ರಾಜ್ಯ ಬಜೆಟ್: ವಿಧಾನ ಪರಿಷತ್ ಸದಸ್ಯರ ನಿಧಿ 10 ಕೋ.ರೂ.ಗೆ ಹೆಚ್ಚಿಸಿಲು ಆಗ್ರಹಿಸಿ ಸಿಎಂಗೆ ಮನವಿ

* ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಈಗಿನ 2 ಕೋಟಿ ರೂಪಾಯಿ ಅನುದಾನ ಸಾಲುತ್ತಿಲ್ಲ

Update: 2023-02-02 07:42 GMT

ಬೆಂಗಳೂರು, ಫೆ.2: ವಿಧಾನ ಪರಿಷತ್ ಶಾಸಕರಿಗೆ ಬಿಡುಗಡೆ ಮಾಡುತ್ತಿರುವ ಕ್ಷೇತ್ರಾಭಿವೃದ್ಧಿ ನಿಧಿಯನ್ನು 2 ಕೋಟಿ ರೂಪಾಯಿಯಿಂದ 25 ಕೋಟಿ ರೂ.ಗಳಿಗೆ ಹೆಚ್ಚು ಮಾಡಬೇಕು. ಇಲ್ಲವೇ ಕನಿಷ್ಠ 10 ಕೋಟಿ ರೂಪಾಯಿಯನ್ನಾದರೂ ಹೆಚ್ಚು ಮಾಡಬೇಕಿದೆ. ಈ ಮೂಲಕ ಸ್ಥಳೀಯ ಅಭಿವೃದ್ಧಿಗೆ ಹಾಗೂ ಅವಶ್ಯಕತೆಗಳನ್ನು ಈಡೇರಿಸಲು ಅನುವು ಮಾಡಿಕೊಡಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಈ ನಿರ್ಧಾರವನ್ನು ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯರು ಮನವಿ ಮಾಡಿದ್ದಾರೆ.

ಇದಕ್ಕೂ ಮೊದಲು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹಾಗೂ ವಿಧಾನ ಪರಿಷತ್ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರನ್ನು ಭೇಟಿಯಾದ ವಿಧಾನ ಪರಿಷತ್ ಸದಸ್ಯರು ಮನವಿ ಮಾಡಿದ್ದಾರೆ.

ಪತ್ರದ ಸಾರಾಂಶ ಇಂತಿದೆ:

28-12-2022ರಂದು ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನ ಶಾಸಕರುಗಳಿಗೆ ಬಿಡುಗಡೆ ಮಾಡುತ್ತಿರುವ ಕ್ಷೇತ್ರಾಭಿವೃದ್ಧಿ ನಿಧಿಯನ್ನು ರೂ. 2 ಕೋಟಿಯಿಂದ ರೂ. 25 ಕೋಟಿಗಳಿಗೆ ಹೆಚ್ಚುಮಾಡುವಂತೆ ಸರ್ಕಾರವನ್ನು ಒತ್ತಾಯಿಸಿರುವುದು ಸರಿಯಷ್ಟೆ: ಪ್ರತಿಯೊಬ್ಬ ಶಾಸಕರ ಕ್ಷೇತ್ರ ವ್ಯಾಪ್ತಿಯಲ್ಲಿ 350 ರಿಂದ 400 ಗ್ರಾಮ ಪಂಚಾತ ತ್ ಗಳು ಬರುತ್ತಿದ್ದು, ನಾವುಗಳು ಪ್ರವಾಸ ಮಾಡುವಂತಹ ಸಮಯದಲ್ಲಿ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳು ಶಾಲಾ ಕೊಠಡಿ, ರಸ್ತೆ ಮತ್ತು ಚರಂಡಿ ಕಾಮಗಾರಿ, ವಿದ್ಯುತ್‌ ದೀಪಗಳು, ಕುಡಿಯುವ ನೀರು ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಮನವಿ ಸಲ್ಲಿಸುತ್ತಿರುತ್ತಾರೆ. ಆದರೆ ಸರ್ಕಾರ ಪ್ರತಿಯೊಬ್ಬ ಶಾಸಕರುಗಳಿಗೆ ಬಿಡುಗಡೆ ಮಾಡುವಂತಹ ರೂ. 2 ಕೋಟಿಗಳ ಕ್ಷೇತ್ರಾಭಿವೃದ್ಧಿ ನಿಧಿಯು ಯಾವುದಕ್ಕೂ ಸಾಲದ್ದಾಗಿದ್ದು, ಈ ಮೊತ್ತದಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಈ ಸಂಬಂಧವಾಗಿ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಹೆಚ್ಚಿಸುವಂತೆ ಹಲವು ಭಾರಿ ಮನವಿ ಮಾಡಿರುತ್ತೇವೆ. ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ಎಲ್ಲ 25 ಜನ ಜನಪ್ರತಿನಿಧಿಗಳಾದ ನಾವುಗಳು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಗ್ರಾಮಗಳ ಜೊತೆ ನಮಗಳಿಗೆ ಹೆಚ್ಚಿನ ಒಡನಾಟ ಇರುವುದರಿಂದ ಜನರ ಮೂಲಭೂತ ಆವಶ್ಯಕತೆಗಳನ್ನು ಈಡೇರಿಸುವ ಬಗ್ಗೆ ನಾವು ಹೆಚ್ಚು ಗಮನಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

 ಮನವಿ ಸಲ್ಲಿಸಿದ ನಿಯೋಗದಲ್ಲಿ ವಿಧಾನ ಪರಿಷತ್ ಶಾಸಕರುಗಳಾದ ದಿನೇಶ್ ಗೂಳಿಗೌಡ, ಶರಣಗೌಡ ಪಾಟೀಲ್, ಮಂಜುನಾಥ್ ಭಂಡಾರಿ, ಸುನೀಲ್ ಗೌಡ ಪಾಟೀಲ್, ರಾಜೇಂದ್ರ ರಾಜಣ್ಣ, ಎಸ್. ರವಿ ಸೇರಿದಂತೆ ಇತರ ಪ್ರಮುಖರು ಇದ್ದರು.

Similar News