ಜಪಾನ್ - ಪ್ರವಾಸ ಕಥನ ಪುಸ್ತಕ ಬಿಡುಗಡೆ

Update: 2023-01-28 12:20 GMT

ಮಂಗಳೂರು: ವ್ಯವಹಾರದಲ್ಲಿ ಪಾರದರ್ಶಕತೆ, ಜೀವನದಲ್ಲಿ ಪರೋಪಕಾರಿ ಪ್ರವೃತ್ತಿ ರೂಡಿಸಿಕೊಂದಿರುವುದರಿಂದ ಜಪಾನ್ ಇಂದು ಸಮೃದ್ದ ದೇಶವಾಗಿ ಬೆಳೆದು ನಿಂತಿದೆ. ಉದ್ಯಮ ನಿಮಿತ್ತ ನಾನು ಆಗಾಗ ಜಪಾನ್ ದೇಶಕ್ಕೆ  ಪ್ರಯಾಣ ಮಾಡುತ್ತಿರುತ್ತೇನೆ. ಜಪಾನ್ ದೇಶದಲ್ಲಿ ಜನರು ಸಮಯ ಮತ್ತು ಶಿಸ್ತಿಗೆ ಕೊಡುವಷ್ಟು ಪ್ರಾಮುಖ್ಯತೆ ಬೇರೆ ಯಾವುದೇ ದೇಶದಲ್ಲಿ ಕಾಣಸಿಗುವುದಿಲ್ಲ. ಇತಿಹಾಸ ಮತ್ತು ಪತ್ರಿಕೋದ್ಯಮ ಎರಡು ವಿಷಯಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆದಿರುವ ಫ್ಲೋರಿನ್ ರೋಚ್ ಅವರು ಜಪಾನ್ ದೇಶದ ಪ್ರವಾಸ ಕೈಗೊಂಡು ಬರೆದ ಪುಸ್ತಕ " ಉದೆಂವ್ಚ್ಯಾ ಸುರ್ಯಾಚ್ಯಾ ಕಿರ್ಣಾಂನಿ ಫುಲ್ಲಲೆಂ ಸಾಳಕ್ - ಜಪಾನ್" ಕೊಂಕಣಿ ಸಾಹಿತ್ಯದಲ್ಲಿ ವಿರಳವಾಗಿರುವ ಪ್ರವಾಸ ಕಥನ ಸಾಹಿತ್ಯಕ್ಕೆ ಅತ್ಯಮೂಲ್ಯ  ಕೊಡುಗೆಯಾಗಿದೆ " ಎಂದು ಅನಿವಾಸಿ ಉದ್ಯಮಿ, ಕೊಡುಗೈದಾನಿ ಮೈಕಲ್ ಡಿಸೊಜಾ ಅಭಿಪ್ರಾಯಪಟ್ಟರು. 

ಅವರು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಫ್ಲೋರಿನ್ ರೋಚ್ ಅವರ "ಉದೆಂವ್ಚ್ಯಾ ಸುರ್ಯಾಚ್ಯಾ ಕಿರ್ಣಾಂನಿ ಫುಲ್ಲಲೆಂ ಸಾಳಕ್" ಪುಸ್ತಕ ಬಿಡುಗಡೆ ಮಾಡಿ ಮಾತನಾಡುತಿದ್ದರು. 

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ. ಕೆ. ಜಗದೀಶ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ನಂತರ ಮಾತನಾಡಿದ ಅವರು, "ಪುಸ್ತಕಗಳು ಮನುಷ್ಯನ ಅತ್ಯುತ್ತಮ ಸಂಗಾತಿಗಳಾಗಿವೆ. ಆಧುನಿಕ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮಾಹಿತಿಯನ್ನು ನಾವು ಎಲ್ಲಿಂದಲೂ ಪಡೆದುಕೊಳ್ಳಬಹುದು. ಆದರೆ ಪ್ರೇರಣೆಯನ್ನು ಪುಸ್ತಕಗಳಿಂದ ಮಾತ್ರ ಪಡೆದುಕೊಳ್ಳಲು ಸಾಧ್ಯ. ಸ್ವಾಮಿ ವಿವೇಕಾನಂದರು ವಿಶ್ವದಾದ್ಯಂತ ಪ್ರವಾಸ ಮಾಡುವಾಗ ಎರಡು ಪುಸ್ತಕಗಳನ್ನು ಸದಾ ಜತೆಗೆ ಕೊಂಡೊಯ್ಯುತ್ತಿದ್ದರು. ಭಗವದ್ಗೀತೆ ಮತ್ತು ಇಮಿಟೇಶನ್ ಒಫ್ ಕ್ರೈಸ್ಟ್. ಇಂತಹ ಶ್ರೇಷ್ಠ ಪುಸ್ತಕಗಳನ್ನು ಓದಿರುವುದರಿಂದ ಯಾವ ಪ್ರಲೋಭನೆಗೂ ಅವರು ಬಗ್ಗಲಿಲ್ಲ. ಗೋರೂರು ರಾಮಸ್ವಾಮಿ ಅಯ್ಯಂಗಾರ್ ಬರೆದಿರುವ ಅಮೆರಿಕಾದಲ್ಲಿ ಗೋರೂರು ಪುಸ್ತಕ ಓದಿದರೆ ಅಮೆರಿಕಾ ಸುತ್ತಿ ಬಂದ ಅನುಭವದ ಜೊತೆಗೆ ಅಲ್ಲಿನ ಜನಜೀವನ, ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆಯೂ ತಿಳಿದುಕೊಳ್ಳಬಹುದು. ಜಪಾನ್ ದೇಶ ಕುರಿತ ಫ್ಲೋರಿನ್ ರೋಚ್ ಅವರ ಪುಸ್ತಕ ಓದಿದರೆ ಇಂತಹುದೇ ಅನುಭವ ಸಿಗುವುದರಲ್ಲಿ ಸಂದೇಹವಿಲ್ಲ. ಕೊಂಕಣಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳೆಯದೇ ಇರುವ ಪ್ರವಾಸ ಕಥನ ಸಾಹಿತ್ಯಕ್ಕೆ ಫ್ಲೋರಿನ್ ರೋಚ್ ಕೊಡುಗೆ ಗಣನೀಯ. ಅವರು ಇನ್ನಷ್ಟು ದೇಶಗಳನ್ನು ಸುತ್ತಿ ನಮಗೆ ಇನ್ನಷ್ಟು ಕೋಶಗಳನ್ನು ಓದಲು ಕೊಡಬೇಕು" ಎಂದರು. 

ಕಾರ್ಯಕ್ರಮದ ಅಂಗವಾಗಿ ಲೇಖಕಿ ಫ್ಲೋರಿನ್ ರೋಚ್ ಅವರೊಂದಿಗೆ ಹಿರಿಯ ರಂಗಕರ್ಮಿ ಮತ್ತು ಕಲಾವಿದ ಎಡ್ಡಿ ಸಿಕ್ವೇರಾ " ಪ್ರವಾಸ ಒಂದು ಹವ್ಯಾಸ ಮತ್ತು ಪ್ರವಾಸ ಸಾಹಿತ್ಯ" ಈ ಕುರಿತು ಸಂವಾದ ನಡೆಸಿದರು. 

ವಿಶ್ವ ಕೊಂಕಣಿ ಕೇಂದ್ರದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕಿಟಾಳ್ ಪ್ರಕಾಶನದ ಎಚ್ಚೆಮ್, ಪೆರ್ನಾಲ್ ನಿರೂಪಿಸಿದರು. ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ಶ್ರೀ ಗಿಲ್ಬರ್ಟ್ ಡಿ ಸೊಜಾ ವಂದಿಸಿದರು. ವಿಶ್ವ ಕೊಂಕಣಿ ಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಗುರುದತ್ತ ಬಂಟ್ವಾಳ್‌ಕರ್ ಈ ಸಂದರ್ಭದಲ್ಲಿ ಹಾಜರಿದ್ದರು.

Similar News