ನಸುನಗು-ಮರುನಗು

Update: 2023-02-04 19:30 GMT

ಒಬ್ಬರನ್ನು ಕಂಡಾಗ ಮತ್ತೊಬ್ಬರು ನಸುನಗುವುದು ಎಂದರೆ, ಒಂದು ಜೀವವನ್ನು ಮತ್ತೊಂದು ಜೀವವು ಸಂತೋಷವಾಗಿ, ಸ್ವ ಇಚ್ಚೆಯಿಂದ ಸ್ವೀಕರಿಸುವ ಸಂಕೇತ. ಅದು ಸಂತೋಷದ ಸಂಕೇತದ ಜೊತೆಜೊತೆಗೆ ಸಹಾನುಭೂತಿ, ಸಹನೆ ಮತ್ತು ಸಮ್ಮತಿಯ ಸಂಕೇತವೂ ಹೌದು. ಬಹಳ ಮುಖ್ಯವಾಗಿ ಆಪ್ತತೆಯನ್ನು ತೋರಿ ವ್ಯಕ್ತಿ ವ್ಯಕ್ತಿಗಳಲ್ಲಿನ ಸಂಬಂಧವು ಏರ್ಪಡಬೇಕಾಗಿರುವಾಗ ಇರಬಹುದಾದ ಶೀತಲದ ಬಿಗಿತವನ್ನು ಕರಗಿಸುವ ವಿಧಾನವೂ ಹೌದು. ಅಂತಹ ಕಿರುನಗೆ ಪ್ರೇರಣೆಯೂ ಹೌದು, ಸಮ್ಮೋಹನವೂ ಹೌದು. ಅಪರಿಚಿತನೊಬ್ಬ ತಮ್ಮನ್ನು ಕಂಡು ನಕ್ಕಾಗ ಮರುನಗೆ ಬೀರಿ ಮಾತಾಡಿಸುವ ಅಥವಾ ನಕಾರಾತ್ಮಕವಾಗಿ ಗಲಾಟೆ ಮಾಡುವಂತಹ ಯಾವ ಪ್ರತಿಕ್ರಿಯೆಗಳೂ ಇರಲಿಲ್ಲ. ಅವರಲ್ಲೆಲ್ಲಾ ನಾನು ಕಂಡದ್ದು ಬರೀ ಹಿಂಜರಿಕೆ ಅಥವಾ ಮುಖೇಡಿತನ. ತಮ್ಮ ಅಹಂಕಾರ ಮತ್ತು ಹುಂಬತನದ ಒಂದಷ್ಟು ಜನರು ಕಂಡರೂ, ಅವರ ಸಂಖ್ಯೆ ಬಹಳ ಕಡಿಮೆ. ಬಹಳಷ್ಟು ಜನಕ್ಕೆ ಹಿಂಜರಿಕೆಯೇ ಇದ್ದದ್ದು. ಇದೂ ಒಂದು ಆತಂಕದ ಭಾಗವೇ. ತಮ್ಮ ಕಡೆಗೆ ನೋಡಿ ನಸುನಕ್ಕ ಅಪರಿಚಿತನ ಕಂಡು ಮರು ನಕ್ಕರೆ ಏನಾಗುವುದು ಎಂದು ತಿಳಿದಿರುವುದಿಲ್ಲ. ಆದರೆ ಆ ಹೊತ್ತಿಗೆ ಮರುನಗಲಾಗದು. ನಗು ಬಾರದು. ಒಂದು ಸಮಾಜ ಸೃಷ್ಟಿಸಿರುವ ಒಂದು ಮಿಥ್ ಕೂಡಾ ಇದೆ, ಸುಮ್ಮಸುಮ್ಮನೆ ನಗುವವರು ಹುಚ್ಚರು ಅಂತ.

ತಮ್ಮ ಪರಿಚಯವಿಲ್ಲದೆ ನಗುತ್ತಿದ್ದಾನೆಂದರೆ ಆತ ಹುಚ್ಚನಿರಬೇಕು ಎಂದು ಒಂದಾದರೆ, ಆ ಹುಚ್ಚನಿಗೆ ಮರುನಕ್ಕು ನಾನೇಕೆ ಹುಚ್ಚನಾಗಬೇಕು ಎಂಬುದು ಮತ್ತೊಂದು ಆಲೋಚನೆ ಅದಕ್ಕೆ ಸೇರಿಕೊಂಡಂತೆ. ಚೀನಾದವರು ಅಪರಿಚಿತರನ್ನು ಕಂಡರೆ ನಸುನಗುವುದೇ ಇಲ್ಲ. ಅಪರಿಚಿತರಿಗೆ ನಸುನಕ್ಕು ಸ್ವಾಗತಿಸುವುದೆಂದರೆ ನಾವೇ ಹಿನ್ನೆಲೆಗೆ ಸರಿದಂತೆ ಎಂಬಂತಹ ಭಾವ. ಆದರೂ ನೀವು ಚೀನಾಗೆ ಹೋದಾಗ ನಸುನಗಬಹುದು. ವಿದೇಶಿಯರೊಂದಿಗೆ ವ್ಯವಹರಿಸುವ ಚೀನಿಯರಿಗೆ ಮರುನಗೆ ಬೀರಲು ರೂಢಿಯಾಗಿದೆ. ಒಂದು ಸಲ ಚೀನಿಯರೊಂದಿಗೆ ಶೀತಲ ಆರಂಭ ಕೊನೆಗೊಂಡರೆ ಅವರು ಅತ್ಯಂತ ಸ್ನೇಹಮಯಿಗಳು ಮತ್ತು ಉದಾರಿಗಳೂ ಆಗಿ ತೋರುತ್ತಾರೆ. ವಿಶ್ವದ ಸ್ಮೈಲ್ ಶೇರಿಂಗ್ ಕೋಶಂಟ್‌ನಲ್ಲಿ ಅತ್ಯಂತ ಹೆಚ್ಚು ನಸುನಗುವನ್ನು ಹಂಚಿಕೊಳ್ಳುವವರು ಅಮೆರಿಕನ್ನರು. ಅಲ್ಲಿ ಅಂಗಡಿಗಳಲ್ಲಾಗಲಿ, ಸರಕಾರಿ ಕಚೇರಿಗಳಲ್ಲಾಗಲಿ, ಸಾಮಾಜಿಕ ಸಂಸ್ಥೆಗಳಲ್ಲಾಗಲಿ ನಗುಮುಖದಿಂದ ಮಾತನಾಡಿಸಿ ನಿಮಗೆ ಸರಾಗವೆನಿಸುವರು.

ಅಮೆರಿಕನ್ನರು ಅಪರಿಚಿತರನ್ನು ಕುಟುಂಬದವರಂತೆ ಕಾಣುತ್ತಾರೆ, ಕುಟುಂಬದವರನ್ನು ಅಪರಿಚಿತರಂತೆ ಕಾಣುತ್ತಾರೆ ಎಂದು ಹೇಳುವುದುಂಟು. ಇದನ್ನು ಸಕಾರಾತ್ಮವಾಗಿ ತೆಗೆದುಕೊಳ್ಳಬೇಕೋ, ನಕಾರಾತ್ಮಕವಾಗಿ ಪರಿಗಣಿಸಬೇಕೋ; ಅದು ಸಮಯ, ಸನ್ನಿವೇಶದ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಸಮುದ್ರ ದಡದ ತೀರಾ ಸನಿಹವಿರುವ ಸ್ಥಳಗಳಲ್ಲಿ ಅಪರಿಚಿತರನ್ನು ಕಂಡರೆ ನಸುನಗುವ ರೂಢಿ ಇದೆ. ಹಾಗೆ ನಸುನಕ್ಕು, ಸಮ್ಮತಿಸುವಂತೆ ಅಥವಾ ಸ್ವಾಗತಿಸುವಂತೆ ತಲೆದೂಗುವುದೂ ಉಂಟು. ಮೊದಲಿನಿಂದಲೂ ವಾಣಿಜ್ಯಕ್ಕಾಗಿ ಬೇರೆ ಬೇರೆ ದೇಶಗಳಿಂದ ಬರುತ್ತಿದ್ದ ವ್ಯಾಪಾರಿಗಳನ್ನು, ಸಂಶೋಧಕರನ್ನು, ಸಾಹಸಿಗಳನ್ನು ಸ್ವಾಗತಿಸುತ್ತಿದ್ದಂತಹ ಸಮಾಜೋಸಾಂಸ್ಕೃತಿಕ ರೂಢಿಯು ವ್ಯಕ್ತಿಗಳಲ್ಲಿ ರಕ್ತಗತವಾಗಿರುವುದೇನೋ! ಒಂದು ಜಿಜ್ಞಾಸೆ. ಸಂಬಂಧಗಳು ಸಮ್ಮತಿಯೊಂದಿಗೆ ಸರಾಗವನ್ನು ಅನುಭವಿಸಲು ಆರಂಭಿಕ ಸಾಧನ ಈ ನಸುನಗು.

ನಸುನಗುವುದರಿಂದ ಮುಖದ ಸೌಂದರ್ಯ ವೃದ್ಧಿಸುವುದೇ ಅಲ್ಲದೇ ಲವಲವಿಕೆಯಿಂದ ಕೂಡಿರುವವರಂತೆ ಕಾಣುತ್ತಾರೆ. ನಗುವುದರಿಂದ ಒಂದೊಳ್ಳೆಯ ಭಾವ ಉಂಟಾಗುವುದಲ್ಲದೇ ನೋವನ್ನು ಮರೆಸಲೂ ಸಹಾಯಕವಾಗುತ್ತದೆ. ಮೆದುಳಿನಲ್ಲಿ ಉತ್ತಮವಾದ ರಾಸಾಯನಿಕ ಕ್ರಿಯೆಗಳು ನಡೆದು ಮೆದುಳಿನ, ನರಗಳ ಮತ್ತು ಹೃದಯದ ಆರೋಗ್ಯಕ್ಕೆ ಸಹಕಾರಿಯಾಗುತ್ತವೆ. ಇನ್ನೂ ಮುಖ್ಯವಾಗಿ ನಗುನಗುತ್ತಿರುವವರ ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಕೂಡಾ ಉತ್ತಮಗೊಳ್ಳಲು ಸಹಾಯಕವಾಗುವುದಂತೆ. ಒಟ್ಟಿನಲ್ಲಿ ಜೀವಿತಾವಕಾಶವನ್ನು ಉತ್ತಮಗೊಳಿಸಿಕೊಳ್ಳಲು, ಜೀವಿತಾವಧಿಯನ್ನು ಹೆಚ್ಚಿಸಿಕೊಳ್ಳಲು ನಸುನಗು ಒಂದು ಹಂತಕ್ಕೆ ನೆರವಾಗುವುದು. ಕೆಲವರೇಕೆ ಅಪರಿಚಿತರೆಡೆಗೆ ನಸುನಗಲಾರರು ಅಂದರೆ, ತಾವು ನಕ್ಕಾಗ ಅವರು ಮರುನಗದೇ ಹೋದರೆ ಮುಜುಗರವೂ, ಅಪಮಾನಕ್ಕೀಡಾದಂತಾಗುವುದು ಎಂದು. ಕೆಲವೊಮ್ಮೆ ಅವರು ಮಾನಸಿಕ ಒತ್ತಡದಲ್ಲಿರುವಾಗ ಅಥವಾ ಕೆಟ್ಟ ಮೂಡಿನಲ್ಲಿರುವಾಗ ನಕ್ಕರೆ ಅವರಿಗೆ ಕಿರಿಕಿರಿಯಾಗಿ ಅದರಿಂದ ನಕಾರಾತ್ಮಕ ಪ್ರತಿಕ್ರಿಯೆ ಕೊಡಬಹುದು ಎಂದು. ಕೆಲವರೇಕೆ ನಸುನಗುವಿಗೆ ಪ್ರತಿಕ್ರಿಯೆ ನೀಡುವುದಿಲ್ಲವೆಂದರೆ, ಅವರಿಗೆ ಮರುನಗು ನೀಡುವುದರಿಂದ ತನ್ನ ಸಾಮಾಜಿಕ ಅಥವಾ ವ್ಯಕ್ತಿಗತವಾದ ಸ್ಥಾನಮಾನವು ಕೆಳಗಿಳಿದಂತಾಗಿ ಅವರು ಸದರ ತೆಗೆದುಕೊಳ್ಳಬಹುದು ಎಂಬ ಭಾವ. ಮತ್ತೆ ಕೆಲವರಿಗೆ, ತಾವು ನಸುನಕ್ಕವರಿಗೆ ಮರುನಕ್ಕರೆ, ಅದೇ ಸಲುಗೆಯಲ್ಲಿ ತಮ್ಮಿಂದ ಉಪಕಾರ ತೆಗೆದುಕೊಳ್ಳಲು ಮುಂದಾಗಬಹುದು ಎಂಬ ಅಂಜಿಕೆ. ಇಷ್ಟು ನಿರ್ದಾಕ್ಷಿಣ್ಯವಾಗಿ ಹೇಳಬಲ್ಲೆ, ಅಹಂಕಾರಿಗಳಿಗೆ ಮತ್ತು ಲೋಭಿಗಳಿಗೆ ಮರುನಗಲು ಸಂಕಟವಾಗುತ್ತದೆ.

ಅದುಬಿಟ್ಟರೆ, ಬೇರೆ ಬೇರೆ ತರಹದ ಆತಂಕಗಳು ಅವರಲ್ಲಿ ಮುಖೇಡಿತನವನ್ನು ಅಥವಾ ಹಿಂಜರಿಕೆಯನ್ನು ಹುಟ್ಟಿಹಾಕುತ್ತವೆ. ಒಂದು ಹುಡುಗಿಗೆ ಅಥವಾ ಮಹಿಳೆಗೆ ಒಬ್ಬ ಪುರುಷನು ನಸುನಕ್ಕಾಗ ಈಕೆಯೂ ಮರುನಗೆ ಬೀರಿದರೆ, ಆತ ತನ್ನಲ್ಲಿ ಸಲುಗೆ ಬೆಳೆಸಿಕೊಂಡು ಅಡ್ವಾಂಟೇಜ್ ತೆಗೆದುಕೊಳ್ಳಲು ಮುಂದಾಗಬಹುದು. ನಗುವ ಹೆಣ್ಣನ್ನು ನಂಬಬಾರದು ಎಂದು ಗಾದೆ ಮಾಡಿರುವ ಸಮಾಜವಲ್ಲವೇ ನಮ್ಮದು? ಈಗಲೂ ಬಹಳಷ್ಟು ಪುರುಷರಲ್ಲಿ ಒಂದು ಹೆಣ್ಣು ಅಪರಿಚಿತ ಗಂಡಿಗೆ ನಸುನಕ್ಕಳೆಂದರೆ ಅಗ್ಗದ ಹೆಣ್ಣಾಗಿ ಅವಳನ್ನು ಕಾಣುತ್ತಾರೆ. ''ಏನು ಸಿಕ್ಕಿಸಿಕ್ಕಿದವರಿಗೆಲ್ಲಾ ಹಲ್ಲು ಕಿರಿತೀಯಾ'' ಎಂದು ಹೆಂಡತಿ, ಮಗಳು, ತಂಗಿಯರನ್ನು ತಮ್ಮ ಸುಪರ್ದಿನಲ್ಲಿಟ್ಟುಕೊಂಡು ಅವಳ ಶೀಲ ಮತ್ತು ಸಾಮಾಜಿಕ ಮಾನ ಕಾಪಾಡಲು ಯತ್ನಿಸುವ ಪುರುಷ ಸಂಬಂಧಿಗಳನ್ನು ನಮ್ಮ ದೇಶದಲ್ಲಂತೂ ನಿತ್ಯವೂ ನೋಡಬಹುದು. ಹೀಗಾಗಿ ನಮ್ಮಲ್ಲಿ ಗಂಡಿಗೂ, ಹೆಣ್ಣಿಗೂ ಮುಕ್ತವಾಗಿ ಅಪರಿಚಿತರೊಡನೆ ನಗುವುದರಲ್ಲಿ ತೊಡಕಿದೆ. ಮನಶಾಸ್ತ್ರೀಯವಾಗಿಯೂ ಮತ್ತು ಮೆದುಳು ಹಾಗೂ ನರವಿಜ್ಞಾನದಲ್ಲಿಯೂ ನಸುನಗುವ ಮತ್ತು ಮರುನಗುವ ಭಾವಗಳ ವಿನಿಮಯಕ್ಕೆ ಬಹಳಷ್ಟು ಸಕಾರಾತ್ಮಕವಾದ ಬೆಂಬಲವಿದೆ.

ಅದೆಲ್ಲಾ ಇರಲಿ, ಸೂರ್ಯನಿಂದ ಬೆಳಕು ತಂತಾನೆ ಬರುವಂತೆ, ಅರಳಿರುವ ಹೂವು ಸುಗಂಧವನ್ನು ತಂತಾನೆ ಸೂಸುವಂತೆ; ನಿರ್ಮಲ ಮನಸ್ಸಿನಿಂದ, ಮುಕ್ತ ಹೃದಯದಿಂದ ಸಂತೋಷವೆಂಬುದು ತಂತಾನೆ ನಸುನಗುವಾಗಿ ನಮ್ಮಿಂದ ಹೊರಗೆ ಹೊಮ್ಮಲಿ. ಐಚ್ಛಿಕ ಕುರುಡನಿಗೆ ನಮ್ಮ ನಗೆಯ ಬೆಳಕು ಕಾಣದಿರೆ, ಮೂಗು ಕಟ್ಟಿರುವವರಿಗೆ ಸುಗಂಧವನ್ನು ಆಘ್ರಾಣಿಸಲಾಗದಿದ್ದರೆ; ಚಿಂತೆ ಇಲ್ಲ. ಸಹಜವಾದ ಆನಂದ ನಮ್ಮಲ್ಲಿರಲಿ, ಸರಾಗವಾಗಿ ನಸುನಗು ಅವರಿವರೆನ್ನದೆ ಸೂಸುತ್ತಿರಲಿ. ಏಕೆಂದರೆ ನಿಸರ್ಗದಲ್ಲಿ ಗಾಳಿ, ಬೆಳಕು, ಹೂ ಗಿಡ ಎಲೆಗಳ ಮಧುರವಾದ ಸುವಾಸನೆ ಯಾವುವೂ ಪಕ್ಷಪಾತವನ್ನು ಮಾಡುವುದಿಲ್ಲ. ಇವರು ಯೋಗ್ಯ ಇವರು ಅಯೋಗ್ಯ ಎಂದು ಎನ್ನದೇ, ಇವನು ಉಚ್ಚ ಇವನು ನೀಚ ಎನ್ನದೇ ಮುಕ್ತವಾಗಿ ತಮ್ಮ ಕೊಡುಗೆಗಳನ್ನು ನೀಡುತ್ತಿರುತ್ತವೆ. ನಮ್ಮ ನಸುನಗೆಯೂ ಹಾಗೇ ಮುಕ್ತವಾಗಿರಲಿ ಎಂದು ನನ್ನಾಸೆ.

Similar News

ಮಧುರ ವಿಷ
ಮನೋಭವನ
ಕಿವಿಗೊಡೋಣ
ಜಡತೆಯ ರೋಗ