ಅಸಮರ್ಪಕ ನೀರು ಪೂರೈಕೆ: ಮಂಗಳೂರು ಮನಪಾ ಸಭೆಯಲ್ಲಿ ಆಡಳಿತ, ವಿಪಕ್ಷ ಸದಸ್ಯರಿಂದ ಆಕ್ರೋಶ

ತ್ವರಿತ ಸಭೆ ಕರೆದು ಪರಿಹಾರಕ್ಕೆ ಮೇಯರ್ ಸೂಚನೆ

Update: 2023-02-01 05:00 GMT

ಮಂಗಳೂರು: ಅಸಮರ್ಪಕ ನೀರು ಪೂರೈಕೆಯ ವಿರುದ್ಧ ಆಡಳಿತ, ವಿಪಕ್ಷ ಸದಸ್ಯರು ಮನಪಾ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಮೇಯರ್ ಈ ಬಗ್ಗೆ ತುರ್ತು ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮೇಯರ್ ಜಯಾನಂದ ಅಂಚನ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರಾದ ಮನೋಜ್ ಕುಮಾರ್, ಜಗದೀಶ್ ಶೆಟ್ಟಿ, ಸುಮಂಗಳಾ, ಕಿರಣ್ ನೀರಿನ ಸಮಸ್ಯೆಯ ಬಗ್ಗೆ ಗಮನ ಸೆಳೆದರು. ಈ ಸಂದರ್ಭ ಪ್ರತಿ ಪಕ್ಷದ ನಾಯಕ ನವೀನ್ ಡಿಸೋಜ, ಸದಸ್ಯರಾದ ಅಬ್ದುಲ್ ರವೂಫ್, ಪ್ರವೀಣ್ ಚಂದ್ರ ಆಳ್ವ, ವಿನಯ ರಾಜ್, ಶಶಿಧರ್ ಹೆಗ್ಡೆ, ಶಂಶಾದ್ ಅಬೂಬಕರ್ ಇದಕ್ಕೆ ಧ್ವನಿಗೂಡಿಸಿದರು.

ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ, ಈ ಬಗ್ಗೆ ಸೂಕ್ತ ಪರಿಹಾರಕ್ಕೆ ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಲು ತುರ್ತಾಗಿ ಜಿಲ್ಲಾಧಿಕಾರಿ, ಸಿಇಒ, ಇಒ ಸೇರಿದಂತೆ ಪ್ರಮುಖ ಅಧಿಕಾರಿಗಳು ಮತ್ತು ತಾಂತ್ರಿಕ ವರ್ಗದ ಜೊತೆ ಸೇರಿ ತುರ್ತು ಸಭೆ ಕರೆಯುವಂತೆ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಈ ಬಗ್ಗೆ ತುರ್ತು ಸಭೆ ಕರೆದು ಕ್ರಮ ಕೈ ಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಚ್ಚನಾಡಿ ಡಂಪಿಂಗ್ ಯಾರ್ಡ್ ವಿಸ್ತರಣೆಗೆ ನಿರ್ಣಯ: ಪ್ರತಿಪಕ್ಷ ಸದಸ್ಯರ ವಿರೋಧದ ನಡುವೆ ಪಚ್ಚನಾಡಿ ಡಂಪಿಂಗ್ ಯಾರ್ಡ್ ವಿಸ್ತರಣೆಗೆ ನಿರ್ಣಯ ಕೈಗೊಳ್ಳಲಾಯಿತು.

ಈ ವಿಷಯದ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ನವೀನ್ ಡಿಸೋಜ, ಈಗಾಗಲೇ ಪಚ್ಚನಾಡಿ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ತೊಂದರೆಯಾಗಿದೆ. ಆದುದರಿಂದ ಆ ಪ್ರದೇಶದ ನಿವಾಸಿಗಳ ಹಿತ ದೃಷ್ಟಿಯಿಂದ ವಿಸ್ತರಣೆ ಬೇಡ ಇದಕ್ಕೆ ನಮ್ಮ ವಿರೋಧವಿದೆ. ಈ ಬಗ್ಗೆ ಈ ಹಿಂದೆ 2016ರಲ್ಲಿ ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇನ್ನು ಮುಂದೆ ಡಂಪಿಂಗ್ ಯಾರ್ಡ್ ವಿಸ್ತರಣೆ ಮಾಡಬಾರದು ಎನ್ನುವ ನಿರ್ಣಯ ಕೈ ಗೊಳ್ಳಲಾಗಿತ್ತು ಎಂದರು. ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಮಾತನಾಡಿ, ಮನಪಾ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿಗೆ ಸಂಬಂಧಿಸಿದಂತೆ ಪಾಲಿಕೆಯ ಪಚ್ಚನಾಡಿ ಪ್ರದೇಶದಲ್ಲಿ 77.93 ಎಕರೆ ಜಾಗ ಲಭ್ಯವಿದ್ದು, ಅದರಲ್ಲಿ 62.75 ಎಕರೆ ಜಾಗವನ್ನು ಮಾತ್ರ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ. ಇತರೆ 15.21 ಎಕರೆ ಜಾಗವನ್ನು ಬಸವಲಿಂಗಪ್ಪ ನಗರಕ್ಕೆ, ಸಂತೋಷ ನಗರದ ಮೈದಾನಕ್ಕಾಗಿ ಹಾಗೂ 9.21 ಎಕರೆ (ಗ್ರೀನ್ ಕವರ್) ಸಾಮಾಜಿಕ ಅರಣ್ಯಗಳಿಗಾಗಿ ಉಪಯೋಗಿಸಲಾಗುತ್ತಿದೆ ಎಂದರು.

ಈ ಘನತ್ಯಾಜ್ಯ ಘಟಕಕ್ಕೆ ಉಪಯೋಗಿಸುತ್ತಿರುವ ಜಾಗದಲ್ಲಿ ಅಂದಾಜು 10 ಎಕರೆ ವ್ಯಾಪ್ತಿಯಲ್ಲಿ ಹಳೆಯ ತ್ಯಾಜ್ಯದ ರಾಶಿಯಿದ್ದು, ಅದನ್ನು ವೈಜ್ಞಾನಿಕವಾಗಿ ಕ್ಯಾಪಿಂಗ್ ಮಾಡಲಾಗಿದೆ. ಇನ್ನು 15 ಎಕರೆ ಜಾಗದಲ್ಲಿ ಕಾಂಪೋಸ್ಟ್ ಘಟಕ ಸ್ಥಾಪಿಸಲಾಗಿದೆ. 15 ಎಕರೆ ಜಾಗವನ್ನು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬಳ ಸಲಾಗುತ್ತಿದೆ ಎಂದು ಅವರು ಹೇಳಿದರು.

 ಮುಂಬರುವ ದಿನಗಳಲ್ಲಿ ತ್ಯಾಜ್ಯದ ಪ್ರಮಾಣ ಹೆಚ್ಚಾಗಲಿದ್ದು, ಘನತ್ಯಾಜ್ಯ ಸಂಸ್ಕರಣೆ ಮಾಡಲು ಜಾಗದ ಕೊರತೆ ಇರುವುದರಿಂದ ಪಚ್ಚನಾಡಿ ಪ್ರದೇಶದ ಘನತ್ಯಾಜ್ಯ ನಿರ್ವಹಣಾ ಘಟಕದ ಸುತ್ತಮುತ್ತಲಿನಲ್ಲಿ ಖಾಲಿ ಜಮೀನು ಇದ್ದು, ಪಾಲಿಕೆಯ ವತಿಯಿಂದ ಕಾನೂನುಬದ್ಧವಾಗಿ ಪಡೆದುಕೊಳ್ಳುವ ಬಗ್ಗೆ ತುರ್ತಾಗಿ ಸೂಕ್ತ ನಿರ್ದೇಶನ ಬೇಕಿದೆ. ಇದರಿಂದ 10-15 ಎಕರೆ ಜಾಗವನ್ನು ಪಚ್ಚನಾಡಿಯ ಸಮೀಪ ಪಾಲಿಕೆಗೆ ಪಡೆದುಕೊಳ್ಳಲು ಅನುವುಮಾಡಿಕೊಡುವಂತೆ ಪರಿಸರ ಅಭಿಯಂತರರು, ಆರೋಗ್ಯಾಧಿಕಾರಿ, ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ) ಹಾಗೂ ಕೇಂದ್ರ ವಲಯ ಆಯುಕ್ತರಿಗೆ ಸಲ್ಲಿಸಿದ ಮನವಿಯಲ್ಲಿ ಕೋರಿರುವುದಾಗಿ ಮನಪಾ ಆಯುಕ್ತ ಸಭೆಗೆ ತಿಳಿಸಿದರು.

ಈ ಸಂದರ್ಭ ಉಪ ಮೇಯರ್ ಪೂರ್ಣಿಮಾ ಉಪಸ್ಥಿತರಿದ್ದರು.


ಸ್ಮಾರ್ಟ್ ಸಿಟಿ ಯೋಜನೆ ಲೋಕಾಯುಕ್ತ ತನಿಖೆಯಾಗಲಿ:

ಸ್ಮಾರ್ಟಿ ಸಿಟಿ ಯೋಜನೆ ಕಾಮಗಾರಿ ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು ಎಂದು ಮನಪಾ ಸದಸ್ಯ ವಿನಯ ರಾಜ್ ಆಗ್ರಹಿಸಿದರು. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯ ಬಗ್ಗೆ ಸಿಎಜಿ ವರದಿಯಲ್ಲಿ 15.45 ಕೋಟಿ ರೂ. ಸೂಕ್ತವಾಗಿ ಬಳಸಲಾಗಿಲ್ಲ. ಟೆಂಡರ್ ಶರತ್ತುಗಳನ್ನು ದುರ್ಬಲಗೊಳಿಸಲಾಗಿದೆ ಎಂದು ತಿಳಿಸಿದೆ. ಮತ್ತು ಕಪ್ಪುಪಟ್ಟಿಗೆ ಸೇರಿದ ಆರೋಪ ಹೊಂದಿರುವ ಕಂಪೆನಿಗೆ ಟೆಂಡರ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆ ಬಗ್ಗೆ ಲೋಕಾಯುಕ್ತರ ಮೂಲಕ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

Similar News