ಬೆಂಗಳೂರು | ಹಲ್ಲೆ ಪ್ರಕರಣ: ರೈತ ಮುಖಂಡ ಟಿಕಾಯತ್ ವಿರುದ್ಧ ಎಫ್‍ಐಆರ್ ದಾಖಲು

Update: 2023-02-03 14:35 GMT

ಬೆಂಗಳೂರು, ಫೆ. 3: ಮಸಿ ಎರಚಿ ಹಲ್ಲೆ ಮಾಡಿದ್ದ ಪ್ರಕರಣ ಸಂಬಂಧ ಇದೀಗ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಅವರ ವಿರುದ್ಧವೇ ನಗರದ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ನಗರದ ಗಾಂಧಿಭವನದಲ್ಲಿ ರಾಕೇಶ್ ಟಿಕಾಯತ್ ಅವರ ಮೇಲೆ ಮಸಿ ಎರಚಿ ಹಲ್ಲೆ ಮಾಡಿದ್ದ ಆರೋಪ ಎದುರಿಸುತ್ತಿರುವ ಆರೋಪಿಗಳ ಪೈಕಿ ಶಿವಕುಮಾರ್ ಎಂಬಾತನ ಘಟನೆ ಬಗ್ಗೆ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣ ದಾಖಲಿಸಿ, ತನಿಖೆಗೆ ಸೂಚಿಸಿದೆ ಎನ್ನಲಾಗಿದೆ.

ಆರೋಪಿಗಳಾದ ರಾಕೇಶ್ ಟಿಕಾಯತ್, ಯುದ್ಧವೀರ ಸಿಂಗ್, ಬಿ. ಅನುಸೂಯಮ್ಮ ಹಾಗೂ ಇತರರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷ ಮೇ ತಿಂಗಳಿನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕೇಳಿಬಂದಿದ್ದ ಭ್ರಷ್ಟಾಚಾರ ಆರೋಪದ ಬಗ್ಗೆ ಚರ್ಚಿಸಲೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತ ಮುಖಂಡರು ಆತ್ಮಾವಲೋಕನ ಹಾಗೂ ಸ್ಪಷ್ಟೀಕರಣ ಸಭೆ ನಡೆಸಿದ್ದರು. 

ರಾಕೇಶ್ ಟಿಕಾಯತ್ ಹಾಗೂ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು. ಆಗ ದೂರುದಾರ, ವೇದಿಕೆ ಏರಿ ಮೈಕ್ ಕಸಿಯಲು ಮುಂದಾಗಿದ್ದರು. ತಡೆದಿದ್ದ ಆರೋಪಿಗಳು, ಕುರ್ಚಿಗಳನ್ನು ಎತ್ತಿ ಹೊಡೆದಿದ್ದರು. ಇದರಿಂದ ಗಾಯಗಳಾಗಿದ್ದವು ಎಂದು ದೂರುದಾರರು ಆರೋಪಿಸಿದ್ದಾರೆ ಎಂದು ಮೂಲಗಳು ಹೇಳಿವೆ.

Similar News