ಮನೋಭವನ

Update: 2024-03-03 06:51 GMT

ಆರೋಗ್ಯವು ಶುಚಿತ್ವವನ್ನು ಅವಲಂಬಿಸಿರುತ್ತದೆ. ದೇಹದ ಮತ್ತು ವಾತಾವರಣದ ಸ್ವಚ್ಛತೆಯು ದೇಹದ ಆರೋಗ್ಯಕ್ಕೆ ಪೂರಕವಾದರೆ, ಮನಸ್ಸಿನ ಸ್ವಚ್ಛತೆಯು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರುತ್ತದೆ. ವಾತಾವರಣದಲ್ಲಿ ಮತ್ತು ಶರೀರದಲ್ಲಿ ಅಥವಾ ಶರೀರದ ಮೇಲೆ ಬೇಡದ, ರೋಗಗಳನ್ನು ಉಂಟುಮಾಡುವ, ಅನಗತ್ಯದ ಮತ್ತು ವಿನಾಶಕಾರಿ ವಸ್ತುಗಳು ಇದ್ದರೆ ಆರೋಗ್ಯವನ್ನು ಕೆಡಿಸುವಂತೆಯೇ, ಮನಸ್ಸಿನಲ್ಲಿಯೂ ಕೂಡಾ ಬೇಡದ, ಅಗತ್ಯವಿರದ, ವಿನಾಶಕಾರಿ ಆಲೋಚನೆಗಳು ಮತ್ತು ಭಾವನೆಗಳು ಇದ್ದರೆ ಆರೋಗ್ಯ ಕೆಡುತ್ತದೆ.

ಹಾಗಾಗಿ ಮೈ ಮನದ ಆರೋಗ್ಯವು ಚೆನ್ನಾಗಿರಬೇಕೆಂದರೆ ಸ್ವಚ್ಛತೆ ಬಹಳ ಮುಖ್ಯ ಎಂದಾಯಿತು. ಈಗ ಹೇಳುವ ವಿಷಯಗಳನ್ನೆಲ್ಲಾ ನಮ್ಮ ವಾಸ ಮಾಡುವ ಭೌತಿಕ ಪರಿಸರ, ಶರೀರ ಮತ್ತು ಮನಸ್ಥಿತಿಗೆ ಹೋಲಿಸುತ್ತಲೇ ಅರ್ಥ ಮಾಡಿಕೊಳ್ಳಬಹುದು.

ಸ್ವಚ್ಛತೆ ಎಂದರೆ ಇರುವ ಪರಿಸರದಲ್ಲಿ ಬೇಡದ, ಅನುಪಯುಕ್ತ ಮತ್ತು ವಿನಾಶಕಾರಿ ವಸ್ತುಗಳನ್ನು ನಿವಾರಿಸಿಕೊಳ್ಳುವುದು ಮತ್ತು ಅಗತ್ಯದ ಹಾಗೂ ಉಪಯುಕ್ತ ವಸ್ತುಗಳನ್ನು ಮಾತ್ರ ಇರಗೊಡುವುದು. ಅದೇ ರೀತಿಯಲ್ಲಿ ಮನಸ್ಸಿನ ಕುರಿತಾಗಿಯೂ ಕೂಡಾ ವಿಷಯಗಳಲ್ಲಿ ಬೇಕಾದ ಮತ್ತು ಬೇಡದ ಆಲೋಚನೆಗಳನ್ನು ಗಮನಿಸುವುದು. ಮಾರಕವಾಗಿರುವ ಅಥವಾ ಪೂರಕವಾಗಿರುವ ಭಾವನೆಗಳನ್ನು ಗುರುತಿಸುವುದು ಕೂಡಾ ಸ್ವಚ್ಛತೆಯ ಅಭಿಯಾನದ ಭಾಗವೇ ಆಗಿರುತ್ತದೆ.

ಸರಿ, ಸ್ವಚ್ಛತೆಯ ನಂತರ ಬೇಕಾದ ವಸ್ತುಗಳನ್ನು ಆದ್ಯತೆಯ ಮೇರೆಗೆ ಜೋಡಿಸಿಟ್ಟುಕೊಳ್ಳುವಂತೆ ಮನಸ್ಸಿನಲ್ಲಿಯೂ ಬೇಕಾದ ವಿಷಯಗಳನ್ನು ಆದ್ಯತೆಯ ಮೇರೆಗೆ ಅಚ್ಚುಕಟ್ಟಾಗಿ ಜೋಡಿಸಿಕೊಳ್ಳಬೇಕು. ಇದರ ಅಗತ್ಯ ಈಗ, ಇದಕ್ಕೆ ಆದ್ಯತೆ ಕೊಡಬೇಕು. ಈಗ ಈ ವಿಷಯದ ಕುರಿತಾಗಿ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ; ಹೀಗೆ ಮನಸ್ಸಿನೊಳಗೆ ನುಸುಳುವ ಮತ್ತು ರಾಶಿ ಬೀಳುವ ವಿಷಯಗಳನ್ನೂ ಆದ್ಯತೆಯ ಮೇರೆಗೆ ಅಚ್ಚುಕಟ್ಟಾಗಿ ಜೋಡಿಸಿಟ್ಟುಕೊಳ್ಳಬೇಕು. ಮನಸ್ಸೆಂಬ ಕಲ್ಪಿತ ಭವನದಲ್ಲಿ ಯಾವ್ಯಾವ ವಸ್ತುಗಳನ್ನು ಎಲ್ಲೆಲ್ಲಿ ಇಡಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇರಬೇಕು. ದಿನ ಬಳಸುವ ವಸ್ತುಗಳನ್ನು ಮುಂದಿಟ್ಟುಕೊಳ್ಳುವುದು, ಯಾವಾಗಲೋ ಬಳಸುವ ವಸ್ತುಗಳನ್ನು ಎತ್ತಿಟ್ಟುಕೊಳ್ಳುವುದು, ತುರ್ತು ಬಳಕೆಗೆ ಬೇಕಾದ ವಸ್ತುಗಳನ್ನು ಕೈಗೆಟಕುವಂತೆ ಇಟ್ಟುಕೊಳ್ಳುವುದು, ಬೇಕಾದಾಗ ಉಪಯೋಗಿಸೋಣ ಎಂಬ ವಸ್ತುಗಳನ್ನು ಹಿಂದಕ್ಕೆ ಸರಿಸುವ ಮೂಲಕ ವಿಷಯಗಳ ಜೋಡಣೆಯನ್ನು ಅಚ್ಚುಕಟ್ಟಾಗಿ ಮಾಡಬೇಕು.

ಸ್ವಚ್ಛ ಮಾಡುವುದು, ವಸ್ತುಗಳನ್ನು ಒಪ್ಪ ಓರಣವಾಗಿಟ್ಟುಕೊಳ್ಳುವುದು, ಆದ್ಯತೆಯ ಮೇರೆಗೆ ವಸ್ತುಗಳನ್ನು ಜೋಡಿಸಿಟ್ಟುಕೊಳ್ಳುವುದು; ಇವೆಲ್ಲಕ್ಕೂ ಬೇಕಾಗಿರುವ ಗುಣಗಳೆಂದರೆ ನಿರ್ಧಾರ, ಗಮನ, ತೊಡಗಿಕೊಳ್ಳುವಿಕೆ, ಕೆಲಸ ಮುಗಿಸುವ ವಿಷಯದಲ್ಲಿ ಹಿಂದೆಗೆಯದಿರುವುದು, ಪ್ರಜ್ಞೆ, ಪರಿಶೀಲನೆ ಮತ್ತು ಅಂತಿಮವಾಗಿ ತಮ್ಮ ಕೆಲಸದಲ್ಲಿ ತೃಪ್ತವಾಗಿ, ಆನಂದದಿಂದಿರುವುದು.

ಗುಣಗಳು ರೂಢಿಸಿಕೊಳ್ಳುವುದರಿಂದ ಬರುವಂತವು.

ಗುಣಗಳನ್ನು ರೂಢಿಸಿಕೊಳ್ಳುವುದಕ್ಕೆ ಆಲೋಚನೆಗಳ ನಿರತವಾದ ಗಮನ ಮತ್ತು ನಿರ್ದಿಷ್ಟ ದಿಕ್ಕಿನಲ್ಲಿ ಪುನರಾವರ್ತಿತವಾಗಿ ಕೆಲಸ ಮಾಡಬೇಕು.

ಇನ್ನು ಭಾವನೆಗಳು ನಿಮ್ಮ ಇಷ್ಟದಂತೆ ಬರುವುದಿಲ್ಲ. ಅವು ತಂತಾನೆ ಹುಟ್ಟುತ್ತವೆ. ಹಾಗೆಯೇ ಅವುಗಳು ಮನಸ್ಥಿತಿಯನ್ನು ರೂಪುಗೊಳಿಸುವಲ್ಲಿ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಸಂತೋಷ, ಸಂಕಟ, ದುಃಖ, ಕೋಪ, ಆಸೆ, ನಿರಾಸೆ, ಕಾಮ, ಜಿಗುಪ್ಸೆ, ಅಸೂಯೆ, ಮೋಹ, ಅಹಂಕಾರ, ಕರುಣೆ, ಶಾಂತಿ, ಕ್ಷಮೆ, ಪ್ರೇಮ, ಮಮತೆ, ರಹಸ್ಯ, ಸೇಡು, ಹಟ; ಹೀಗೆ ಹಲವಾರು ತೀವ್ರವಾದ ಭಾವನೆಗಳು ಮನುಷ್ಯನ ಮನಸ್ಥಿತಿಯ ಮೇಲೆ ಗಾಢವಾದ ಪರಿಣಾಮ ಬೀರುತ್ತವೆ ಹಾಗೂ ಮನೋಭಾವವನ್ನು ರೂಪಿಸುವುದರಲ್ಲಿ ಪ್ರಧಾನವಾದ ಪಾತ್ರವನ್ನು ವಹಿಸುತ್ತವೆ.

ಮನಸ್ಥಿತಿಯನ್ನು ರೂಪಿಸುವಂತಹ ಭಾವನೆಗಳು ಹುಟ್ಟುವುದು ಮನಸ್ಸಿನ ಚಟುವಟಿಕೆಗಳಿಂದ. ಅದು ಒಳ ಮನಸ್ಸು (ಸುಪ್ತಚೇತನಾ) ಅಥವಾ ಚಟುವಟಿಕೆಯ ಹೊರ ಮನಸ್ಸು (ಜಾಗೃತಿ ಚೇತನಾ) ಯಾವುದರ ಚಟುವಟಿಕೆಗಳೇ ಆಗಿರಬಹುದು.

ಒಟ್ಟಾರೆ ಮನಸ್ಸು ವಿವಿಧ ಚಟುವಟಿಕೆಗಳನ್ನು ಮಾಡುವುದು ತನ್ನದೇ ಆಲೋಚನೆಗಳಿಂದ. ಆಲೋಚನೆಗಳನ್ನು ನಾವು ಚಟುವಟಿಕೆಗಳ ಮೂಲ ಎನ್ನಬಹುದು. ಭಾವನೆಗಳ ಹುಟ್ಟಿನ ಮೇಲೆ ಸಾಮಾನ್ಯವಾಗಿ ನಮ್ಮ ನಿಯಂತ್ರಣ ಇರುವುದಿಲ್ಲ. ಆದರೆ ಅವು ಹುಟ್ಟಿದ ಮೇಲೆ ಅವುಗಳನ್ನು ನಿಯಂತ್ರಿಸಲು ಸಾಧ್ಯವಿದೆ. ಹಾಗೆಯೇ ಮನಸ್ಸಿನ ಚಟುವಟಿಕೆಗಳ ಮೂಲವಾದ ಆಲೋಚನೆಗಳನ್ನೂ ಕೂಡಾ ಗಮನಿಸಲು, ಕ್ರೋಡೀಕರಿಸಲು, ಒಂದೆಡೆ ಹರಿಸಲು, ನಿಗಾ ಇಡಲು, ಅದರ ಹರವುಗಳನ್ನು ನಿಯಂತ್ರಿಸಲು ಸಾಧ್ಯವಿದೆ.

ಹಾಗಾಗಿಯೇ ಮೇಲೆ ಹೇಳಿದ ರೀತಿಯಲ್ಲಿ ಆಲೋಚನೆಗಳನ್ನು ಅಥವಾ ಮನಸ್ಸಿನಲ್ಲಿ ಪ್ರವೇಶಿಸುವ ವಿಷಯಗಳನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದರಲ್ಲಿ ನಮ್ಮ ಗಮನ ಹರಿಯಬೇಕು. ಮನಸ್ಸಿನಲ್ಲಿ ಪ್ರವೇಶಿಸುವ ವಿಷಯಗಳನ್ನು ಅಗತ್ಯವೋ, ಅನಗತ್ಯವೋ, ಈಗ ಬೇಕಾಗಿರುವುದೋ, ಮುಂದೆ ಯಾವಾಗಲೋ ಬೇಕಾಗಿರುವುದೋ, ಆರೋಗ್ಯಕ್ಕೆ ಪೂರಕವೋ ಅಥವಾ ಮಾರಕವೋ; ಇತ್ಯಾದಿ ಮಾನದಂಡಗಳಿಂದ ಅಳೆಯುವ ಗುಣವು ರೂಢಿಯಿಂದ ಬರುವಂತದ್ದು. ಹಠಾತ್ತನೆ ಅದು ಬಂದಕೂಡಲೇ ಅದರ ಪ್ರಭಾವಕ್ಕೆ ಒಳಗಾದಂತೆ ವರ್ತಿಸುವ ಬದಲು ಅಲ್ಲಿಗೆ ನಿಂತು ನೋಡುವ, ಪರಿಶೀಲಿಸುವ, ಗಮನಿಸುವ, ಸಾಕ್ಷೀಕರಿಸುವ ಗುಣವನ್ನು ನಾಟಕೀಯವಾಗಿಯೇ, ಉದ್ದೇಶಪೂರ್ವಕವಾಗಿಯೇ ಮಾಡುತ್ತಾ ಬರಬೇಕು. ಕೆಲವೇ ದಿನಗಳಲ್ಲಿ ಅದು ಕರಗತವಾಗುವುದು. ರೂಢಿಯಾಗುವುದು. ಒಮ್ಮೆ ರೂಢಿಯಾದರೆ ಆಗಾಗ ಭಾವನೆಗಳು ತೀವ್ರವಾಗುವಾಗ ಅದನ್ನು ಗಮನಿಸುವ, ಸರಿಯಾದ ದಿಕ್ಕಿಗೆ ಹರಿಯಬಿಡುವ ಮತ್ತು ವಿವೇಚಿಸಿ, ವಿಶ್ಲೇಷಿಸಿ ತೆಳುಗೊಳಿಸುವ ಅಥವಾ ತಳ್ಳಿ ಹಾಕಿಬಿಡುವಂತಹ ಚಟುವಟಿಕೆಗಳು ಸರಾಗವಾಗಿ ನಡೆಯಲಾರಂಭಿಸುತ್ತದೆ.

ಅಪೇಕ್ಷೆ ಮತ್ತು ನಿರೀಕ್ಷೆಗಳು ತೀವ್ರವಾದಷ್ಟೂ ಭಾವನೆಗಳು ತೀವ್ರವಾಗುತ್ತವೆ. ಇವುಗಳ ತೀವ್ರತೆಯಿಂದಾಗಿಯೇ ತೀವ್ರವಾದ ಅಸಮಾಧಾನ ಮತ್ತು ನಿರಾಶೆಗಳು ಉಂಟಾಗುತ್ತದೆ.

ವಿವೇಕದಿಂದ ಕೂಡಿರುವ ಮನಸ್ಸು ಮನೋಭವನದಲ್ಲಿ ವಿಷಯಗಳನ್ನು ಆದ್ಯತೆಯ ಮೇಲೆ ಅಚ್ಚುಕಟ್ಟಾಗಿ ಜೋಡಿಸುತ್ತದೆ ಮತ್ತು ಭಾವನೆಗಳನ್ನು ತೀವ್ರ ನಿಗಾ ಘಟಕದಲ್ಲಿಟ್ಟುಕೊಂಡು ವಿಪರೀತಗಳಿಗೆ ಹೋಗದಂತೆ ನೋಡಿಕೊಳ್ಳುತ್ತವೆ. ಮನಸ್ಸಿನ ಮತ್ತು ಭಾವನೆಗಳ ವಿಷಯಗಳು ಅಮೂರ್ತ ಮತ್ತು ವಸ್ತುಗಳಂತೆ ಎಣಿಕೆಗೆ ಹಾಗೂ ಹಿಡಿತಕ್ಕೆ ಸಿಗುವುದಿಲ್ಲ. ಹಾಗಾಗಿ ಮಾಡಬೇಕಾದ್ದೇನೆಂದರೆ, ಅವುಗಳನ್ನು ಒಂದು ಪುಸ್ತಕದಲ್ಲಿ ಬರೆಯುವುದು ಒಂದು ಒಳ್ಳೆಯ ತಂತ್ರ. ಅದನ್ನೇನೂ ಯಾರಿಗೂ ತೋರಿಸಿ, ಮೌಲ್ಯ ಮಾಪನ ಮಾಡಿಸಿಕೊಳ್ಳುವ ಅಗತ್ಯವಿಲ್ಲದ ಕಾರಣ, ಆ ಖಾಸಗಿ ಪುಸ್ತಕವನ್ನು ತಮಗೆ ಬೇಕಾದಂತೆ ಬರೆದುಕೊಳ್ಳಬಹುದು. ನಿಮ್ಮ ಗಮನಕ್ಕೆ ಬರುವಂತೆ, ನಿಮಗೆ ಅರ್ಥವಾಗುವಂತೆ, ಆದ್ಯತೆಗಳ ಮೇರೆಗೆ ವಿಷಯಗಳನ್ನು ನಿಮ್ಮದೇ ಶೈಲಿಯಲ್ಲಿ ಬರೆದುಕೊಳ್ಳುವಂತಹ ಶಿಸ್ತು ಬರಬೇಕು.

ಈ ರೀತಿಯ ಬರವಣಿಗೆಗಳು ಮತ್ತು ಗಮನಿಸುವಿಕೆಗಳು ನಮ್ಮ ಮನೋಭವನದಲ್ಲಿ ವಿಷಯಗಳನ್ನು ಅಚ್ಚುಕಟ್ಟಾಗಿ ಆದ್ಯತೆಯ ಆಧಾರದಲ್ಲಿ ಜೋಡಿಸಿಕೊಳ್ಳಲು ನೆರವಾಗುತ್ತವೆ. ಹಾಗೆಯೇ ತಂತಾನೆ ಹುಟ್ಟುವ ಭಾವನೆಗಳನ್ನು ತೀವ್ರವಾಗಲು ಮತ್ತು ವಿಪರೀತವಾಗಲು ಬಿಡದೇ ಸರಿಯಾದ ದಿಕ್ಕಿಗೆ ಹರಿಯುವಂತೆ ಮಾಡಲು ಸಾಧ್ಯವಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಯೋಗೇಶ್ ಮಾಸ್ಟರ್

contributor

Similar News

ಮಧುರ ವಿಷ
ಕಿವಿಗೊಡೋಣ
ಜಡತೆಯ ರೋಗ