ಮಧುರ ವಿಷ

Update: 2024-03-17 04:59 GMT

ಒಳಿತನ್ನೇ ಯೋಚಿಸಿ, ಸಕಾರಾತ್ಮಕ ವಾಗಿಯೇ ಭಾವಿಸಿ ಎಂದು ಸದೃಢ ಮನಸ್ಸಿನ ಶಕ್ತಿಗಾಗಿ ಪ್ರೇರಣೆ ನೀಡುವವರು ಸಲಹೆ ನೀಡುವರು.

ಸಕಾರಾತ್ಮಕವಾಗಿರುವ ಆಲೋಚನೆಗಳಿಂದ ಮನಸ್ಸೇನೋ ಸಶಕ್ತವಾಗುತ್ತದೆ ಎಂಬುದು ನಿಜ. ಆದರೆ ಅದು ವಿಷಮಯವಾದ ವಿಷಯಕ್ಕೂ ಎಡೆ ಮಾಡಿಕೊಡುವ ಬಗ್ಗೆಯೂ ನಾವು ಎಚ್ಚರವಿರಬೇಕು.

ನಾವು ಒಳ್ಳೆಯದನ್ನೇ ಭಾವಿಸಬೇಕು, ಎಲ್ಲವೂ ಒಳ್ಳೆಯದಕ್ಕೇ ಎಂದು ಅಂದುಕೊಳ್ಳ ಬೇಕು ಎಂದು ನಮ್ಮಲ್ಲಿ ಹುಟ್ಟಿದ್ದ ದುಃಖ, ನೋವು, ಸಂಕಟ, ಅಸೂಯೆ, ಅಸಹನೆ, ಕೋಪ ಮೊದಲಾದ ಭಾವನೆಗಳನ್ನು ಅಡ ಗಿಸಿಟ್ಟುಕೊಳ್ಳುವುದು ಅಥವಾ ಅದುಮಿ ಹಿಡಿ ಯುವುದು ಮಾನಸಿಕ ಆರೋಗ್ಯಕ್ಕೆ ಒಳಿತಲ್ಲ.

ನೋವು ಮತ್ತು ಕೋಪದಂತಹ ಅಹಿತಕರವಾದಂತಹ ಭಾವನೆಗಳನ್ನು ಏನೂ ಆಗಿಲ್ಲ ಎಂಬಂತೆ ತೋರ್ಪಡಿಸುವುದು ಮನಸ್ಸಿಗೂ ಮತ್ತು ಸಂಬಂಧಗಳಿಗೂ ಸಮಸ್ಯೆಯಾಗಿ ಪರಿಣಮಿಸುವುದು. ನಮ್ಮಲ್ಲಿ ಯಾವುದೇ ಬಗೆಯ ಅಹಿತಕರವಾದ ಭಾವನೆ ಉಂಟಾದಾಗ ಅದನ್ನು ಹೊರಗೆಡವಲು ದಾರಿಯನ್ನು ಕಂಡುಕೊಳ್ಳಲೇ ಬೇಕು.

ವ್ಯಕ್ತಿ ಒತ್ತಡಕ್ಕೆ ಸಿಲುಕಿ ಖಿನ್ನತೆಗೆ ಜಾರುವಷ್ಟು ತನ್ನ ನಕಾರಾತ್ಮಕವಾದ ಭಾವನೆಗಳನ್ನು ಅದುಮಿಟ್ಟುಕೊಂಡು ಇತರ ವ್ಯಕ್ತಿಗಳ ಜೊತೆಗೆ ಏನೂ ಆಗೇ ಇಲ್ಲವೆಂದು ವರ್ತಿಸುವಾಗ, ಆ ಭಾವನೆಯ ಬಗ್ಗೆ ಅರಿವೇ ಉಂಟಾಗದು. ಹಾಗಾಗಿ ಅವರು ತಮ್ಮ ವರ್ತಿಸುವ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳದೆ ಮುಂದುವರಿಯುವರು. ಈ ವ್ಯಕ್ತಿಯಲ್ಲಿ ಮತ್ತೆ ಅದೇ ಬಗೆಯ ಭಾವನೆಗಳು ಹುಟ್ಟುತ್ತಾ ಮನಸ್ಸಿನಲ್ಲಿ ಅಹಿತಕರವಾದ ಒತ್ತಡವು ಹೆಚ್ಚುತ್ತಾ ಹೋಗುತ್ತದೆ.

ಯಾವುದೇ ವ್ಯಕ್ತಿಯು ತನ್ನಲ್ಲಿ ಉಂಟಾಗುವ ಮನೋಭಾವನೆಯನ್ನು ವ್ಯಕ್ತಪಡಿಸುವುದರಲ್ಲಿ ಹಿಂದೇಟು ಹಾಕಬಾರದು. ನಾನು ಇದನ್ನು ಹೇಳಿದರೆ ಅಥವಾ ಅವರ ಮಾತಿನಿಂದ ಅಥವಾ ಅವರ ನಡವಳಿಕೆಯಿಂದ ನನ್ನಲ್ಲಿ ಇಂತಹ ಭಾವನೆ ಉಂಟಾಯಿತು ಎಂದು ಅವರಿಗೆ ಹೇಳಿದರೆ ಅವರಿಗೆ ಬೇಸರವಾಗುತ್ತದೆ ಎಂದೋ ಅಥವಾ ಅವರ ಮತ್ತು ನನ್ನ ಸಂಬಂಧಕ್ಕೆ ಧಕ್ಕೆ ಆಗುವುದು ಎಂದೋ ಭಯಪಟ್ಟುಕೊಂಡು ತಮ್ಮ ನಿಜವಾದ ಭಾವನೆಯನ್ನು ಅಡಗಿಸಿಟ್ಟುಕೊಳ್ಳಬಾರದು. ಆದರೆ ತಾವು ತಮ್ಮಲ್ಲಿ ಹುಟ್ಟಿದ ಭಾವನೆ ಯನ್ನು ಹೇಳುವ ರೀತಿಯ ಬಗ್ಗೆ ಖಂಡಿತ ಎಚ್ಚರಿಕೆಯನ್ನು ವಹಿಸಬೇಕು. ತಮ್ಮ ಮಾತನ್ನು ಅವರಿಗೆ ಹೇಳುವಾಗ ಭಾವೋದ್ರೇಕಕ್ಕೆ ಒಳಗಾಗಿ, ಉನ್ಮತ್ತತೆಗೆ ಒಳಗಾಗಿ, ಮಾನಸಿಕ ಸಮತೋಲನ ತಪ್ಪಿರುವಂತಹ ಸ್ಥಿತಿಗೆ ಹೋಗದೆ ಇರುವಂತೆ ತಮ್ಮ ಮನಸ್ಸನ್ನು ಸಜ್ಜುಗೊಳಿಸಿಕೊಳ್ಳಬೇಕು.

ನಿನ್ನ ಮಾತಿನಿಂದ ಅಥವಾ ನಿನ್ನ ವರ್ತನೆಯಿಂದ ನನಗೆ ಬೇಸರವಾಯಿತು. ಈ ರೀತಿ ನೀನು ನಡೆದುಕೊಳ್ಳಲು ಏನು ಕಾರಣ? ನಾವು ಪರಸ್ಪರ ಗೌರವ ಮತ್ತು ಪ್ರೀತಿಯಿಂದ ನಡೆದುಕೊಳ್ಳುವಂತಹ ಸಂಬಂಧಕ್ಕೆ ಇದು ಒಳಿತಲ್ಲ ಎಂಬುದನ್ನು ಸ್ಪಷ್ಟವಾಗಿಯೂ ಮತ್ತು ನೇರವಾಗಿಯೂ ಹೇಳಲೇಬೇಕು. ಆದರೆ ಮರೆಯಲೇ ಬಾರದಾಗಿರುವ ವಿಷಯವೆಂದರೆ, ಅನುದ್ವೇಗ ದಿಂದ ಇರುವುದು. ಭಾವೋದ್ರೇಕಕ್ಕೆ ಒಳಗಾಗದಿರುವುದು. ಅದಕ್ಕೆ ನಿರ್ಣಯ ಮತ್ತು ತಯಾರಿ ಬೇಕಿರುತ್ತದೆ. ಒಂದು ವೇಳೆ ಭಾವುಕವಾದರೂ ಪರವಾಗಿಲ್ಲ. ಆದರೆ ಮಾನಸಿಕವಾಗಿ ಸಮತೋಲನ ಕಾಯ್ದುಕೊಳ್ಳು ವುದು ಬಹಳ ಮುಖ್ಯವಾದದ್ದು. ತಮಗೆ ತಾವೇ ಹೀಗೆ ಹೇಳುತ್ತೇನೆ ಎಂದು ಸಿದ್ಧವಾಗುವುದರಿಂದ ಸಾಧ್ಯವಾಗುತ್ತದೆ.

ಎಷ್ಟೋ ಸಲ ಸಣ್ಣ ಪುಟ್ಟ ಸಮಸ್ಯೆ, ಸಂಘರ್ಷ ಅಥವಾ ಅಪಘಾತವಾದಾಗ ಇದಕ್ಕಿಂತ ದೊಡ್ಡದೇನೂ ಆಗಿಲ್ಲವಲ್ಲ ಎಂದು ಸಮಾಧಾನ ಪಡಿಸಿಕೊಳ್ಳುವುದು ಎಷ್ಟೋ ಜನಕ್ಕೆ ಸಕಾರಾತ್ಮಕವಾದ ಧೋರಣೆ ಎಂಬ ಭಾವನೆ ಇದೆ. ಅಂದರೆ ಅಪಘಾತವಾಗಿ ಕೈ ಮುರಿಯಿತು ಎಂದರೆ, ಸದ್ಯ ಪ್ರಾಣ ಹೋಗಿಲ್ಲವಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವುದೂ ಮಧುರವಾದ ವಿಷವೇ. ಕೈ ಮುರಿದಿರುವುದ ರಿಂದಲೂ ನೋವೆಂಬುದು ಆಗಿರುತ್ತದೆ. ಆ ನೋವಿಗೆ ಚಿಕಿತ್ಸೆ ಮತ್ತು ಮಾನಸಿಕವಾಗಿ ಸಾಂತ್ವಾನ ಬೇಕಾಗಿರುತ್ತದೆ. ಒಂದು ನೋವನ್ನು ಶಮನ ಮಾಡಿಕೊಳ್ಳುವುದಕ್ಕೆ ಮತ್ತೊಂದು ಭೀಕರತೆಯನ್ನು ಮುಂದಿಟ್ಟುಕೊಳ್ಳುವುದು ಸಕಾರಾತ್ಮಕವಾದ ವಿಷಯವೇನಲ್ಲ. ಈ ನೋವು ಅಲ್ಪ ಕಾಲದಲ್ಲಿ ಹೊರಟು ಹೋಗುತ್ತದೆ, ಗಾಯ ವಾಸಿಯಾಗುತ್ತದೆ ಎಂಬುದರ ಕಡೆಗೆ ಗಮನ ಕೊಡುವುದು ಸಕಾರಾತ್ಮಕವಾದ ವಿಷಯ.

ಏನೂ ಮಾಡಕ್ಕಾಗಲ್ಲ. ಆಗೋದು ಆಗೇ ಆಗತ್ತೆ ಎನ್ನುವ ಮಾತೂ ಮಧುರವಿಷದ್ದೇ. ಆಗೋದು ಆಗೇ ಆಗತ್ತೆ ಎಂಬ ಮಾತಿನಿಂದ ನಕಾರಾತ್ಮಕವಾದ ಪ್ರಸಂಗವನ್ನು ಒಪ್ಪಿಕೊಂಡಂತೆಯೂ ಮತ್ತು ಸ್ವೀಕರಿಸಿದಂತೆಯೂ ಆಗುತ್ತದೆ.

ಇನ್ನು ಕೆಲವರು ನೋವುಂಟಾಗುತ್ತದೆ ಎಂದು ಆ ಸನ್ನಿವೇಶ ಮತ್ತು ಪ್ರಸಂಗದಿಂದಲೇ ತಪ್ಪಿಸಿಕೊಳ್ಳಲು ಯತ್ನಿಸುವುದು. ಉದಾಹರಣೆಗೆ ಬಹಳ ಮುದ್ದಿನಿಂದ ಸಾಕಿದ ನಾಯಿ ಎಂತದ್ದೋ ಕಾಯಿಲೆ ಬಂದು ಸತ್ತು ಹೋಯಿತೆಂದು ಮತ್ತೆ ನಾಯಿಯನ್ನೇ ತರಲು ಇಷ್ಟಪಡದ ಜನರು ಇರುತ್ತಾರೆ. ನಾಯಿಯ ಜೀವಿತಾವಧಿ ಸಹಜವಾಗಿ ಮನುಷ್ಯನದಕ್ಕಿಂತ ಕಡಿಮೆಯೇ. ಅದನ್ನು ಒಪ್ಪಿಕೊಳ್ಳಲು ಸಿದ್ಧರಿರಬೇಕು. ನಾಯಿ ಸತ್ತಂತೆ ನಮ್ಮ ಕುಟುಂಬದ ಇತರ ಸದಸ್ಯರೂ, ಮಿತ್ರರೂ ಸಾಯುತ್ತಾರೆ. ಅವರ ಸಾವು ನೋವುಗಳನ್ನು ಇವರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ತಾವು ಸಾಕದೇ ಇರಲು ಮನೆಯಲ್ಲಿ ನೋಡಿಕೊಳ್ಳಲು ಯಾರೂ ಇಲ್ಲ ಎಂದೋ ಅಥವಾ ಸಮಯ ಕೊಡಲು ಸಾಧ್ಯವಾಗುವುದಿಲ್ಲ ಎಂದೋ ಬೇರೆ ಲೌಕಿಕ ಅಥವಾ ಪ್ರಾಯೋಗಿಕ ಅಡೆತಡೆಗಳಿದ್ದು ಬೇಡವೆಂದು ತೀರ್ಮಾನಿಸುವುದು ಪರವಾಗಿಲ್ಲ. ಆದರೆ ಮಾನಸಿಕ ಅಥವಾ ಭಾವನಾತ್ಮಕ ಕಾರಣಗಳಿಗೆ ಅವರು ತಪ್ಪಿಸಿಕೊಳ್ಳುತ್ತಿದ್ದಾರೆಂದರೆ ಅದು ಮಧುರವಿಷದ ಭಾಗವಾಗುತ್ತದೆ.

ಕೆಲವರು ಅಳುವ ಬದಲು ನಕ್ಕು ಬಿಡುವುದು ತಮ್ಮ ಸಾಮರ್ಥ್ಯವೆಂದು ಭಾವಿಸುತ್ತಾರೆ. ಆದರೆ ಅಳು ಎಂಬುದು ಅಹಿತವೇ. ಅದು ತನ್ನ ಪ್ರಭಾವವನ್ನು ಅಂತರಂಗದ ಮೇಲೆ ಬೀರಿಯೇ ತೀರುತ್ತದೆ.

ಹಾಗೆಯೇ ಯಾರಾದರೂ ಅತ್ತರೆ, ಕೋಪಿಸಿ ಕೊಂಡರೆ, ನೋವಿಗೆ ಹೆದರಿದರೆ, ಮಾತ್ರವಲ್ಲ ಅಸೂಯೆ, ಅಸಹನೆ, ಭಯವೇ ಮೊದಲಾದ ಭಾವನೆಗಳನ್ನು ವ್ಯಕ್ತಪಡಿಸಿದರೆ, ಅವರನ್ನು ಆ ಕಾರಣಕ್ಕಾಗಿ ಖಂಡಿಸಬಾರದು. ಅಂತಹ ಭಾವನೆಗಳನ್ನು ಲೋಕರೂಢಿಯಾದ ದೃಷ್ಟಿಯಲ್ಲಿ ನೋಡುತ್ತಾ ಇಷ್ಟಕ್ಕೆಲ್ಲಾ ಅಳುತ್ತೀಯಾ?, ಇದಕ್ಕೆಲ್ಲಾ ಕೋಪಿಸಿಕೊಳ್ಳುತ್ತೀಯಾ?, ಇಷ್ಟು ದೊಡ್ಡವರಾಗಿ ಭಯಪಡುತ್ತೀರಲ್ಲಾ? ಎಂದು ಅವರಿಗೆ ತಮ್ಮ ಭಾವನೆಯ ಬಗ್ಗೆ ನಾಚಿಕೆ ಉಂಟಾಗುವಂತೆ ಮಾಡಬಾರದು. ಅವರು ಸಂಕೋಚದಿಂದ ಅವುಗಳನ್ನು ವ್ಯಕ್ತಪಡಿಸಲಾಗದೆ ಅದನ್ನು ಮತ್ತಷ್ಟು ಅದುಮಿಡುವ ಪ್ರಯತ್ನಗಳನ್ನು ಮಾಡುತ್ತಾ ಅದರಿಂದ ಮಾನಸಿಕವಾದ ಒತ್ತಡ ಉಂಟಾಗುವುದಲ್ಲದೆ ಅವು ಮಾನಸಿಕ ಸಮಸ್ಯೆಗಳಿಗೆ ನೇರ ಕಾರಣಗಳಾಗುತ್ತವೆ.

ವಿಷವನ್ನು ಎಷ್ಟು ಮಧುರವಾಗಿ ಭಾವಿಸಿದರೂ ಅದು ವಿಷವೇ!

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಯೋಗೇಶ್ ಮಾಸ್ಟರ್,

contributor

Similar News

ಮನೋಭವನ
ಕಿವಿಗೊಡೋಣ
ಜಡತೆಯ ರೋಗ