ಫೆ.4ರಂದು ಉಳ್ಳಾಲದಲ್ಲಿ 'ವೀರರಾಣಿ ಅಬ್ಬಕ್ಕ ಉತ್ಸವ'

Update: 2023-02-02 10:22 GMT

ಉಳ್ಳಾಲ, ಫೆ.2: ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಆಶ್ರಯದಲ್ಲಿ 'ವೀರ ರಾಣಿ ಅಬ್ಬಕ್ಕ ಉತ್ಸವ 2022-23' ಕಾರ್ಯಕ್ರಮವು ಫೆ.4ರಂದು ಉಳ್ಳಾಲ ನಗರಸಭೆ ಅಧೀನದ ಮಹಾತ್ಮ ಗಾಂಧಿ ರಂಗ ಮಂದಿರದಲ್ಲಿ ನಡೆಯಲಿದೆ ಆಯೋಜಿಸಲಾಗಿದೆ ಎಂದು ಉತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಜಯರಾಮ ಶೆಟ್ಟಿ ತಿಳಿಸಿದ್ದಾರೆ.

ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.4 ರಂದು ಬೆಳಗ್ಗೆ 8:3 ಕ್ಕೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ಉತ್ಸವ ವೇದಿಕೆಯವರೆಗೆ ಜಾನಪದ ದಿಬ್ಬಣ ಸಾಗಲಿದೆ. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಕೆಎಸ್ ಆರ್ ಪಿ ಕಮಾಂಡೆಂಟ್ ಬಿ.ಎಂ. ಪ್ರಸಾದ್ ದಿಬ್ಬಣಕ್ಕೆ ಚಾಲನೆ ನೀಡಲಿದ್ದಾರೆ.

ಬೆಳಗ್ಗೆ 10ಕ್ಕೆ ನಡೆಯುವ ಕಾರ್ಯಕ್ರಮವನ್ನು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಸಾಂಸ್ಕೃತಿಕ ಮತ್ತು ಸಾಹಿತ್ಯ ಕಾರ್ಯಕ್ರಮವನ್ನು ಚಲನಚಿತ್ರ ಕಲಾವಿದೆ ವಿದುಷಿ ಮಾನಸಿ ಸುಧೀರ್ ಉದ್ಘಾಟಿಸುವರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

  ಸಂಜೆ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲು ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾಹಿತಿ ಡಾ.ಪಾರ್ವತಿ ಜಿ. ಐತಾಳ್ ಮತ್ತು ಭವಾನಿ ಅವರಿಗೆ ರಾಣಿ ಅಬ್ಬಕ್ಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದರು.

ಅಧ್ಯಕ್ಷ ದಿನಕರ ಉಳ್ಳಾಲ, ಗೌರವ ಅಧ್ಯಕ್ಷ ‌ಸದಾನಂದ ಬಂಗೇರ, ಪ್ರಧಾನ ಕಾರ್ಯದರ್ಶಿ ‌ಧನಲಕ್ಷ್ಮೀ ಗಟ್ಟಿ, ಕೋಶಾಧಿಕಾರಿ ಆನಂದ ಅಸೈಗೋಳಿ, ಉಪಾಧ್ಯಕ್ಷ ಯು.ಪಿ.ಆಲಿಯಬ್ಬ, ದೇವಕಿ ಆರ್. ಉಳ್ಳಾಲ ಉಪಸ್ಥಿತರಿದ್ದರು.

Similar News