ಬೆಂಗಳೂರಿನ ರಿಂಗ್ ರಸ್ತೆಗೆ ನಟ ಪುನೀತ್ ರಾಜಕುಮಾರ್ ಹೆಸರು: ಸಚಿವ ಆರ್​.ಅಶೋಕ್

Update: 2023-02-06 13:08 GMT

ಬೆಂಗಳೂರು, ಫೆ.6: ನಟ ಪುನೀತ್ ರಾಜ್‍ಕುಮಾರ್ ಹೆಸರನ್ನು ನಗರದ ರಿಂಗ್ ರಸ್ತೆಗೆ ಮಂಗಳವಾರ ನಾಮಕರಣ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಸೋಮವಾರ ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಟ ಪುನೀತ್ ರಾಜ್‍ಕುಮಾರ್ ನಿಧನದ ನಂತರದಲ್ಲಿ ಅವರನ್ನು ಬೇರೆ ಬೇರೆ ರೀತಿಯಲ್ಲಿ ನೆನಪಿಸಿಕೊಳ್ಳುವ ಕಾರ್ಯವಾಗುತ್ತಿದ್ದು, ಪದ್ಮನಾಭನಗರದಲ್ಲಿ ರಸ್ತೆ, ವೃತ್ತ, ಪಾರ್ಕ್‍ಗೆ ಪುನೀತ್ ಹೆಸರನ್ನು ಇಡಲಾಗುತ್ತಿದೆ. ಮೈಸೂರು ರಸ್ತೆಯಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಪುನೀತ್ ಹೆಸರಿಡುವ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿದ್ದು, ಮಂಗಳವಾರ ಈ ರಸ್ತೆ ಉದ್ಘಾಟನೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಫೆ.7ರ ಸಂಜೆ 6 ಗಂಟೆಗೆ ಪದ್ಮನಾಭನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಸ್ತೆಯನ್ನು ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ ನಟ ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಪುನೀತ್ ಪತ್ನಿ ಅಶ್ವಿನಿ ಪುನೀತ್‍ರಾಜ್‍ಕುಮಾರ್ ಸೇರಿ ಅನೇಕರು ಭಾಗಿಯಾಗುತ್ತಿದ್ದಾರೆ ಎಂದು ತಿಳಿಸಿದರು. 

ರೇಸ್‍ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರು ಇಡಬೇಕೆಂದು ಅಭಿಮಾನಿಗಳು ಸರಕಾರಕ್ಕೆ ಪತ್ರ ಬರೆದಿದ್ದಾರೆ. ಅಂಬರೀಶ್ ಅವರಿಗೂ ರೇಸ್‍ಕೋರ್ಸ್ ರಸ್ತೆಗೂ ಅವಿನಾಭಾವ ಸಂಬಂಧವಿದೆ. ಈ ರಸ್ತೆಗೆ ಅಂಬರೀಶ್ ಹೆಸರು ಇಡಬೇಕೆಂಬ ಕೋರಿಕೆಯನ್ನು ಮುಖ್ಯಮಂತ್ರಿ ಗಮನಕ್ಕೆ ತರುತ್ತೇನೆ ಮುಂದಿನ ಮೇನಲ್ಲಿ ನಾವೇ ಇರುತ್ತೇವೆ, ಆಗ ನೋಡೋಣ ಎಂದು ಸಚಿವ ಅಶೋರ್ ತಿಳಿಸಿದರು.

Similar News