ಬೆಂಗಳೂರು: ಪತ್ನಿಯ ಕೊಲೆಗೈದು ಠಾಣೆಗೆ ಶರಣಾದ ಪತಿ

Update: 2023-02-02 16:41 GMT

ಬೆಂಗಳೂರು, ಫೆ. 2: ವ್ಯಾಯಾಮಕ್ಕೆ ಬಳಸುವ ಸಾಧನದಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ಇಲ್ಲಿನ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಲೈದಿಯಾ (44) ಎಂಬಮಹಿಳೆ ಕೊಲೆಯಾಗಿದ್ದು, ಕೃತ್ಯವೆಸಗಿದ ಆರೋಪದಡಿ ಮೊರೀಸ್ ಎಂಬಾತ ರಾಮಮೂರ್ತಿ ನಗರ ಪೊಲೀಸರೆದುರು ಶರಣಾಗಿದ್ದಾನೆ.

ರಾಮಮೂರ್ತಿನಗರದ ಹೊಯ್ಸಳ ಬೀದಿಯ ನಿವಾಸಿ ಮೋರಿಸ್, 18 ವರ್ಷಗಳ ಹಿಂದೆ ಲೈದಿಯಾ ಎಂಬಾಕೆಯನ್ನು ವಿವಾಹವಾಗಿದ್ದ. ಈ ಮಧ್ಯೆ ಪತಿ ಮೋರಿಸ್‍ಗೆ ಪತ್ನಿಯ ಮೇಲೆ ಅನುಮಾನ ಹುಟ್ಟಿಕೊಂಡಿದ್ದು ಇದೇ ವಿಚಾರವಾಗಿ ಪತ್ನಿಯೊಂದಿಗೆ ಆಗಾಗ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.

ಗುರುವಾರ ಬೆಳಗ್ಗೆ ಮಕ್ಕಳು ಶಾಲೆಗೆ ಹೋದ ಮೇಲೆ ಪತ್ನಿ ಜೊತೆ ಇದೇ ವಿಚಾರವಾಗಿ ಮತ್ತೆ ಗಲಾಟೆಯಾಗಿದ್ದು, ಈ ವೇಳೆ ವ್ಯಾಯಾಮಕ್ಕೆ ಬಳಸುವ ಸಾಧನದಿಂದ ಪತ್ನಿಯ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯವೆಸಗಿದ ಬಳಿಕ ಪೊಲೀಸರಿಗೆ ಕರೆ ಮಾಡಿ ಶರಣಾಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಹೇಳಿದ್ದಾರೆ.

Similar News