ಬೇಸರ ಮಾಡಿಕೊಳ್ಳುವ ಅಗತ್ಯವೇ ಇಲ್ಲ...: ಸುರ್ಜೇವಾಲಾ ಭೇಟಿ ಬಗ್ಗೆ ಪರಮೇಶ್ವರ್ ಸ್ಪಷ್ಟನೆ

Update: 2023-02-03 06:57 GMT

ಬೆಂಗಳೂರು: ಕಾಂಗ್ರೆಸ್ ನ ಪ್ರಣಾಳಿಕೆ ಸಮಿತಿಗೆ ರಾಜೀನಾಮೆ ನೀಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಡಾ.ಜಿ ಪರಮೇಶ್ವರ್, ನಾವು ಜವಾಬ್ದಾರಿಯಿಂದ ನಡೆದುಕೊಳ್ಳೋ ಜನ, ನಾವು ಬೇಸರ ಮಾಡಿಕೊಳ್ಳುವ ಅಗತ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಮಗೆ ಜವಾಬ್ದಾರಿ ಇದೆ, ಅಭಿಪ್ರಾಯಗಳು ಬಂದ ವೇಳೆ ಆಂತರಿಕವಾಗಿ ಹೇಳುತ್ತೇವೆ. ಆ ವಿಚಾರಗಳ ಬಗ್ಗೆ ನಾಯಕರೊಂದಿಗೆ ಚರ್ಚಿಸುತ್ತೇವೆ. ಇದನ್ನ ಬೇರೆ ರೀತಿ ಅರ್ಥೈಸಿಕೊಳ್ಳೋದು ಸರಿಯಲ್ಲ' ಎಂದು ಸ್ಪಷ್ಟನೆ ನೀಡಿದರು.

ಏಕಪಕ್ಷೀಯ ನಿರ್ಧಾರದಿಂದ ಕೋಪಗೊಂಡಿದ್ದರಿಂದ ಪರಮೇಶ್ವರ್ ನಿವಾಸಕ್ಕೆ ಸುರ್ಜೇವಾಲಾ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆನ್ನಲಾಗಿದೆ. ಮನವೊಲಿಕೆ ಬಳಿಕ ಚುನಾವಣಾ ಸಮಿತಿ ಸಭೆಯಲ್ಲಿ ನಿನ್ನೆ ಭಾಗಿಯಾಗಿದ್ದರು.

''ಪರಮೇಶ್ವರ್ ಅವರು ಪಕ್ಷಕ್ಕೆ ದೊಡ್ಡ ಆಸ್ತಿ. ರಾಜ್ಯದ ಇತಿಹಾಸದಲ್ಲಿ ಸುದೀರ್ಘ ಕಾಲ ಪಕ್ಷದ ಅಧ್ಯಕ್ಷರಾಗಿದ್ದವರು. ಸುರ್ಜೆವಾಲ ಅವರು ಅವರ ಜತೆ ಸಭೆ ಮಾಡಿದ್ದಾರೆ. ನಾನು ಆ ಸಭೆಗೆ ಹೋಗಲು ಆಗಿಲ್ಲ. ಬೆಂಗಳೂರು ಬಗ್ಗೆ ವಿಶೇಷ ಚಿಂತನೆ ಮಾಡಬೇಕಿದ್ದು, ಪರಮೇಶ್ವರ ಅವರ ನೇತೃತ್ವದ ತಂಡ ವಿದೇಶಕ್ಕೆ ತೆರಳಿ, ಸಂಚಾರ ನಿರ್ವಹಣೆ ಕುರಿತು ಅಧ್ಯಯನ ಮಾಡಲಿದೆ. ನಾವು ಈಗಾಗಲೇ ಸಿಂಗಾಪುರದ ಜತೆ ಮಾತುಕತೆ ನಡೆಸಿದ್ದೇವೆ. ತಂಡ ರಚನೆ ಬಗ್ಗೆ ಚರ್ಚೆ ಮಾಡಲಾಗಿದೆ. ಈ ಎಲ್ಲ ವಿಚಾರವಾಗಿ ಚರ್ಚೆ ಮಾಡಲು ಸುರ್ಜೆವಾಲ ಅವರು ಪರಮೇಶ್ವರ ಅವರನ್ನು ಭೇಟಿ ಮಾಡಿದ್ದಾರೆ''

- ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರು

Similar News