ಕರ್ನಾಟಕ ಲೋಕಾಯುಕ್ತರ ರಾಜೀನಾಮೆ ಪಡೆಯಲು ಒತ್ತಾಯ: ರಾಜ್ಯಪಾಲರು, ಸಿಎಂಗೆ ನೈಜ ಹೋರಾಟಗಾರರ ವೇದಿಕೆ ಮನವಿ

Update: 2023-02-08 05:59 GMT

 ಬೆಂಗಳೂರು, ಫೆ.8: ಕರ್ನಾಟಕ ಲೋಕಾಯುಕ್ತ ಸಂಸ್ಥೆ ಒಂದಲ್ಲ ಒಂದು ಕಾರಣಕ್ಕೆ ಹಗರಣದ ಹೂರಣವಾಗಿ ಜನಸಾಮಾನ್ಯರ ಬಾಯಿಗೆ ಆಹಾರವಾಗಿದೆ. ಅಲ್ಲದೆ ಲೋಕಾಯುಕ್ತರು ಸಾರ್ವಜನಿಕರಿಂದ ಬರುವ ದೂರುಗಳನ್ನು ಸಮರ್ಪಕವಾಗಿ ಮತ್ತು ನ್ಯಾಯ ಸಮ್ಮತವಾಗಿ ತನಿಖೆ ನಡೆಸುತ್ತಿಲ್ಲ. ಆದ್ದರಿಂದ ತಕ್ಷಣ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರಿಂದ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ಪಡೆಯುವಂತೆ ನೈಜ ಹೋರಾಟಗಾರರ ವೇದಿಕೆ ಒತ್ತಾಯಿಸಿದೆ.

ಈ ಬಗ್ಗೆ ರಾಜ್ಯಪಾಲರಿಗೆ, ಮುಖ್ಯಮಂತ್ರಿಗೆ, ಸರಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿರುವ ಸಾಮಾಜಿಕ ಹೋರಾಟಗಾರ ಎಚ್.ಎಂ.ವೆಂಕಟೇಶ್, ಹಾಲಿ ಲೋಕಾಯುಕ್ತರ ಕುಟುಂಬದ ವಿರುದ್ಧ ರಾಜ್ಯ ಬಾರ್ ಕೌನ್ಸಿಲ್ ನಲ್ಲಿ ವಕೀಲರ ಕಾಯ್ದೆ ಸೆಕ್ಷನ್ 35, 1961 ಪ್ರಕಾರ ದೂರು ದಾಖಲಾಗಿದೆ. ಬಹಳ ಮುಖ್ಯವಾಗಿ ನ್ಯಾ. ಬಿ.ಎಸ್.ಪಾಟೀಲ್ ಅವರ ಹೆಸರನ್ನು ಬಳಸಿಕೊಂಡು ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಲಾಭ ಗಳಿಸುವಲ್ಲಿ ಅವರ ಕುಟುಂಬ ನಿರಂತರವಾಗಿ ಶ್ರಮಿಸುತ್ತಿರುವ ಬಗ್ಗೆ ಅನುಮಾನ ಇದೆ. ಇದೇ ಕಾರಣಕ್ಕೆ ಈ ಹಿಂದೆ ನೈಜ್ಯ ಹೋರಾಟಗಾರರ ವೇದಿಕೆಯು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರಿಗೆ ಮನವಿ ಸಲ್ಲಿಸಿ ತಮ್ಮ ಮತ್ತು ತಮ್ಮ ಕುಟುಂಬದ ಚರ-ಸ್ಥಿರಾಸ್ತಿಯನ್ನು ಘೋಷಿಸುವಂತೆ ಮನವಿ ಮಾಡಿತ್ತು. ಆದರೆ ಅದಕ್ಕೆ ಅವರು ಸ್ಪಂದಿಸಿಲ್ಲ. ಆದ್ದರಿಂದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರ ಕುಟುಂಬದ ಚರ-ಸ್ಥಿರಾಸ್ತಿಯ ಬಗ್ಗೆ ತನಿಖೆ ಮಾಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ರಾಜಕಾರಣಿಗಳು ತಮಗೆ ಅನುಕೂಲಕರ ವಾತಾವರಣ ಸೃಷ್ಟಿಸಿಕೊಳ್ಳಲು ಲೋಕಾಯುಕ್ತ ಮೂಲ ಕಾಯ್ದೆಯನ್ನು ತಿದ್ದುಪಡಿ ಮಾಡಿ ತಮಗೆ ಇಷ್ಟ ಬಂದವರನ್ನು, ತಮ್ಮ ತಾಳಕ್ಕೆ ತಕ್ಕಂತೆ ವರ್ತಿಸುವವರನ್ನು ಲೋಕಾಯುಕ್ತ ಹುದ್ದೆಗೆ ಆಯ್ಕೆಮಾಡಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತದೆ. ಆದ್ದರಿಂದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರಿಂದ ತಕ್ಷಣ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ನೈಜ ಹೋರಾಟಗಾರರ ವೇದಿಕೆ ಒತ್ತಾಯಿಸಿದೆ.

ಒಂದು ವೇಳೆ ಸರಕಾರ ಈ ಬಗ್ಗೆ ಸ್ಪಂದಿಸದೇ ಇದ್ದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ರಾಜೀನಾಮೆಗೆ ಆಗ್ರಹಿಸಿ ನೈಜ ಹೋರಾಟಗಾರರ ವೇದಿಕೆಯು ಭ್ರಷ್ಟಾಚಾರ ವಿರೋಧಿ ಸಂಘಟನೆಗಳು, ಸಾಮಾಜಿಕ ಹೋರಾಟಗಾರರು ಹಾಗೂ ಪ್ರಜಾ ನ್ಯಾಯ ವೇದಿಕೆಯ ನೇತೃತ್ವದಲ್ಲಿ ಚಳವಳಿ ಹಮ್ಮಿಕೊಳ್ಳಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಮನವಿಯ ಪ್ರತಿಯನ್ನು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರಿಗೆ ಸಲ್ಲಿಸಿರುವ ನೈಜ ಹೋರಾಟಗಾರರ ವೇದಿಕೆ, ಸೂಕ್ತ ಕ್ರಮಕ್ಕಾಗಿ ಸರಕಾರವನ್ನು ಒತ್ತಾಯಿಸುವಂತೆ ಮನವಿ ಮಾಡಿದೆ.

Similar News