ಫುಟ್ಬಾಲ್‌ನಲ್ಲಿ ಗಿನ್ನಿಸ್ ದಾಖಲೆ ಬರೆದ ಮಂಗಳೂರಿನ ಮುಹಮ್ಮದ್ ಶಲೀಲ್

Update: 2023-02-01 13:59 GMT

ಮಂಗಳೂರು: ಕೇವಲ ಮೂವತ್ತು ಸೆಕೆಂಡುಗಳಲ್ಲಿ ಫುಟ್ಬಾಲ್‌ನೊಂದಿಗೆ 10 ರೌಂಡ್ ಗಳ  ನಟ್ ಮೆಗ್ ಸಾಧಿಸುವ  ಮೂಲಕ ಬೆಳ್ಮ ದೇರಳಕಟ್ಟೆಯ ಯುವಕ ಮುಹಮ್ಮದ್ ಶಲೀಲ್ ವಿಶ್ವದ  ಇಬ್ಬರ ದಾಖಲೆ ಮುರಿದು ಇದೀಗ ಗಿನ್ನೆಸ್ ದಾಖಲೆ ಬರೆದಿದ್ದಾರೆ.

2017ರಲ್ಲಿ ಇಂಗ್ಲೆಂಡ್‌ನ ಡೆಲೆ ಅಲ್ಲಿ ಅನ್ನುವ ವ್ಯಕ್ತಿ 30 ಸೆಕೆಂಡುಗಳಲ್ಲಿ  7 ಸುತ್ತುಗಳನ್ನು ಸಾಧಿಸುವ ಮೂಲಕ ಮೊದಲ ಗಿನ್ನೆಸ್ ದಾಖಲೆ ಸಾಧಿಸಿದ್ದರು. 2021 ರ ಫೆಬ್ರವರಿಯಲ್ಲಿ ಮಹಿಳಾ ಪುಟ್ಬಾಲ್ ಆಟಗಾರ್ತಿ ಅಮೆರಿಕಾ ಕ್ಯಾಲಿಫೋರ್ನಿಯಾದ ವೆಸ್ಟ್ ಲೇಕ್ ಹಳ್ಳಿಯ ತಾಷಾ ನಿಕೋಲ್ ತೇರಾನಿ ಒಂದು ನಿಮಿಷದಲ್ಲಿ 18 ಸುತ್ತುಗಳನ್ನು ಹೊಡೆಯುವ ಮೂಲಕ ಗಿನ್ನೆಸ್ ದಾಖಲೆ ಸಾಧಿಸಿ ಪುಸ್ತಕದ ಪುಟಗಳಲ್ಲಿ ಸೇರಿದ್ದರು. ಇದೀಗ ಅವರಿಬ್ಬರ ದಾಖಲೆಗಳನ್ನು ಮುರಿದು  ಬೆಳ್ಮ ದೇರಳಕಟ್ಟೆ ನಿವಾಸಿ ಆರ್.ಬಿ ಅಬ್ದುಲ್ ಹಮೀದ್ ಮತ್ತು ಮುಮ್ತಾಝ್ ದಂಪತಿ ಪುತ್ರ ಮೊಹಮ್ಮದ್ ಶಲೀಲ್  ಹೊಸ ದಾಖಲೆ ನಿರ್ಮಿಸಿದ್ದಾರೆ.

ಕೂಳೂರು ಯೆನೆಪೋಯ ಸಂಸ್ಥೆಯಲ್ಲಿ ಏವಿಯೇಷನ್ ಆ್ಯಂಡ್ ಲಾಜಿಸ್ಟಿಕ್ಸ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಶಲೀಲ್ ಹವ್ಯಾಸಿ ಫುಟ್ಬಾಲ್ ಆಟಗಾರ. ಒಂದು ತಿಂಗಳ ಹಿಂದೆ ಆನ್‌ಲೈನ್  ಮೂಲಕ ಗಿನ್ನೆಸ್ ದಾಖಲೆ ಸಾಧಿಸಲು ಅರ್ಜಿಯನ್ನು ಸಲ್ಲಿಸಿದ್ದರು.

"ತಿಂಗಳ ಬಳಿಕ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಆನ್‌ಲೈನ್  ವೀಡಿಯೋ ಮೂಲಕ  ಪರೀಕ್ಷೆಯನ್ನು ಕೊಟ್ಟಿದ್ದೆ. ಒಂದು ವಾರದಲ್ಲಿ ಇಮೇಲ್‌ಗೆ ಫಲಿತಾಂಶ ಬಂದಿದೆ" ಎಂದು ಶಲೀಲ್ ಹೇಳಿದ್ದಾರೆ.

10ರ ಹರೆಯದಿಂದಲೇ ಫುಟ್ಬಾಲ್ ಆಟದಲ್ಲಿ ಆಸಕ್ತಿ ಹೊಂದಿದ್ದು, ಗೆಳೆಯರ ಜೊತೆಗೆ ನಿರಂತರವಾಗಿ ಮನೆ ಹಿಂಬದಿಯಲ್ಲೇ ಆಟವಾಡುತ್ತಿದ್ದೆವು.  ಹೀಗೆ ‘ಮೋಸ್ಟ್ ಬಿಟ್ವೀನ್‌ದ ಲೆಗ್ ಫಿಗರ್ ಎಯ್ಟ್ ಕುರಿತು ಆನ್‌ಲೈನ್  ಮೂಲಕ ನೋಡಿ ಆಸಕ್ತಿಯನ್ನು ಹೊಂದಿ ಸಾಧಿಸುವ ಛಲವನ್ನು ಇಟ್ಟುಕೊಂಡಿದ್ದೆ. ಅದಕ್ಕಾಗಿ ಎರಡು ವರ್ಷಗಳಿಂದ ನಿರಂತರ ತರಬೇತಿಯನ್ನು ಪಡೆಯುತ್ತಿದ್ದೆನು. ಪರಿಶ್ರಮ , ಮನೆಯವರ ಪ್ರೀತಿ, ಸಹೋದರ ಹಾಗೂ ಸೋದರ ಸಂಬಂಧಿಗಳ ಪ್ರೋತ್ಸಾಹ ಕೈಬಿಡಲಿಲ್ಲ ಎಂದು ಶಲೀಲ್ ಪ್ರತಿಕ್ರಿಯಿಸಿದ್ದಾರೆ. 

Full View

Similar News