ಮಂಗಳೂರು: 2023ನೇ ಸಾಲಿನ ಸಂದೇಶ ಪ್ರಶಸ್ತಿ ಪ್ರದಾನ

Update: 2023-02-07 16:02 GMT

ಮಂಗಳೂರು: ನಗರದ ಬಜ್ಜೋಡಿಯ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ 2023ನೇ ಸಾಲಿನ ಸಂದೇಶ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಂಗಳವಾರ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಸಂದೇಶ ಸಾಹಿತ್ಯ ಪ್ರಶಸ್ತಿಯನ್ನು ರಾಘವೇಂದ್ರ ಪಾಟೀಲ್ (ಕನ್ನಡ), ಆಂಡ್ರೂ ಎಲ್. ಡಿಕುನ್ಹ (ಕೊಂಕಣಿ) ಡಾ.ಚಿನ್ನಪ್ಪ ಗೌಡ (ತುಳು), ಶಿವಾಜಿ ಗಣೇಶನ್ (ಮಾಧ್ಯಮ), ಜಾಯ್ಸ್ ಒಝಾರಿಯೊ (ಕೊಂಕಣಿ ಸಂಗೀತ), ಎಂ.ಎಸ್.ಮೂರ್ತಿ (ಕಲಾ), ಕೋಟಿ ಗಾನಹಳ್ಳಿ ರಾಮಯ್ಯ (ಶಿಕ್ಷಣ) ಹಾಗೂ ಪ್ರೇರಣಾ ಟ್ರಸ್ಟ್ ವಿಶೇಷ ಪ್ರಶಸ್ತಿಯನ್ನು ಮೇಘನಾ ಜೋಯಿಸ್ ಹಾಗೂ ಡಾ.ಸಬಿಹಾ ಭೂಮಿ ಗೌಡ (ಅತ್ಯುತ್ತಮ ಶಿಕ್ಷಕಿ) ಪ್ರಶಸ್ತಿ, ನಗದು, ಫಲಕಗಳನ್ನು ಪ್ರದಾನ ಮಾಡಲಾಯಿತು.

ಪ್ರತಿಷ್ಠಾನದ ಅಧ್ಯಕ್ಷ ಬಳ್ಳಾರಿ ಧರ್ಮ ಪ್ರಾಂತದ ಬಿಷಪ್ ಡಾ.ಹೆನ್ರಿ ಡಿಸೋಜ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿಷ್ಠಾನದ ಟ್ರಸ್ಟಿ, ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್  ಸಲ್ದಾನ್ಹ ಮಾತನಾಡಿ ಸಮಾಜದ ಉದ್ಧಾರಕ್ಕಾಗಿ, ಕಷ್ಟದಲ್ಲಿರುವ ದಲಿತರ, ಶೋಷಿತರ ಪರವಾಗಿ ತಮ್ಮನ್ನು ತ್ಯಾಗ ಮಾಡುತ್ತಾ ಬದುಕಿದವರಿಗೆ ಈ ಪ್ರಶಸ್ತಿ ಸಿಗುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ ಆಳ್ವ ‘32 ವರ್ಷಗಳಿಂದ ಸಂದೇಶ ಸಂಸ್ಥೆ ಸಾಮಾಜಿಕ ಸಾಮರಸ್ಯ, ಮೌಲ್ಯಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿಕೊಂಡು ಪ್ರಶಸ್ತಿ ನೀಡಿ ಸಮಾಜ ಕಟ್ಟುವ ಕೆಲಸವನ್ನು ಸಮರ್ಥವಾಗಿ ಮಾಡುತ್ತಿದೆ ಎಂದರು.

ಈ ಸಂದರ್ಭ ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ.ಸುದೀಪ್ ಪೌಲ್, ಟ್ರಸ್ಟಿಗಳಾದ ರೋಯ್ ಕ್ಯಾಸ್ತಲಿನೊ ಮತ್ತು ಫಾ.ಐವನ್ ಪಿಂಟೊ, ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ. ವಲೇರಿಯನ್ ರೊಡ್ರಿಗಸ್ ಉಪಸ್ಥಿತರಿದ್ದರು. ಐರಿನ್ ರೆಬೆಲ್ಲೋ ಕಾರ್ಯಕ್ರಮ ನಿರೂಪಿಸಿದರು.

Similar News