ಮಂಡೆಕೋಲು ಗ್ರಾಮದಲ್ಲಿ ಮುಂದುವರಿದ ಕಾಡಾನೆ ಹಾವಳಿ: ಕೃಷಿಗೆ ಹಾನಿ

Update: 2023-01-30 17:01 GMT

ಸುಳ್ಯ: ಗಡಿ ಪ್ರದೇಶವಾದ ಮಂಡೆಕೋಲಿನಲ್ಲಿ ಕಾಡಾನೆ ಹಾವಳಿ ವ್ಯಾಪಕವಾಗಿ ಮುಂದುವರಿದಿದೆ. ಮಂಡೆಕೋಲು ಗ್ರಾಮದ ಮುರೂರು ಭಾಗದಲ್ಲಿ ಭಾನುವಾರ ರಾತ್ರಿ ಆನೆಗಳ ಹಿಂಡು ದಾಳಿ ಮಾಡಿ ಕೃಷಿ ಹಾನಿ ಮಾಡಿದೆ. ಹಲವು ದಿನಗಳಿಂದ ಈ ಭಾಗದಲ್ಲಿ ಆನೆಗಳ ಉಪಟಳ ಹೆಚ್ಚಾಗಿದ್ದು ಕೃಷಿಕರು ಕಂಗಲಾಗಿದ್ದಾರೆ.

ಮುರೂರು ಭಾಗದಲ್ಲಿ ಆನೆಗಳು ತೆಂಗು, ಬಾಳೆ, ಅಡಿಕೆ ಕೃಷಿ ನಾಶ ಮಾಡಿದೆ. ಸ್ಥಳೀಯರು ಮತ್ತು ಅರಣ್ಯ ಇಲಾಖೆಯವರು ಸೇರಿ ಪಟಾಕಿ ಸಿಡಿಸಿ ಆನೆಗಳನ್ನು ದೂರ ಸರಿಸಿದರು. ಕಳೆದ ಒಂದು ತಿಂಗಳಿನಿಂದ ಮಂಡೆಕೋಲು ಗ್ರಾಮದ ಕಜಳ ಭಾಗದ ಕಾಡಿನಲ್ಲಿ ಬೀಡು ಬಿಟ್ಟಿರುವ ಆನೆಗಳ ಹಿಂಡು ಪದೇ ಪದೇ ನಾಡಿಗೆ ಇಳಿದು ಕೃಷಿ ನಾಶ ಮಾಡುತ್ತಿದೆ.

ಮುರೂರು, ದೇವರಗುಂಡ ಸೇರಿದಂತೆ ಮಂಡೆಕೋಲು ಗ್ರಾಮದ ವಿವಿಧ ಭಾಗಗಳಲ್ಲಿ ಕಾಡಾನೆಗಳು ನಿರಂತರ ಕೃಷಿ ಹಾನಿ ಮಾಡುತಿದೆ. ಈ ಆನೆಗಳನ್ನು ಇಲ್ಲಿಂದ ದೂರ ಅಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Similar News