ಗ್ರಾಹಕರ ಖಾತೆಗಳಿಂದ ಹಣ ಕಳವು ಮಾಡುತ್ತಿದ್ದ ಬ್ಯಾಂಕ್ ಸಿಬ್ಬಂದಿ ಸೆರೆ

Update: 2023-01-29 18:36 GMT

ಬೆಂಗಳೂರು: ಗ್ರಾಹಕರ ಅರಿವಿಗೆ ಬಾರದಂತೆ ಅವರ ಖಾತೆಗಳಲ್ಲಿದ್ದ 4.92 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಅಕ್ರಮವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು, ಎಲ್‍ಐಸಿ ಬಾಂಡ್‍ಗಳನ್ನು ಖರೀದಿಸಿ ವಂಚನೆ ಮಾಡುತ್ತಿದ್ದ ಐಡಿಬಿಐ ಬ್ಯಾಂಕ್‍ನ ರಿಲೇಷನ್‍ಶಿಪ್ ಮ್ಯಾನೇಜರ್ ಅನ್ನು  ಸಂಪಂಗಿರಾಮನಗರ ಠಾಣಾ ಠಾಣಾ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ಮೂಲತಃ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯವರಾದ ಸುಚೀಲಾ (34) ಬಂಧಿತ ಆರೋಪಿಯಾಗಿದ್ದು, ಈಕೆ ಹುನಸೆಮಾರೇನಹಳ್ಳಿಯ ಭಾರತಿನಗರದಲ್ಲಿ  ವಾಸವಾಗಿದ್ದರು. ಆರೋಪಿ ಕೆಲಸ ಮಾಡುತ್ತಿದ್ದ ಮಿಷನ್ ರಸ್ತೆಯ ಶಾಖೆಯ ಕಂಪ್ಯೂಟರ್ ಹಾಗೂ 23 ಲಕ್ಷ ಮೊತ್ತ ಒಂದು ಬಾಂಡ್ ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ನಗರದ ಮಿಷನ್ ರಸ್ತೆಯ ಐಡಿಬಿಐ ಶಾಖೆಯಲ್ಲಿ ರಿಲೇಶನ್ ಮ್ಯಾನೇಜರ್ ಆಗಿ ಸುಚೀಲಾ 2022ರ ಜೂನ್ 13 ರಿಂದ ಡಿ.31 ರವರೆಗೆ ಇಲ್ಲಿ ಕಾರ್ಯನಿರ್ವಹಿಸಿದ್ದು, ಈ ಸಮಯದಲ್ಲಿ  ಗ್ರಾಹಕರ ಖಾತೆಗಳಿಂದ ಅವರ ಅರಿವಿಗೆ ಬಾರದಂತೆ ಹಣವನ್ನು ತೆಗೆದು ಅದನ್ನು ಎಲ್‍ಐಸಿ ಬ್ಯಾಂಡ್‍ಗಳಲ್ಲಿ ತೊಡಗಿಸಿ ಸುಮಾರು 1,44,48,649 ರೂ. ವರ್ಗಾವಣೆ ಮಾಡಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. 

ಈ ಹಿಂದೆ ಗಾಂಧಿನಗರ ಶಾಖೆಯಲ್ಲೂ ಇದೇ ರೀತಿ ವರ್ಗಾವಣೆ ಮಾಡಿದ್ದ ಹಣವನ್ನು ಸರಿದೂಗಿಸಲು 23-12-2022ರಲ್ಲಿ ಒಂದೇ ದಿನ 4.92 ಕೋಟಿ ರೂ., ಬೇರೆ ಬೇರೆ ಖಾತೆಗೆ ವರ್ಗಾವಣೆ ಮಾಡಿ ಮೋಸ ಮಾಡಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಬಿಬಿಐ ಬ್ಯಾಂಕ್‍ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಸಂಗಮೇಶ್ವರ ಅವರು, ಸುಚೀಲಾ ಅವರು ಗ್ರ್ರಾಹಕರ ಖಾತೆಗಳಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿ ಬ್ಯಾಂಕ್‍ಗೆ ವಂಚನೆ ಮಾಡಿದ್ದಾರೆ ಎಂದು ಸಂಪಂಗಿರಾಮನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Similar News