ಅಮಲು ಮತ್ತು ಅಹಂಕಾರ

Update: 2023-01-29 04:27 GMT

ಜಠರ, ಮೂತ್ರಜನಕಾಂಗ, ಕರುಳು; ಹೀಗೆ ಎಲ್ಲದರ ಮೇಲೂ ಒಂದಲ್ಲಾ ಒಂದು ರೀತಿಯಲ್ಲಿ ನಕಾರಾತ್ಮಕವಾದ ಪ್ರಭಾವ ಬೀರುವ ಮದ್ಯಪಾನ, ವ್ಯಕ್ತಿಯ ನಡವಳಿಕೆ, ಸಂವೇದನೆ ಮತ್ತು ವರ್ತನೆಗಳ ಮೇಲೆ ಪ್ರಭಾವ ಬೀರುತ್ತದೆಯಲ್ಲಾ; ಅದನ್ನೇ ಅಮಲು ಎನ್ನುವುದು. ಮದ್ಯಪಾನ ಮಾಡಿದಾಗ ಅದು ಹೊಟ್ಟೆಯೊಳಗೆ ಸೇರಿ, ಅದು ರಕ್ತದ ಮೂಲಕ ಮೆದುಳನ್ನು ತಲುಪಿ ತನ್ನ ಪ್ರಭಾವವನ್ನು ಬೀರುತ್ತದೆ. ಒಂದು ಗಂಭೀರವಾದ ಎಚ್ಚರಿಕೆಯನ್ನು ಗಮನಿಸಬೇಕಾಗಿದೆ. ಅದೇನೆಂದರೆ, ಮದ್ಯಪಾನದಿಂದ ವಯಸ್ಕರ ಮೆದುಳಿಗಿಂತ ಹದಿಹರೆಯದವರ ಮೆದುಳಿನ ಮೇಲೆ ಉಂಟಾಗುವ ಪರಿಣಾಮವು ಅತ್ಯಂತ ತೀಕ್ಷ್ಣವೂ ಮತ್ತು ಕೇಡಿನದೂ ಆಗಿರುತ್ತದೆ. ಮೆದುಳಿನಲ್ಲಿ ದೇಹದ ಸಮತೋಲನ, ಸ್ಮರಣೆ, ಮಾತು, ನಿರ್ಣಯಿಸುವ ಸಾಮರ್ಥ್ಯದ ಕೇಂದ್ರಗಳು ನಕಾರಾತ್ಮಕ ಪ್ರಭಾವಕ್ಕೆ ಒಳಗಾಗಿ, ಆ ವಿಷಯಗಳಲ್ಲಿ ಎಡವಟ್ಟುಗಳಾಗುತ್ತವೆ.

ಅತಿ ಸೇವನೆ ಆದಷ್ಟೂ ಮಾನಸಿಕವಾದ ಗೊಂದಲ, ಪ್ರಜ್ಞೆತಪ್ಪುವುದು, ವಾಂತಿ, ನಡುಕ, ಉಸಿರಾಟದಲ್ಲಿ ವ್ಯತ್ಯಾಸ, ಹೃದಯದ ಬಡಿತವು ಏರುಗತಿಯಾಗುವುದನ್ನು ಕೂಡಾ ಕಾಣಬಹುದು. ನಂತರ ಕ್ರಮೇಣ ಮೆದುಳಿನ ಭಾಗಗಳು ಘಾಸಿತಗೊಳ್ಳುವವು. ಈ ಕುಡಿತದ, ಮಾದಕ ವಸ್ತುಗಳ ಅಮಲಿನಿಂದಾಗಿ ಗೊಂದಲಗಳಿಂದ ವರ್ತಿಸುವುದು, ಸಿಕ್ಕಾಪಟ್ಟೆ ಮಾತಾಡುವುದು, ಅತಿಕ್ರಮಿಸುವಂತಹ ವರ್ತನೆಗಳನ್ನು ತೋರುವುದು, ಸಮಾನ್ಯ ಸಮತೋಲನದ ಪ್ರಜ್ಞೆ ಇಲ್ಲದೆ ನಡೆದುಕೊಳ್ಳುವುದು, ಸಂವೇದನೆಯಿಂದ ಕೂಡಿರುವ ನಿರ್ಣಯಗಳನ್ನು ತೆಗೆದುಕೊಳ್ಳುವುದರಲ್ಲಿ ವಿಫಲವಾಗುವುದು, ಕುಡಿತದ ಪ್ರಾರಂಭದಲ್ಲಿ ಮೆದುಳಿನಲ್ಲಿ ಡೊಪಾಮೈನ್ ಎಂಬ ರಾಸಾಯನಿಕ ದ್ರವ್ಯ ಸ್ರವಿಸುವುದರಿಂದ ಸಂತೋಷವೂ ಮತ್ತು ಅದರ ಬಯಕೆಯ ತೀವ್ರತೆ ಹೆಚ್ಚಾದಂತೆ ವ್ಯಸನಕ್ಕೆ ಈಡಾಗುವುದು; ಇವೆಲ್ಲಾ ಮದ್ಯಪಾನ ಮತ್ತು ಮಾದಕ ದ್ರವ್ಯಗಳ ಸೇವನೆಯಲ್ಲಿ ಸಾಮಾನ್ಯ. ಇವುಗಳ ಅಮಲಿನಲ್ಲಿ ವಸ್ತು ಮತ್ತು ವ್ಯಕ್ತಿಗಳ ಬಗ್ಗೆ ಸಂವೇದನೆಯನ್ನು ಕಳೆದುಕೊಳ್ಳುವುದು, ಇತರರ ವಿಷಯಗಳಲ್ಲಿ ಅತಿಕ್ರಮಣ ಪ್ರವೇಶ ಮಾಡುವುದು, ಅದರ ಮೂಲಕ ದೌರ್ಜನ್ಯ ಎಸಗುವುದು, ಸಹಾನುಭೂತಿ ಏನೂ ಇಲ್ಲದೇ ವರ್ತಿಸುವುದರಿಂದ ವ್ಯಕ್ತಿಯು ತಾನೂ ಮತ್ತು ಅವನ ಸಂಪರ್ಕದಲ್ಲಿರುವವರೂ ತುಂಬಾ ಕೆಟ್ಟ ಪರಿಣಾಮಗಳನ್ನು ಅನುಭವಿಸುವರು. ಹಾಗಾಗಿಯೇ ಶಿಸ್ತಿನ, ಕ್ರಮಾಧಾರಿತ ವ್ಯವಸ್ಥೆಯ ವಿಷಯಗಳಲ್ಲಿ ಅಥವಾ ಸನ್ನಿವೇಶಗಳಲ್ಲಿ ಕುಡಿತವನ್ನು ನಿಷೇಧಿಸುವುದು ಮತ್ತು ಅದರ ಬಗ್ಗೆ ನಕಾರಾತ್ಮಕ ಧೋರಣೆಯನ್ನು ಹೊಂದಿರುವುದು.

ಒಟ್ಟಾರೆ ಒಬ್ಬ ವ್ಯಕ್ತಿಯು ಶಿಸ್ತು, ಸಂಯಮ, ಪ್ರಜ್ಞಾಪೂರ್ವಕವಾಗಿ ನಡವಳಿಕೆಗಳನ್ನು ತೋರುವಾಗ ಅಮಲಿನಲ್ಲಿ ಇರಬಾರದು ಎಂಬುದು ಈಗ ಹೇಳಬೇಕಾಗಿರುವ ವಿಷಯ. ಸರಿ, ಅಂತಹ ಅಮಲು ಸೇವಿಸದೆ ಇದ್ದರೂ, ಮಾದಕ ವಸ್ತುಗಳನ್ನು ತೆಗೆದುಕೊಳ್ಳದೇ ಇದ್ದರೂ ವ್ಯಕ್ತಿಗಳಲ್ಲಿ ನಾವು ಕಾಣಬಹುದು. ಅದೇ ಸಂವೇದನೆ, ಪ್ರಜ್ಞೆ ಇಲ್ಲದೆ ವರ್ತಿಸುವುದು, ವಿವೇಚನೆ ಇಲ್ಲದೆ ನಡೆದುಕೊಳ್ಳುವುದು, ಅತಿಕ್ರಮಣ ಪ್ರವೇಶ ಮಾಡುವುದು, ದೌರ್ಜನ್ಯ ಎಸಗುವುದು, ಅತಿರೇಕದಲ್ಲಿ ಮಾತಾಡುವುದು; ಇತ್ಯಾದಿಗಳನ್ನೆಲ್ಲಾ ನೋಡಬಹುದಾಗಿರುವುದು ಅಹಂಕಾರದಲ್ಲಿ. ಅಹಂಕಾರವೂ ಕೂಡಾ ಅತ್ಯಂತ ತೀವ್ರತರವಾದ, ವಿನಾಶಕಾರಿಯಾದ, ಕೇಡಿನ ಪ್ರಭಾವಗಳನ್ನು ಬೀರುವಂತಹ ಅಮಲನ್ನು ಹೊಂದಿರುತ್ತದೆ. ಅಹಂಕಾರ ವ್ಯಕ್ತಿಯನ್ನು ತನ್ನ ಹತೋಟಿಯಲ್ಲಿಟ್ಟುಕೊಂಡಿರುವಾಗ ಆತ ಯಾವುದೇ ಕುಡುಕನಂತೆಯೇ ಅಥವಾ ಮಾದಕ ವಸ್ತುಗಳ ವ್ಯಸನಿಯಂತೆ ವಿವೇಚನೆ ಇಲ್ಲದವನಾಗಿರುತ್ತಾನೆ. ದೌರ್ಜನ್ಯ ಎಸಗುತ್ತಾನೆ. ಕುಡಿತದ ಪರಿಣಾಮವಾದರೂ ಕೆಲವು ಕಾಲದ್ದಾಗಿದ್ದರೆ, ಈ ಅಹಂಕಾರದ ಅಮಲು ಸದಾ ತನ್ನ ಉನ್ಮತ್ತತೆಯ ಸ್ಥಿತಿಯಲ್ಲಿಯೇ ಇರುತ್ತದೆ.

ಅಹಂಕಾರಿಯ ಲಕ್ಷಣಗಳೇನೆಂದರೆ, ತಮ್ಮ ಅಹಂಕಾರವನ್ನು ಸ್ವಾಭಿಮಾನ ಎಂದುಕೊಳ್ಳುವರು. ತಮ್ಮ ಅತಿಕ್ರಮಿಸುವಿಕೆಯನ್ನೇ ಮುಂದಾಗುವುದು ಎಂದು ಭಾವಿಸುವರು. ತಮ್ಮ ಹುಂಬತನವನ್ನು ಆತ್ಮವಿಶ್ವಾಸ ಎಂದುಕೊಳ್ಳುವರು. ತಮ್ಮ ಬಗ್ಗೆಯೇ ತಾವು ಮಾತಾಡಿಕೊಳ್ಳುವುದು, ಯಾರ ಮಾತನ್ನೂ ಕೇಳುವುದಿಲ್ಲ, ತಾವೇ ಸರಿ ಎಂದು ಭಾವಿಸುವುದು, ಇತರರನ್ನು ನಿರ್ಲಕ್ಷಿಸುವುದು, ಬೇರೆಯವರ ಕುರಿತು ಅನುಚಿತವಾಗಿ ನಡೆದುಕೊಳ್ಳುವುದು, ಇತರ ಭಾವನೆ ಮತ್ತು ಅಗತ್ಯಗಳನ್ನು ಗಮನಿಸದೆ ವಿವೇಚನೆ ಇಲ್ಲದೆ ನಡೆದುಕೊಳ್ಳುವುದು, ಇತರರ ನೋವುಗಳಿಗೆ ಅಥವಾ ಸಂವೇದನೆಗಳಿಗೆ ಸ್ಪಂದಿಸದೆ ಇರುವುದು, ಇತ್ಯಾದಿ. ಈ ಅಹಂಕಾರದ ಕಾರಣದಿಂದಾಗಿಯೇ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಮೇಲೆ, ಸಮೂಹವು ಮತ್ತೊಂದು ಸಮೂಹದ ಮೇಲೆ ಆಕ್ರಮಣ ಮಾಡುತ್ತದೆ ಮತ್ತು ವಿಷಯಗಳಲ್ಲಿ ಅತಿಕ್ರಮಣ ಪ್ರವೇಶ ಮಾಡುತ್ತದೆ. ಅದೇ ದೌರ್ಜನ್ಯ. ವ್ಯಕ್ತಿ ಅಥವಾ ಸಮೂಹದಲ್ಲಿ ತನ್ನ ಮೆರೆದಾಡುವಿಕೆಯನ್ನು ತೃಪ್ತಿಪಡಿಸಿಕೊಳ್ಳಲು ಈ ದುರಂಹಕಾರವು ನಾನಾ ನೆಪಗಳನ್ನು ಬೇಡುತ್ತದೆ. ಅದು ಹಣವಾಗಿರಬಹುದು, ಬಣ್ಣವಾಗಿರಬಹುದು, ವಿದ್ಯೆ, ಪ್ರತಿಭೆ, ದೇಹದ ಬಲ; ಯಾವುದಾದರೂ ಆಗಿರಬಹುದು. ಅಹಂಕಾರದಿಂದ ಉಂಟಾಗುವ ಇಂತಹ ದೌರ್ಜನ್ಯ ಅಥವಾ ಶೋಷಣೆಗಳನ್ನು ತಡೆಯಲು ಜೀವಪ್ರೇಮಿಗಳು, ಸಮಾಜ ಸುಧಾರಕರು, ದಾರ್ಶನಿಕರು, ಅಸ್ತಿತ್ವದ ಮತ್ತು ಜೀವದ ಸಂಬಂಧವನ್ನು ಅರಿತವರು ಕೆಲವು ಶಿಸ್ತಿನ, ನೈತಿಕತೆಯ ದಾರಿಗಳನ್ನು ಕಂಡುಕೊಂಡರು.

ಅವನ್ನು ತಮ್ಮ ಜೀವನದಲ್ಲಿಯೂ ಮತ್ತು ಬೋಧನೆಗಳಲ್ಲಿಯೂ ಪ್ರತಿಪಾದಿಸಿದರು. ಅವರೆಲ್ಲರನ್ನೂ ಧಾರ್ಮಿಕ ಪ್ರವರ್ತಕರೆಂದು ಕರೆಯೋಣ. ಇಷ್ಟಾಯ್ತಾ? ಮನುಷ್ಯನ ದುರಹಂಕಾರವನ್ನು ಮಣಿಸಿ, ನೈತಿಕತೆಯನ್ನೇ ಧಾರ್ಮಿಕತೆ ಯನ್ನಾಗಿಸಿ ಸಾತ್ವಿಕ ಮತ್ತು ಸಂಯಮದ ಜೀವನ ನಡೆಸಲು ಮುಂದಾದ ಅವರ ನಂತರ ಅದನ್ನೇ ಧರ್ಮ ಎಂದು ಕರೆದು ಜನರು ಅನುಸರಿಸಿದರು. ಮನುಷ್ಯನ ಅಹಂಕಾರದ ಅಮಲಿನ ಉನ್ಮತ್ತತೆ ಎಷ್ಟರ ಪ್ರಮಾಣದಲ್ಲಿರುತ್ತದೆ ಎಂದರೆ, ಯಾವ ಧರ್ಮವು ಅವನ ಅಹಂಕಾರವನ್ನು ಮಣಿಸಲು ಬೇಕಾಗಿತ್ತೋ, ಹದವರಿತ ಜೀವನಕ್ಕೆ ಅಗತ್ಯವಿತ್ತೋ, ಅದೇ ತನ್ನ ಅಹಂಕಾರವನ್ನು ಮೆರೆಸಲು ನೆಪವಾಗಿಬಿಟ್ಟಿತು. ತನ್ನ ಧರ್ಮ ಇತರದಕ್ಕಿಂತ ಶ್ರೇಷ್ಠ, ಅದೇ ಅಂತಿಮ, ಅದನ್ನು ಬಿಟ್ಟರೆ ಬೇರೆ ಇಲ್ಲ, ಇತರ ಧರ್ಮದ ಅನುಯಾಯಿಗಳು ತನಗಿಂತ ಕನಿಷ್ಠರು ಎಂದು ಹೀಯಾಳಿಸುವುದು, ಅವರನ್ನು ನಿವಾರಿಸಲು ಯತ್ನಿಸುವುದು, ಅವರ ಆಚರಣೆಗಳನ್ನು ಹೀನಾಯವಾಗಿ ಕಾಣುವುದು, ದ್ವೇಷಿಸುವುದು; ಇತ್ಯಾದಿಗಳೆಲ್ಲವೂ ದುರಹಂಕಾರದ ಅಮಲು. ಧರ್ಮವನ್ನೇ ತನ್ನ ಉನ್ಮತ್ತತೆಗೆ ತುತ್ತನ್ನಾಗಿಸಿಕೊಂಡಿದ್ದು ಈ ಧಾರ್ಮಿಕ ಜಗತ್ತಿನ ಅತಿ ದೊಡ್ಡ ದುರಂತ.

Similar News

ಮಧುರ ವಿಷ
ಮನೋಭವನ
ಕಿವಿಗೊಡೋಣ
ಜಡತೆಯ ರೋಗ