ಸಾಲದ ಕಂತು ಅವಧಿ ಹೆಚ್ಚಳಕ್ಕೆ ಚೀನಾ ನಕಾರ: ಶ್ರೀಲಂಕಾಕ್ಕೆ ಐಎಂಎಫ್ ಆರ್ಥಿಕ ನೆರವು ವಿಳಂಬ?

Update: 2023-01-28 17:37 GMT

ಕೊಲಂಬೋ, ಜ.28: ತೀವ್ರ ಆರ್ಥಿಕ ವಿಪತ್ತಿನಲ್ಲಿರುವ ದ್ವೀಪರಾಷ್ಟ್ರ ಶ್ರೀಲಂಕಾ, ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್)ಯಿಂದ ತುರ್ತು ಸಾಲದ ನೆರವು ಪಡೆಯಲು ಚೀನಾ ವಿಧಿಸಿರುವ ಷರತ್ತು ತೊಡಕಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಶ್ರೀಲಂಕಾದ ಪ್ರಮುಖ ಸಾಲಗಾರ ದೇಶಗಳಾದ(ಸಾಲ ಒದಗಿಸಿರುವ ದೇಶಗಳು) ಭಾರತ, ಜಪಾನ್ ಮತ್ತು ಚೀನಾಗಳು, ತಾವು ನೀಡಿರುವ ಸಾಲದ ಮರುಪಾವತಿ ಅವಧಿಯನ್ನು ಕನಿಷ್ಟ 15 ವರ್ಷ ಎಂದು ಪ್ರಮಾಣೀಕರಿಸಿದರೆ ಮಾತ್ರ ಶ್ರೀಲಂಕಾಕ್ಕೆ ತುರ್ತು ಆರ್ಥಿಕ ನೆರವು ಒದಗಿಸುವುದಾಗಿ ಐಎಂಎಫ್ ಸ್ಪಷ್ಟವಾಗಿ ತಿಳಿಸಿದೆ. ಐಎಂಎಫ್ನ ಸೂಚನೆಗಳಿಗೆ ತಾವು ಬದ್ಧವಾಗಿರುವುದಾಗಿ ಭಾರತ ಮತ್ತು ಜಪಾನ್ ಈಗಾಗಲೇ ಘೋಷಿಸಿವೆ. ಆದರೆ ಚೀನಾ ಮಾತ್ರ ಇದಕ್ಕೆ ವ್ಯತಿರಿಕ್ತ ನಿಲುವು ತಳೆದಿದೆ. ಸಾಲ ಕಂತು ಅವಧಿ ಗರಿಷ್ಟ 2 ವರ್ಷ ಮಾತ್ರ ಎಂದು ಚೀನಾದ ಎಕ್ಸಿಮ್ ಬ್ಯಾಂಕ್(ಎಕ್ಸ್ಪೋರ್ಟ್-ಇಂಪೋರ್ಟ್ ಬ್ಯಾಂಕ್) ಸ್ಪಷ್ಟಪಡಿಸಿದೆ.
 
ಹೀಗಾಗಿ, ಈ ವರ್ಷದ ಮಾರ್ಚ್ ವೇಳೆ ಐಎಂಎಫ್ನಿಂದ 2.9 ಶತಕೋಟಿ ಡಾಲರ್ ಮೊತ್ತದ ಆರ್ಥಿಕ ನೆರವು ಪಡೆಯುವ ಶ್ರೀಲಂಕಾದ ಆಶಯಕ್ಕೆ ಹಿನ್ನಡೆಯಾಗಲಿದೆ. ಇದೀಗ ಶ್ರೀಲಂಕಾವನ್ನು ಆರ್ಥಿಕ ಮತ್ತು ರಾಜಕೀಯ ಅವ್ಯವಸ್ಥೆಯಿಂದ ರಕ್ಷಿಸಲು ಸಾರ್ವಭೌಮ ಬಾಕಿ ವ್ಯವಸ್ಥೆ (ಶ್ರೀಲಂಕಾದ ಸರಕಾರಕ್ಕೆ ಸಾಲ ನೀಡಿರುವ ದೇಶಗಳಿಗೆ ಆರ್ಥಿಕ ನೆರವು) ಐಎಂಎಫ್ಗೆ ಇರುವ ಏಕೈಕ ಆಯ್ಕೆಯಾಗಿದೆ.
  
ಚೀನೀ ಅಭಿವೃದ್ಧಿ ಬ್ಯಾಂಕ್ನ ಸಾಲ ಸೇರಿದಂತೆ ಶ್ರೀಲಂಕಾವು ಚೀನಾಕ್ಕೆ 7 ಶತಕೋಟಿ ಡಾಲರ್ ಸಾಲ ಮರುಪಾವತಿಸಬೇಕಾಗಿದೆ. ಚೀನಾದ ಖಾಸಗಿ ಹಣಕಾಸು ಸಂಸ್ಥೆಗಳು, ಬ್ಯಾಂಕ್ಗಳಿಂದ ಪಡೆದ ಸಾಲ ಇದರಲ್ಲಿ ಸೇರಿಲ್ಲ. ಸಮರ್ಥನೀಯವಲ್ಲದ ಅಧಿಕ ಬಡ್ಡಿದರ, ಹಣಕಾಸಿನ ದುರುಪಯೋಗ, ದುರ್ಬಳಕೆಯಿಂದಾಗಿ ಸರಿಯಾಗಿ ಸಾಲ ಮರುಪಾವತಿಯಾಗದೆ ಆರ್ಥಿಕ ಹೊರೆ ಹೆಚ್ಚಿದೆ. ಜತೆಗೆ, ಗೊತಬಯ ರಾಜಪಕ್ಸ ಅವರ ಆಡಳಿತಾವಧಿಯಲ್ಲಿ ದುಂದುವೆಚ್ಚ ಹೆಚ್ಚಿತ್ತು. ಹಂಬನ್ಯೋಟ ಬಂದರು ಯೋಜನೆ, ಮತ್ತಲ ರಾಜಪಕ್ಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ನೊರೊಚೊಲೈ ವಿದ್ಯುತ್ ಸ್ಥಾವರ ಮುಂತಾದ ಬಿಳಿಯಾನೆ ಯೋಜನೆಗಳು ಸಾಲ ಪಡೆದ ಹಣವನ್ನು ನುಂಗಿಹಾಕಿದ್ದವು. ಕಳೆದ ದಶಕದಲ್ಲಿ ಚೀನಾದ ಬೆಲ್ಟ್ ರೋಡ್ ಉಪಕ್ರಮ(ಬಿಆರ್ಐ)ದ ಭಾಗವಾಗಿದ್ದ ಶ್ರೀಲಂಕಾ ಮತ್ತು ಪಾಕಿಸ್ತಾನಗಳೆರಡೂ ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಆದರೆ ಬಿಆರ್ಐ ಯೋಜನೆಯಲ್ಲಿ ಈ ಎರಡು ದೇಶಗಳನ್ನು ತೊಡಗಿಸಿಕೊಳ್ಳುವಾಗ ತೋರಿದ್ದ ಆಸಕ್ತಿಯನ್ನು ಈ ಎರಡೂ ದೇಶಗಳ ಅರ್ಥವ್ಯವಸ್ಥೆಯ ಪುನಶ್ಚೇತಕ್ಕೆ ನೆರವಾಗುವಲ್ಲಿ ಚೀನಾ ಪ್ರದರ್ಶಿಸುವ ಅಗತ್ಯವಿದೆ ಎಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Similar News