ಬಡವರು ಗೃಹ ನಿರ್ಮಾಣ ಮಾಡಲು ಕಾನೂನು ಸರಳೀಕರಣ: ಮುಖ್ಯಮಂತ್ರಿ ಬೊಮ್ಮಾಯಿ

Update: 2023-01-31 12:18 GMT

ಬೆಂಗಳೂರು, ಜ. 31: ಬಡವರು ನಿವೇಶನಕೊಳ್ಳಲು ಹಾಗೂ ಗೃಹ ನಿರ್ಮಾಣ ಮಾಡಿಕೊಳ್ಳಲು ಅನುಕೂಲವಾಗುವಂತೆ ಭೂ ಕಂದಾಯ ಕಾನೂನು ಸರಳೀಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಯಲಹಂಕ ತಾಲ್ಲೂಕಿನ ಅಗ್ರಹಾರ ಪಾಳ್ಯದಲ್ಲಿ ವಸತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ವಸತಿ ಸಮುಚ್ಛಯಗಳ ಲೋಕಾರ್ಪಣೆ ಮತ್ತು ಮನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಂದಾಯ ಕಾಯ್ದೆಯಲ್ಲಿ ಯಾವುದೇ ನಿರ್ದಿಷ್ಟ ರಿಯಾಯಿತಿಗಳಿಲ್ಲದೆ ಬಡವರಿಗೆ ಮನೆ ಕಟ್ಟುವುದು ಕಷ್ಟವಾಗಲಿದೆ. ಹೀಗಾಗಿ ಕಾನೂನಿಗೆ ತಿದ್ದುಪಡಿ ತಂದು, ಕೈಗೆಟುಕುವ ಬೆಲೆಯಲ್ಲಿ ಜಮೀನು ದೊರೆಯುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದರು.

ಆರು ವರ್ಷಗಳ ಹಿಂದೆ, ಹಿಂದಿನ ಸರಕಾರ 15 ಲಕ್ಷ ಮನೆಗಳನ್ನು ಒದಗಿಸುವ ಘೋಷಣೆ ಮಾಡಿತ್ತು. ಆದರೆ, ಅದಕ್ಕೆ ಅನುದಾನ ನಿಗದಿಪಡಿಸಲು ವಿಫಲವಾಗಿತ್ತು. ಇದೀಗ ನಮ್ಮ ಸರಕಾರವು 10 ಲಕ್ಷ ಮನೆಗಳನ್ನು ಒದಗಿಸಲು ಗುರಿ ಹೊಂದಿದ್ದು, ಈಗಾಗಲೇ 5 ಲಕ್ಷ ಮನೆಗಳ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ತಿಳಿಸಿದರು.

ವಸತಿ ಇಲಾಖೆಯಿಂದ ಬೆಂಗಳೂರಿನಲ್ಲಿ 50 ಸಾವಿರ ಮನೆಗಳ ನಿರ್ಮಾಣಕ್ಕೆ ವಿವಿಧ ಕ್ಷೇತ್ರಗಳಲ್ಲಿ ಒಟ್ಟಾರೆ 493 ಎಕರೆ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡು ಕಾಮಗಾರಿ ಪೂರ್ಣಗೊಳಿಸುವ ಹಂತದಲ್ಲಿದೆ ಎಂದ ಅವರು, ಅವುಗಳಲ್ಲಿ ಸುಮಾರು 5 ಸಾವಿರ ಮನೆಗಳನ್ನು ಇಂದು ಬೆಂಗಳೂರಿನ ವಿವಿಧ ಕ್ಷೇತ್ರಗಳಲ್ಲಿ ಒಮ್ಮೆಲೆ ಹಸ್ತಾಂತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. 

ವಸತಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಸಚಿವ ವಿ.ಸೋಮಣ್ಣ ರಾಜ್ಯದಲ್ಲಿ ವಸತಿ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ರಾಜ್ಯಾದ್ಯಂತ 3 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನೀಡಿ ದಾಖಲೆ ನಿರ್ಮಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ಶ್ಲಾಘಿಸಿದರು.
ಬಿ.ಡಿ.ಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್ ಅವರ ಶ್ರಮದಿಂದಾಗಿ ಸಾಕಷ್ಟು ಅಭಿವೃದ್ದಿ ಕಂಡಿದೆ. ಜನಪ್ರತಿನಿಧಿಗಳು ಕೇವಲ ಜನಪ್ರಯರಾಗದೆ ಅವರಂತೆ ಜನೋಪಯೋಗಿ ಶಾಸಕರಾಗಬೇಕು ಎಂದು ಕರೆಕೊಟ್ಟರು.

ಕಾರ್ಯಕ್ರಮದಲ್ಲಿ ವಸತಿ ಸಚಿವ ವಿ.ಸೋಮಣ್ಣ, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ತೇರದಾಳ್ ಶಾಸಕ ಸಿದ್ದು ಸವದಿ, ವಸತಿ ಇಲಾಖೆ ಕಾರ್ಯದರ್ಶಿ ರವಿಶಂಕರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಉಪಸ್ಥಿತರಿದ್ದರು.

'ಸುಳ್ಳು ಭರವಸೆ ಕೊಟ್ಟು ದಾರಿತಪ್ಪಿಸಬಾರದು'!

ನಾವು ಜನರಿಗೆ ಏನು ಮಾಡಲು ಸಾಧ್ಯವಿದೆ ಎಂಬ ಸತ್ಯವನ್ನು ಹೇಳಬೇಕು. ಜನರನ್ನು ಭ್ರಮಾಲೋಕದಲ್ಲಿಡುವ ಪ್ರಯತ್ನ ಈಗಲೂ ನಡೆಯುತ್ತಿದೆ. ಆದರೆ, ಜನರು ಬುದ್ದಿವಂತರಿದ್ದಾರೆ, ಜಾಗೃತರಾಗಿದ್ದಾರೆ ಎಂಬುದನ್ನು ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು. ಸುಳ್ಳು ಭರವಸೆ ಕೊಟ್ಟು ಜನರನ್ನು ದಾರಿತಪ್ಪಿಸುವ ಕೆಲಸ ಮಾಡಬಾರದು. ಎಲ್ಲಾ ಸಮಯದಲ್ಲಿ ಎಲ್ಲರನ್ನೂ ಮೋಸ ಮಾಡಲು ಸಾಧ್ಯವಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ಎಲ್ಲವನ್ನೂ ಉಚಿತವಾಗಿ ಕೊಡುತ್ತೇವೆ ಎಂದರೆ ಯಾರೂ ನಂಬುವುದಿಲ್ಲ. ಜನಪ್ರಿಯತೆಗಾಗಿ, ಅಧಿಕಾರಕ್ಕೆ ಬರಬೇಕೆಂದು ಹತಾಶರಾಗಿ ಇಡೀ ವ್ಯವಸ್ಥೆಯನ್ನು ಹಾಳುಗೆಡವಬಾರದು.

-ಬಸವರಾಜ್ ಬೊಮ್ಮಾಯಿ, ಮುಖ್ಯಮಂತ್ರಿ 

------------------------------

ಯಲಹಂಕದಲ್ಲಿ 900 ಮನೆ

ಯಲಹಂಕದಲ್ಲಿ ಒಟ್ಟು 900 ಮನೆಗಳನ್ನು ನೀಡಲಾಗುತ್ತಿದ್ದು, ಸುಮಾರು 5-6 ಕ್ಷೇತ್ರಗಳಲ್ಲಿ ಮಂಗಳವಾರ ಮನೆಗಳ ಹಂಚಿಕೆಯಾಗಿದೆ. ಹಂತಹಂತವಾಗಿ 50 ಸಾವಿರ ಮನೆಗಳನ್ನು ಹಸ್ತಾಂತರ ಮಾಡುವ ಗುರಿ ಇದೆ. ನಾನು ಮುಖ್ಯಮಂತ್ರಿಯಾದ ಬಳಿಕ ಸುಮಾರು 5 ಲಕ್ಷ ಮನೆಗಳ ಮಂಜೂರಾತಿ ಮಾಡಿದ್ದು, 4 ಲಕ್ಷ ಗ್ರಾಮೀಣ ಪ್ರದೇಶದಲ್ಲಿ ಹಾಗೂ 1 ಲಕ್ಷ ನಗರದಲ್ಲಿ ಮಂಜೂರಾತಿ ನೀಡಿದ್ದು, ಫಲಾನುಭವಿಗಳ ಆಯ್ಕೆಯಾಗಿ ಪ್ರಗತಿಯಲ್ಲಿದೆ. 

Similar News