ಶರಣ್ ಪಂಪ್‌ವೆಲ್ ವಿರುದ್ಧ ಕಾನೂನು ಕ್ರಮಕ್ಕೆ ಮುಸ್ಲಿಂ ಸೆಂಟ್ರಲ್ ಕಮಿಟಿ ಆಗ್ರಹ

Update: 2023-01-31 15:57 GMT

ಮಂಗಳೂರು: ಬಿಜೆಪಿಯ ಪ್ರವೀಣ್ ನೆಟ್ಟಾರ್ ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್‌ನಲ್ಲಿ ಮಂಗಳಪೇಟೆಯ ಫಾಝಿಲ್‌ನನ್ನು ಕೊಲೆ ಮಾಡಲಾಗಿದೆ ಎಂದು ತುಮಕೂರಿನಲ್ಲಿ ನಡೆದ ಶೌರ್ಯಯಾತ್ರೆ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿ ಪ್ರಚೋದನಕಾರಿಭಾಷಣ ಮಾಡಿದ ಶರಣ್ ಪಂಪ್‌ವೆಲ್ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಸ್ಲಿಂ ಸೆಂಟ್ರಲ್ ಕಮಿಟಿಯು ಆಗ್ರಹಿಸಿದೆ.

ಈ ಬಗ್ಗೆ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್ ಅವರು ಮುಖ್ಯಮಂತ್ರಿಗೆ ಪತ್ರ ಬರೆದು ‘20 ವರ್ಷದ ಹಿಂದೆ ಗುಜರಾತ್‌ನಲ್ಲಿ 59 ಕರಸೇವಕರನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ 2 ಸಾವಿರಕ್ಕೂ ಅಧಿಕ ಮುಸ್ಲಿಮರನ್ನು ಕೊಲೆ ಮಾಡಲಾಗಿದೆ. ಇದು ಹಿಂದೂ ಯುವಕರ ಪರಾಕ್ರಮ ಎಂದು  ಶರಣ್ ಪಂಪ್‌ವೆಲ್ ಉದ್ರೇಕಕಾರಿ ಭಾಷಣ ಮಾಡಿದ್ದಾರೆ.ಇದು ಖಂಡನೀಯ. ಹಾಗಾಗಿ ಶರಣ್ ಪಂಪ್‌ವೆಲ್ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಒತ್ತಾಯಿಸಿದ್ದಾರೆ.

ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್ ಅವರು ಮುಖ್ಯಮಂತ್ರಿಗೆ ಬರೆದ ಪತ್ರವನ್ನು ದ.ಕ.ಜಿಲ್ಲಾಧಿಕಾರಿಗಳ ಮೂಲಕ ಮುಸ್ಲಿಂ ಸೆಂಟ್ರಲ್ ಕಮಿಟಿಯ ನಿಯೋಗವು ರವಾನಿಸಿದೆ. ಕಮಿಟಿಯ ಉಪಾಧ್ಯಕ್ಷರಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಹಾಜಿ ಸಿ. ಮಹಮೂದ್, ಕಾರ್ಯದರ್ಶಿಗಳಾದ ಡಾ. ಮುಹಮ್ಮದ್ ಆರೀಫ್ ಮಸೂದ್, ಸಿ.ಎಂ.ಹನೀಫ್, ಹಾಜಿ ಬಿ. ಅಬೂಬಕರ್ ನಿಯೋಗದಲ್ಲಿದ್ದರು.

Similar News