಂಧಿಯವರು ಹೇಳಿದ್ದ ಮಾತೊಂದು ಹೀಗಿತ್ತು: ‘ನಾನು ಸ್ಥಿರತೆಯ ಹಾಬ್‌ಗೋಬ್ಲಿನ್ ಅನ್ನು ಮಾಡುವುದಿಲ್ಲ. ನಾನು ಕ್ಷಣದಿಂದ ಕ್ಷಣಕ್ಕೆ ನನಗೆ ನಿಜವಾಗಿದ್ದರೆ, ನನಗೆ ಎದುರಾಗಬಹುದಾದ ಯಾವುದೇ ಅಸಂಗತತೆಗಳನ್ನು ನಾನು ಲೆಕ್ಕಿಸುವುದಿಲ್ಲ.’
ತಮ್ಮ ಜೀವನದ ಅವಧಿಯಲ್ಲಿ ಗಾಂಧಿಯವರು ನಿರ್ದಿಷ್ಟವಾಗಿ ಮೂರು ನಿರ್ಣಾಯಕ ವಿಷಯಗಳ ಬಗ್ಗೆ ತಮ್ಮ ಮನಸ್ಸನ್ನು ಬದಲಿಸಿದರು. ಇವು ಜನಾಂಗ, ಜಾತಿ ಮತ್ತು ಲಿಂಗ. ಇವುಗಳ ವಿಚಾರದಲ್ಲಿ ಹೆಚ್ಚು ಪ್ರಗತಿಪರವಾಗಲು ಅವರು ತಮ್ಮ ಯೌವನ ಕಾಲದ ಪೂರ್ವಗ್ರಹಗಳನ್ನು ತೊಡೆದುಕೊಂಡರು. ವಿವೇಚನೆಯಿರದ ಜಾತಿವಾದಿಯಾಗಿದ್ದವರು ವರ್ಣಭೇದದ ವಿರೋಧಿಯಾದರು. ಜಾತಿ ಶ್ರೇಣಿಗಳನ್ನು ಭಯ ಮತ್ತು ಹಿಂಜರಿಕೆಯಿಂದಲೇ ಪ್ರಶ್ನಿಸುತ್ತಿದ್ದವರು ನೇರವಾಗಿ ಮುಚ್ಚು ಮರೆಯಿಲ್ಲದೆ ಎದುರಿಸಿದರು. ಮಹಿಳೆಯರು ರಾಜಕೀಯದಲ್ಲಿ ಸಲ್ಲುವವರಲ್ಲ ಎಂದುಕೊಂಡಿದ್ದವರು ಸಾರ್ವಜನಿಕ ಕ್ಷೇತ್ರದಲ್ಲಿ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಿದರು.
ಗಾಂಧಿ ಮುಖ್ಯರಾಗಲು ಎಂಟನೇ ಕಾರಣವೆಂದರೆ, ಅವರು ಅನುಯಾಯಿ ಗಳನ್ನೇ ನಾಯಕರನ್ನಾಗಿಸಬಲ್ಲ ಅಪರೂಪದ ಕೌಶಲ್ಯವನ್ನು ಹೊಂದಿದ್ದರು. ಅವರು ಪ್ರತಿಭೆಯನ್ನು ಗುರುತಿಸುತ್ತಿದ್ದರು, ಅದನ್ನು ಪೋಷಿಸುತ್ತಿದ್ದರು ಮತ್ತು ಬೆಳೆಸುತ್ತಿದ್ದರು. ನಂತರ ಸ್ವತಂತ್ರವಾಗಿ ಬೆಳೆಯಲು ಬಿಡುತ್ತಿದ್ದರು. ಅವರ ಬಳಿಗೆ ಬಂದ ಅನೇಕ ಶಿಷ್ಯರು ಅವರದೇ ಆದ ಬಗೆಯಲ್ಲಿ ಇತಿಹಾಸದ ಪ್ರಮುಖ ನಿರ್ಮಾ ಪಕರುಗಳಾದರು. ಜವಾಹರಲಾಲ್ ನೆಹರೂ, ವಲ್ಲಭಭಾಯಿ ಪಟೇಲ್, ಕಮಲಾದೇವಿ ಚಟ್ಟೋಪಾಧ್ಯಾಯ, ಸಿ.ರಾಜಗೋಪಾಲಾಚಾರಿ, ಝಾಕೀರ್ ಹುಸೇನ್, ಜೆ.ಬಿ.ಕೃಪಲಾನಿ, ಜೆ.ಸಿ.ಕುಮಾರಪ್ಪ, ಸರಳಾದೇವಿ (ಕ್ಯಾಥರೀನ್ ಮೇರಿ ಹೀಲ್ಮನ್) ಮತ್ತು ಇನ್ನೂ ಅನೇಕರು ಅನುಯಾಯಿ ಗಳಾಗಿದ್ದು ನಾಯಕರಾದವರಲ್ಲಿ ಗಮನಾರ್ಹರು.

ಭವಿಷ್ಯದ ನಾಯಕರನ್ನು ಬೆಳೆಸುವ ಗಾಂಧಿಯವರ ಸಾಮರ್ಥ್ಯವು ಸ್ವತಂತ್ರ ಭಾರತದ ಮೂವರು ಅತ್ಯಂತ ಪ್ರಭಾವಿ ಪ್ರಧಾನ ಮಂತ್ರಿಗಳಲ್ಲಿ ಕಂಡಿಲ್ಲ. ಜವಾಹರಲಾಲ್ ನೆಹರೂ, ಇಂದಿರಾಗಾಂಧಿ ಮತ್ತು ನರೇಂದ್ರ ಮೋದಿಯವರು ವ್ಯಕ್ತಿತ್ವ ಮತ್ತು ರಾಜಕೀಯ ಸಿದ್ಧಾಂತದ ವಿಷಯದಲ್ಲಿ ತುಂಬ ಬೇರೆ ಬೇರೆ. ಆದಾಗ್ಯೂ, ಒಂದು ವಿಷಯದಲ್ಲಿ ಅವರು ಸಮಾನರು- ಅದೆಂದರೆ ಪಕ್ಷ, ಸರಕಾರ, ರಾಜ್ಯವನ್ನು ತಮ್ಮೊಂದಿಗೆ ಗುರುತಿಸಿಕೊಳ್ಳುವ ಪ್ರವೃತ್ತಿ. ಇಂದಿರಾ ಈ ಅಧಿಕಾರದ ವೈಯಕ್ತೀಕರಣವನ್ನು ನೆಹರೂಗಿಂತ ಹೆಚ್ಚು ಮುಂದಕ್ಕೆ ಕೊಂಡೊಯ್ದರು ಮತ್ತು ಮೋದಿಯವರು ಅದನ್ನು ಭಾರತಕ್ಕಿಂತಲೂ ಮುಂದೆ ಸಾಗಿಸಿದ್ದಾರೆ. ಎಲ್ಲರೂ ತಮ್ಮನ್ನು ಹೇಗಾದರೂ ಅನಿವಾರ್ಯ ಮತ್ತು ಭರಿಸಲಾಗದವರು ಎಂದು ನೋಡಿಕೊಂಡರು. ಮುಂದಿನ ಪೀಳಿಗೆಯ ನಾಯಕರನ್ನು ಬೆಳೆಸಲು ಅವರು ಏನನ್ನೂ ಮಾಡಲಿಲ್ಲ. (ರಾಜಕೀಯದ ಹೊರಗೆ, ಅಧಿಕಾರವನ್ನು ವೈಯಕ್ತೀಕರಿಸುವ ಈ ಲಕ್ಷಣವು ಅನೇಕ ಭಾರತೀಯ ಕಾರ್ಪೊರೇಟ್ ನಾಯಕರು ಮತ್ತು ಭಾರತೀಯ ನಾಗರಿಕ ಸಮಾಜ ಸಂಸ್ಥೆಗಳ ಮುಖ್ಯಸ್ಥರ ಲಕ್ಷಣವಾಗಿದೆ, ಅವರು ತಮ್ಮೊಂದಿಗೆ ಸಂಘಟನೆಯನ್ನು ಗುರುತಿಸಲು ಪ್ರೋತ್ಸಾಹಿಸುತ್ತಾರೆ.)

ಗಾಂಧಿಯವರು ಮುಖ್ಯರಾಗಲು ಒಂಭತ್ತನೆಯ ಕಾರಣವೆಂದರೆ, ಎದುರಾಳಿ ಯ ದೃಷ್ಟಿಕೋನವನ್ನು ನೋಡುವ ಅವರ ಇಚ್ಛೆ, ಜೊತೆಗೆ ಅವರನ್ನು ಗೌರವಿಸಲು ಮತ್ತು ಗೌರವಾನ್ವಿತ ರಾಜಿ ಮಾಡಿಕೊಳ್ಳಲು ಅವರ ಸಿದ್ಧತೆ. ಹೀಗಾಗಿ, ಜಿನ್ನಾ ಮತ್ತು ಅಂಬೇಡ್ಕರ್‌ರಂತಹ ರಾಜಕೀಯ ವಿರೋಧಿಗಳೊಂದಿಗೆ ಮತ್ತು ದಕ್ಷಿಣ ಆಫ್ರಿಕಾ ಮತ್ತು ಭಾರತದಲ್ಲಿನ ಸಾಮ್ರಾಜ್ಯಶಾಹಿ ಪ್ರತಿಪಾದಕರೊಂದಿಗೆ ಸಂವಾದ ಸಾಧ್ಯವಾ ಗಿಸಲು ಅವರು ಹಲವು ವರ್ಷಗಳಿಂದ ತಾಳ್ಮೆಯ ಪ್ರಯತ್ನ ಮಾಡಿದರು. ಗಾಂಧೀಜಿಗೆ 
ಯಾವುದೇ ವೈಯಕ್ತಿಕ ಇಷ್ಟಾನಿಷ್ಟಗಳು ಅಥವಾ ದ್ವೇಷಗಳಿರಲಿಲ್ಲ, ಕೇವಲ ಬೌದ್ಧಿಕ ಅಥವಾ ರಾಜಕೀಯ ಭಿನ್ನಾಭಿಪ್ರಾಯಗಳಿದ್ದವು ಮತ್ತು ಇವುಗಳನ್ನೂ ಪರಿಹರಿಸ ಬಹುದೆಂದು ಅವರು ಆಶಿಸಿದ್ದರು. ದ್ವೇಷಿಸುವುದು ಅವರಿಗೆ ಸಾಧ್ಯವೇ ಇರಲಿಲ್ಲ.

ಗಾಂಧಿ ಮುಖ್ಯರಾಗಲು ಹತ್ತನೆಯ ಕಾರಣ, ಅವರ ರಾಜಕೀಯ ಜೀವನದ ಪಾರದರ್ಶಕತೆ. ಅವರ ಆಶ್ರಮಕ್ಕೆ ಯಾರು ಬೇಕಾದರೂ ಕಾಲಿಡಬಹುದಿತ್ತು; ಅವರೊಂದಿಗೆ ಯಾರು ಬೇಕಾದರೂ ಚರ್ಚೆ ಮಾಡಬಹುದಿತ್ತು; ವಾಸ್ತವವಾಗಿ, ಅಂತಿಮವಾಗಿ ಸಂಭವಿಸಿದಂತೆ, ಯಾರು ಬೇಕಾದರೂ ಅವರ ಬಳಿಗೆ ಹೋಗಿ ಅವರನ್ನು ಕೊಲ್ಲಬಹುದಿತ್ತು. ಇದು ಅವರ ಕಾಲದಲ್ಲಾಗಲಿ ನಮ್ಮ ಕಾಲದಲ್ಲಾಗಲಿ ಇತರ ರಾಜಕೀಯ ನಾಯಕರ ಭದ್ರತೆಯ ಗೀಳಿನ ಬದುಕನ್ನು ನೋಡಿಕೊಂಡರೆ ಎಂತಹ ವ್ಯತಿರಿಕ್ತ!

Similar News