ತೆರಿಗೆ ವಂಚನೆ ಆರೋಪ: ಬೆಂಗಳೂರಿನ ಚಿನ್ನಾಭರಣ ಮಳಿಗೆಗಳ ಮೇಲೆ ಐಟಿ ದಾಳಿ, ಶೋಧ

Update: 2023-01-31 12:54 GMT

ಬೆಂಗಳೂರು, ಜ.31: ವಾರ್ಷಿಕ ವಾಹಿವಾಟು ಸಂಬಂಧ ಸೂಕ್ತ ರೀತಿಯಲ್ಲಿ ತೆರಿಗೆ ಪಾವತಿ ಮಾಡದೆ ವಂಚನೆ ಮಾಡುತ್ತಿದ್ದ ಆರೋಪ ಕೇಳಿಬಂದ ಹಿನ್ನೆಲೆ ರಾಜಧಾನಿ ಬೆಂಗಳೂರಿನ ಹಲವು ಚಿನ್ನದ ವ್ಯಾಪಾರಿಗಳ ಮಳಿಗೆಗಳ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ(ಐಟಿ) ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಮಂಗಳವಾರ ಇಲ್ಲಿನ ಜಯನಗರ, ಯಶವಂತಪುರ, ಬಸವನಗುಡಿ, ಚಿಕ್ಕಪೇಟೆ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಚಿನ್ನಾಭರಣಗಳ ಅಂಗಡಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ಮಾಡಿ ಪರಿಶೀಲಿಸಿದರು. 

ತೆರಿಗೆ ವಂಚನೆ ಮಾಡಿ ಚಿನ್ನದ ವ್ಯಾಪಾರ ಮಾಡುತ್ತಿದ್ದ ದೂರುಗಳ ಹಿನ್ನಲೆಯಲ್ಲಿ ದಾಳಿ ಮಾಡಲಾಗಿದೆ. ಸುಮಾರು 300ಕ್ಕೂ ಹೆಚ್ಚು ಅಧಿಕಾರಿಗಳ ತಂಡ ವಿವಿಧ ಪ್ರದೇಶದಲ್ಲಿ ನಡೆದಿರುವ ದಾಳಿಯಲ್ಲಿ ಪಾಲ್ಗೊಂಡಿದ್ದರು. 

ತಂಡ ತಂಡವಾಗಿ ಅಧಿಕಾರಿಗಳು ಚಿನ್ನಾಭರಣಗಳ ಅಂಗಡಿಗಳ ಮೇಲೆ ದಾಳಿ ಮಾಡಲಾಗಿದ್ದು, ಚಿನ್ನದ ವ್ಯಾಪಾರ, ತೆರಿಗೆ ಕಟ್ಟಿರುವ ರಶೀದಿ ಸೇರಿದಂತೆ ಇತರ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಆನಂತರ ಕೆಲ ಮಾಲಕರಿಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

Similar News