ಕುಂಬಾರ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಲು ಒತ್ತಾಯ: 5ನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟಾವಧಿ ಧರಣಿ

Update: 2023-02-02 16:48 GMT

ಬೆಂಗಳೂರು, ಫೆ.2: ಕುಂಬಾರ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮವನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿ ನಗರದ ಫ್ರೀಡಂಪಾರ್ಕ್‍ನಲ್ಲಿ ಚಿತ್ರದುರ್ಗದ ಕುಂಬಾರ ಪೀಠದ ಬಸವರಾಜ ಕುಂಬಾರ ಸ್ವಾಮಿ ಮತ್ತು ಬೆಳಗಾವಿಯ ತೇಲಸಂಗ ಪೀಠದ ಶ್ರೀಬಸವ ಕುಂಬಾರ ಗುಂಡಯ್ಯ ಸ್ವಾಮಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿಯು 5ನೆ ದಿನಕ್ಕೆ ಕಾಲಿಟ್ಟಿದೆ. 

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಕುಂಬಾರ ಸ್ವಾಮಿ, ಹಲವು ವರ್ಷಗಳ ಹಿಂದೆ ಕುಂಭಕಲಾ ಅಭಿವೃದ್ಧಿ ಮಂಡಳಿಯನ್ನು ಸರಕಾರ ರಚಿಸಿದ್ದು, ಅದು ದೇವರಾಜು ಅರಸು ನಿಗಮದಲ್ಲಿಯೇ ವಿಲೀನಗೊಂಡಿರುತ್ತದೆ. ಅರಸು ನಿಗಮದಿಂದ ಕುಂಭಕಲಾ ಮಂಡಳಿಯನ್ನು ಪ್ರತ್ಯೇಕಿಸಿ ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದರು. 

ಧರಣಿ ನಡೆಯುತ್ತಿರುವ ಸ್ಥಳಕ್ಕೆ ಸರಕಾರದ ಪ್ರತಿನಿಧಿಯಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಬಂದಿದ್ದು, ಅವರು ಮುಖ್ಯಮಂತ್ರಿ ಅವರ ಬಳಿ ಪ್ರಸ್ತಾಪಿಸಿ ಚರ್ಚಿಸುತ್ತೇವೆಂದು ಆಶ್ವಾಸನೆ ನೀಡಿದ್ದಾರೆ. ಆದರೆ ಸರಕಾರ ನಿಗಮವನ್ನು ಘೋಷಿಸಿ ಆದೇಶ ಪತ್ರ ವಿತರಿಸುವರಿಗೂ ಧರಣಿಯನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಕುಂಬಾರ ಸಮುದಾಯ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಕಡೆಗಣಿಸಲ್ಪಟ್ಟಿದ್ದು, ಸರಕಾರದಿಂದ ಜಾರಿಯಾಗುವ ಯೋಜನೆಗಳು ಅವರಿಗೆ ತಲುಪುತ್ತಿಲ್ಲ. ಒಂದೇ ನಿಗಮದೊಳಗೆ ಅನೇಕ ಪ್ರಬಲ ಜಾತಿಗಳೊಂದಿಗೆ ಪೈಪೋಟಿ ನಡೆಸಲು ಸಾಧ್ಯವಿಲ್ಲ. ಹಾಗಾಗಿ ಕುಂಬಾರ ಸಮುದಾಯಕ್ಕೆ ಪ್ರತ್ಯೇಕ ನಿಗಮ ಬೇಕಿದೆ ಎಂದು ಸರಕಾರಕ್ಕೆ ಮನವಿ ಮಾಡಿದರು. ಇದೇ ವೇಳೆ ಗುಲ್ಬರ್ಗದ ಮಡಿವಾಳಪ್ಪ, ಶರಣ ಕುಂಬಾರ್, ದಶರಥ ಕುಂಬಾರ್, ಚೇತನ್ ಕಣಿವೆಹಳ್ಳಿ ಸೇರಿ ಸಮುದಾಯ ಮುಖಂಡರು ಉಪಸ್ಥಿತರಿದ್ದರು. 

Similar News