ಪುನೀತ್​ ರಾಜ್​​ಕುಮಾರ್​ ರಸ್ತೆ ನಾಮಕರಣ ಕಾರ್ಯಕ್ರಮದ ಆಹ್ವಾನ ಪತ್ರಿಕೆ, ಫ್ಲೆಕ್ಸ್​ನಲ್ಲಿ ಅಪ್ಪು ಫೋಟೋನೇ ಇಲ್ಲ!

ರಾರಾಜಿಸಿದ ರಾಜಕೀಯ ನಾಯಕರು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

Update: 2023-02-07 07:07 GMT

ಬೆಂಗಳೂರು, ಫೆ.7: ಮೈಸೂರು ರಸ್ತೆಯಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ನಟ ಪುನೀತ್ ರಾಜ್‍ಕುಮಾರ್ ಹೆಸರನ್ನು ಮಂಗಳವಾರ ನಾಮಕರಣ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ನಿನ್ನೆ ಹೇಳಿದ್ದರು. ಅದರಂತೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಇದಕ್ಕಾಗಿ ಹಾಕಿದ ಫ್ಲೆಕ್ಸ್​​ ಹಾಗೂ ಆಹ್ವಾನ ಪತ್ರಿಕೆಯಲ್ಲಿ ರಾಜಕೀಯ ನಾಯಕರ ಫೋಟೊ ಮಾತ್ರ ಕಾಣಿಸುತ್ತಿದೆ. ಆದರೆ, ಎಲ್ಲಿಯೂ ಡಾ. ಪುನೀತ್ ರಾಜ್​ಕುಮಾರ್ ಅವರ ಫೋಟೊ ಇಲ್ಲ. 

ಪ್ರಧಾನ ಮಂತ್ರಿ ನರೇಂದ್ರ ಮೋದಿ,  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ತೇಜಸ್ವಿ ಸೂರ್ಯ, ಕಂದಾಯ ಸಚಿವ ಆರ್.ಅಶೋಕ್ ಅವರ ಫೋಟೊ ಆಹ್ವಾನ ಪತ್ರಿಕೆ ಮತ್ತು ಫ್ಲೆಕ್ಸ್ ನಲ್ಲಿ ಕಾಣಿಸುತ್ತಿದೆ.

ಅಭಿಮಾನಿಗಳ ಆಕ್ರೋಶ:

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪುನೀತ್ ಅವರ ಅಭಿಮಾನಿಗಳು, ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ನಾಯಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.  'ಪುನೀತ್ ರಾಜಕುಮಾರ್ ರಸ್ತೆ ನಾಮಕರಣ ಸಮಾರಂಭ ಅಂತೆ, ಆದರೆ ನಮ್ಮ ಅಪ್ಪು ಫೋಟೋ ಹಾಕಬೇಕು ಎಂಬ ಬುದ್ದಿ ಇಲ್ಲ, ಈ ರೀತಿ ರಾಜಕೀಯ ಕಾರ್ಯಕ್ರಮ ಮಾಡಿ ಪ್ರಚಾರ ಪಡೆಯುವ ನೀಚ ರಾಜಕೀಯ ಬಿಡಿ' ಎಂದು ಪುನೀತ್ ಅಭಿಮಾನಿಯೊಬ್ಬರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. 

''ಒಳ್ಳೆದಾಯ್ತು ಬಿಡಿ, ಇವರ ಜೊತೆ ಅವರ ಫೋಟೋ ಇದ್ದಿದ್ದರೆ ತುಂಬಾ ವ್ಯಂಗ್ಯವಾಗಿರೋದು'' ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. 

ಇಂದು ಸಂಜೆ 6 ಗಂಟೆಗೆ ಪದ್ಮನಾಭನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 'ಪುನೀತ್' ರಸ್ತೆಯನ್ನು ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ ನಟ ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಪುನೀತ್ ಪತ್ನಿ ಅಶ್ವಿನಿ ಪುನೀತ್‍ರಾಜ್‍ಕುಮಾರ್ ಸೇರಿ ಅನೇಕರು ಭಾಗಿಯಾಗಲಿದ್ದಾರೆ. 

Similar News