‘ದಿ ಕಾರವಾನ್’ ಕಾರ್ಯನಿರ್ವಾಹಕ ಸಂಪಾದಕ ವಿನೋದ್ ಕೆ. ಜೋಸ್ ರಾಜೀನಾಮೆ

Update: 2023-01-31 07:56 GMT

ಹೊಸದಿಲ್ಲಿ: ಹಿರಿಯ ಪತ್ರಕರ್ತ ಹಾಗೂ ಖ್ಯಾತ ಮ್ಯಾಗಝಿನ್‌ ‘ದಿ ಕಾರವಾನ್’ ಇದರ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ವಿನೋದ್ ಕೆ. ಜೋಸ್ ಜನವರಿ 31, ಮಂಗಳವಾರ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಫೇಸ್ಬುಕ್‌ ಪೋಸ್ಟ್‌ ಒಂದನ್ನು ಮಾಡಿರುವ ವಿನೋದ್‌ ಜೋಸ್‌ ತನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರಲ್ಲದೆ ‘ದಿ ಕಾರವಾನ್’ ಜೊತೆಗಿನ ತಮ್ಮ ಒಂದೂವರೆ ದಶಕಕ್ಕೂ ಹೆಚ್ಚು ಸಮಯದ ನಂಟನ್ನು ʼಅದ್ಭುತʼ ಎಂದು ವರ್ಣಿಸಿದ್ದಾರೆ.

ವಿನೋದ್‌ ಅವರು ‘ದಿ ಕಾರವಾನ್’  ಗೆ 2009 ರಲ್ಲಿ ಸೇರಿದ್ದರು. ಆಗ ಅವರ ವಯಸ್ಸು 29 ಆಗಿತ್ತು. ಕ್ಯಾರವಾನ್‌ನಲ್ಲಿ ಹಲವು ಸ್ಫೋಟಕ ವರದಿಗಳನ್ನು ಪ್ರಕಟಿಸುವಲ್ಲಿ ವಿನೋದ್‌ ಜೋಸ್‌ ಪ್ರುಖ ಪಾತ್ರ ವಹಿಸಿದ್ದರು. ಇವುಗಳಲ್ಲಿ ಅಮಿತ್‌ ಶಾ ವಿರುದ್ಧದ ನಕಲಿ ಎನ್‌ಕೌಂಟರ್‌ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶ ಲೋಯಾ ಸಾವು ಪ್ರಕರಣ, ಕಾಮನ್ವೆಲ್ತ್‌ ಗೇಮ್ಸ್‌ ಹಗರಣ, ಅದಾನಿ ಕೋಲ್‌ಗೇಟ್‌ ಹಗರಣ ಮುಂತಾದವು ಸೇರಿದ್ದವು.

‘ದಿ ಕಾರವಾನ್’ ಪ್ರಕಾಶಕ-ಸಂಪಾದಕ ಅನಂತ್‌ ನಾಥ್‌ ತಮಗೆ ನೀಡಿದ  ಅವಕಾಶ ಮತ್ತು ಪ್ರೋತ್ಸಾಹವನ್ನೂ ವಿನೋದ್‌ ಸ್ಮರಿಸಿದ್ದಾರೆ. "2009 ರಲ್ಲಿ ‘ದಿ ಕಾರವಾನ್’ ಸೇರಿದಾಗ ಅದರ ಕಚೇರಿ ಒಂದು ಸಣ್ಣ ಕಾರಿನಷ್ಟೇ ದೊಡ್ಡದಾಗಿತ್ತು, ಆದರೆ ಇಂದು ಹತ್ತು ಪಾಲು ದೊಡ್ಡದಾಗಿದೆ," ಎಂದು ಜೋಸ್‌ ಬರೆದಿದ್ದಾರೆ.

ತಮ್ಮ ಪಯಣದುದ್ದಕ್ಕೂ ತಮಗೆ ಸಹಕಾರ ನೀಡಿದ ಹಲವು ಪತ್ರಕರ್ತರು, ವರದಿಗಾರರನ್ನು ಅವರು ಸ್ಮರಿಸಿದ್ದಾರೆ.

2014 ರಲ್ಲಿ ‘ದಿ ಕಾರವಾನ್’ನ ಪೊಲಿಟಿಕಲ್‌ ಎಡಿಟರ್‌ ಆಗಿದ್ದ ಹರ್‌ತೋಷ್‌ ಅವರು ತಮ್ಮ ಸ್ಥಾನದಲ್ಲಿ ಕಾರ್ಯನಿರ್ವಾಹಕ ಸಂಪಾದಕರಾಗಲಿದ್ದಾರೆ ಎಂದು ವಿನೋದ್‌ ಹೇಳಿದ್ದಾರೆ.

ತಾನು ಒಪ್ಪಂದವೊಂದರ ಪ್ರಕಾರ ಬರೆಯಬೇಕಾಗಿರುವ ಕೃತಿಯೊಂದನ್ನು ಪೂರ್ಣಗೊಳಿಸುವ ಕೆಲಸದಲ್ಲಿ ನಿರತರಾಗುವುದಾಗಿಯೂ ವಿನೋದ್‌ ಹೇಳಿದ್ದಾರೆ.

ಇದನ್ನೂ ಓದಿ: ಹಿಂಡೆನ್‌ಬರ್ಗ್‌ ವರದಿ ಬೆನ್ನಲ್ಲೇ ಜಾಗತಿಕ ಟಾಪ್‌ 10 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದ ಗೌತಮ್‌ ಅದಾನಿ

Similar News