ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕೆ ಪೊಲೀಸರಿಂದ ಕಿರುಕುಳ: ಕಬೀರ್ ಉಳ್ಳಾಲ್ ಆರೋಪ

ಮಂಗಳೂರಿನಲ್ಲಿ ನಡೆದ ಮೂರು ಪ್ರಕರಣಗಳನ್ನು ಸಿಬಿಐ ತನಿಖೆಗೆ ಒತ್ತಾಯ

Update: 2023-02-07 09:58 GMT

ಮಂಗಳೂರು, ಫೆ.7: ಮಂಗಳೂರು ಪೊಲೀಸ್ ಕಮೀಷನರ್, ಉಳ್ಳಾಲ ಪೊಲೀಸರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕೆ ಪೊಲೀಸರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಕಬೀರ್ ಉಳ್ಳಾಲ್ ಆರೋಪಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಮೂರು ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. 

ಇತ್ತೀಚೆಗೆ ನಂದಿಗುಡ್ಡೆ ಪ್ಲಾಟ್ ನಲ್ಲಿ ನಡೆದ ವೇಶ್ಯಾವಾಟಿಕೆ ಪ್ರಕರಣ, ಚಿನ್ನ ದರೋಡೆ ಪ್ರಕರಣ, ಮಂಗಳೂರಿನಲ್ಲಿ ಮಾದಕ ವಸ್ತು ಬಳಕೆ ಪ್ರಕರಣಗಳು ಸಿಬಿಐ ತನಿಖೆಗೆ ಒಳಪಡಿಸಿದರೆ ಭ್ರಷ್ಟಾಚಾರದ ಸಂಪೂರ್ಣ ಮಾಹಿತಿ ಬೆಳಕಿಗೆ ಬರಬಹುದು. ಈ ಬಗ್ಗೆ ಸತ್ಯ ಹೊರಬರಬೇಕಾದರೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಸಿ.ಸಿ ಕ್ಯಾಮರಾ ಫೂಟೇಜ್ ಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಕಬೀರ್ ಉಳ್ಳಾಲ್ ಆಗ್ರಹಿಸಿದರು.

ಪ್ರಕರಣಗಳ ಬಗ್ಗೆ ಮಂಗಳೂರು ಪೊಲೀಸ್ ಕಮೀಷನರ್ ಹಾಗೂ ಉಳ್ಳಾಲ ಪೊಲೀಸ್ ಇನ್ ಸ್ಪೆಕ್ಟರ್ ವಿರುದ್ಧ ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ದೂರು ನೀಡಿದ ಬಳಿಕ ಪೊಲೀಸರಿಂದ ನನಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಲೋಕಾಯುಕ್ತವು ಸ್ವತಂತ್ರವಾಗಿ ತನಿಖೆ ನಡೆಸುವುದನ್ನು ಬಿಟ್ಟು ಆರೋಪಿಸಿದವರನ್ನೇ ತನಿಖೆ ನಡೆಸಿ ವರದಿ ನೀಡಲು ಆದೇಶಿಸಿದೆ. ಮನೆಯ ಹತ್ತಿರ ಪೊಲೀಸರನ್ನು ಕಳಿಸುವುದು ನೋಟಿಸ್ ನೀಡುವ ಮೂಲಕ ಮಾನಸಿಕ ಧೈರ್ಯವನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಸರಕಾರವು ಭ್ರಷ್ಟಾಚಾರ ನಡೆಸುವ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತದೆ. ಈ ರೀತಿ ನನಗೆ ಮಾನಸಿಕ ಕಿರುಕುಳ ನೀಡಲು ಪೊಲೀಸ್ ಆಯುಕ್ತರು ನೇರ ಕಾರಣ ಎಂದು ಕಬೀರ್ ಆರೋಪಿಸಿದರು.

ಅತೀ ಹೆಚ್ಚು ಭ್ರಷ್ಟಾಚಾರವು ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಸಾರಿಗೆ ಇಲಾಖೆಯಲ್ಲಿ ನಡೆಯುತ್ತಿದ್ದು, ಭ್ರಷ್ಟಾಚಾರ ಸರಕಾರದ ಕುಮ್ಮಕ್ಕಿನಿಂದಲೇ ನಡೆಯುತ್ತದೆ. ಉಳ್ಳಾಲ ಪೊಲೀಸ್ ಠಾಣೆಯ ಸಿ‌.ಸಿ ಪೂಟೇಜ್  ಕೇಳಿದ್ದು ಅವರು ಇದುವರೆಗೂ ನೀಡಿಲ್ಲ. ಸುಪ್ರೀಂ ಕೋರ್ಟ್  ಆದೇಶದ ಪ್ರಕಾರ ಯಾರ ಬೇಡಿಕೆ ಬಂದರು ಅವರಿಗೆ 18 ತಿಂಗಳುಗಳ  ಸಿ‌.ಸಿ ಪೂಟೇಜ್ ನೀಡಬೇಕು. ಕೆಲವು ದಿನಗಳಿಂದ ತನಗೆ ಪೊಲೀಸ್ ಆಯುಕ್ತರ ಕಚೇರಿಯಿಂದ ಪದೇ ಪದೇ ಫೋನ್ ಕಾಲ್ ಮಾಡಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಕಬೀರ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಗಳಾದ ಅಲೆಗ್ಸಾಂಡರ್, ದಯಾನಂದ, ಪ್ರೇಮಾ ಕೊಟ್ಟಾರಿ, ಇಮ್ತಿಯಾಝ್ ಉಪಸ್ಥಿತರಿದ್ದರು.

Similar News