ಪ್ರಚೋದನಕಾರಿ ಭಾಷಣಗೈದ ಶರಣ್ ಪಂಪ್‌ವೆಲ್ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಮನವಿ

Update: 2023-01-30 13:03 GMT

ಮಂಗಳೂರು: ಪ್ರಚೋದನಕಾರಿ ಭಾಷಣಗೈದ ಆರೋಪದ ಮೇಲೆ ವಿಹಿಂಪ ಸಂಘಟನೆಯ ಶರಣ್ ಪಂಪ್‌ವೆಲ್ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ನಿಯೋಗವು ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ನೇತೃತ್ವದಲ್ಲಿ ಸೋಮವಾರ ಮಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ರಾಜ್ಯ ವಿಧಾನಸಭಾ ಚುನಾವಣೆಗೆ ಎರಡು ತಿಂಗಳು ಬಾಕಿ ಇರುವಾಗ ಕೋಮುಸಂಘರ್ಷವನ್ನು ಉಂಟುಮಾಡುವ ಮತ್ತು ಜನಾಂಗೀಯ ಹತ್ಯೆಗೆ ಪ್ರಚೋದನೆ ನೀಡುವ ಭಾಷಣಗಳು ಮಾಧ್ಯಮದ ಮುಖಾಂತರ ವೈರಲ್ ಆಗುತ್ತಾ ಇದೆ. ಶರಣ್ ಪಂಪ್‌ವೆಲ್ ಮಾಡಿದ ಭಾಷಣವು ಇದಕ್ಕೆ ಉದಾಹರಣೆ ಆಗಿದೆ. ಪ್ರವೀಣ್ ನೆಟ್ಟಾರ್ ಹತ್ಯೆಗೆ ಪ್ರತೀಕಾರವಾಗಿ ಮಂಗಳಪೇಟೆಯ ಫಾಝಿಲ್‌ನನ್ನು ನಮ್ಮ ಹುಡುಗರು ಎಲ್ಲರ ಎದುರೇ ಕೊಲೆ ಮಾಡಿದ್ದಾರೆ. ಇದು ನಮ್ಮ ಯುವಕರ ಶೌರ್ಯ, ತಾಕತ್ತು ಎಂದು ಹೇಳುತ್ತಾ ಇನ್ನು ಮುಂದೆ ಇಂತಹ ದಾಳಿಗಳು ಇನ್ನಷ್ಟು ನಡೆಯಲಿವೆ ಎಂಬ ಸೂಚನೆಯನ್ನು ಕೊಟ್ಟಿದ್ದಾನೆ. ಇದು ತೀರಾ ಆತಂಕಕಾರಿ ಬೆಳವಣಿಗೆಯಾಗಿದೆ. ನಾಗರಿಕ ಸಮಾಜದಲ್ಲಿ ಭೀತಿಯನ್ನು ಉಂಟು ಮಾಡಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಶರಣ್ ಪಂಪ್‌ವೆಲ್‌ನ ಈ ಅತಿರೇಕದ ದ್ವೇಷ ಭಾಷಣ, ಕೊಲೆಗಳ ಸಮರ್ಥನೆ, ಬೆದರಿಕೆ, ಜನಾಂಗೀಯ ಹತ್ಯೆಗೆ ಪ್ರಚೋದನೆ ನೀಡುವಂತಿದೆ. ನಿರುದ್ಯೋಗ’, ಬಡತನದಿಂದ ಹತಾಶಗೊಂಡಿರುವ ಯುವಕರ ಕೈಗೆ ತಲವಾರು ನೀಡಿ ಗಲಭೆಗೆ ಇಳಿಸುವ ಸಮಾಜವನ್ನು ವಿಭಜಿಸುವ ಈ ಮನಸ್ಥಿತಿಯು ಅತ್ಯಂತ ಅಪಾಯಕಾರಿಯಾಗಿದೆ. ಇದು ಚುನಾವಣಾ ಸನಿಹದಲ್ಲಿರುವ ಸಂದರ್ಭ ಮತೀಯ ಧ್ರುವೀಕರಣ, ರಾಜಕೀಯ ದುರುದ್ದೇಶಗಳನ್ನು ಹೊಂದಿದೆ. ಹಾಗಾಗಿ ಆತನನ್ನು ಕಠಿಣ ಕಾಯ್ದೆಯಡಿಯಲ್ಲಿ ಬಂಧಿಸಿ, ರಾಜ್ಯದಿಂದಲೇ ಗಡಿಪಾರು ಮಾಡುವಂತೆ ಕಾಂಗ್ರೆಸ್ ಒತ್ತಾಯಿಸಿದೆ.

Similar News