ಇರಾನ್: ಭೂಗತ ವಾಯುನೆಲೆಯ ಅನಾವರಣ

Update: 2023-02-08 17:41 GMT

ಟೆಹ್ರಾನ್, ಫೆ.8: `ಈಗಲ್ 44' ಎಂಬ ಗುಪ್ತನಾಮ ಹೊಂದಿರುವ ತನ್ನ ಪ್ರಪ್ರಥಮ ಭೂಗತ ವಾಯುನೆಲೆಯನ್ನು ಇರಾನ್ ಅನಾವರಣಗೊಳಿಸಿದ್ದು ಇದು ದೀರ್ಘಶ್ರೇಣಿಯ ಕ್ರೂಸ್‍ಕ್ಷಿಪಣಿಯೊಂದಿಗೆ ಶಸ್ತ್ರಸಜ್ಜಿತವಾದ ಯುದ್ಧವಿಮಾನವನ್ನು ಸಂಗ್ರಹಿಸುವ ಸಾಮಥ್ರ್ಯವನ್ನು ಹೊಂದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ಇರ್ನಾ ಸುದ್ಧಿಸಂಸ್ಥೆ ವರದಿ ಮಾಡಿದೆ.

ಭೂಗತ ವಾಯುನೆಲೆಯಲ್ಲಿ 1979ರಲ್ಲಿ ಅಮೆರಿಕಾದಿಂದ ಖರೀದಿಸಿರುವ ಎಫ್-4ಇ ಫ್ಯಾಂಟಮ್ ಬಾಂಬರ್ ವಿಮಾನದ ಜತೆ ಇರಾನ್ ವಾಯುಪಡೆಯ ಸಿಬಂದಿ ನಿಂತುಕೊಂಡಿರುವ ಫೋಟೋವನ್ನು ಇರ್ನಾ ಬಿಡುಗಡೆಗೊಳಿಸಿದೆ. ಈಗಲ್ 44 ಎಂಬ ಗುಪ್ತನಾಮ ಹೊಂದಿರುವ ಈ ಭೂಗತ ವಾಯುನೆಲೆಯಲ್ಲಿ ಎಲ್ಲಾ ವಿಧದ ಯುದ್ಧವಿಮಾನ, ಬಾಂಬರ್ ವಿಮಾನ ಹಾಗೂ ಡ್ರೋನ್‍ಗಳನ್ನು ನೆಲೆಗೊಳಿಸಬಹುದು. ಈ ವಾಯುನೆಲೆಯ ನಿಖರವಾದ ಸ್ಥಳವನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಪರ್ವತದ ಕೆಳಗೆ ನೂರಾರು ಮೀಟರ್ ಆಳದಲ್ಲಿ ಇದನ್ನು ಸ್ಥಾಪಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭೂಗತ ವಾಯುನೆಲೆಯಲ್ಲಿ ದೀರ್ಘ ಶ್ರೇಣಿಯ ಅತ್ಯಾಧುನಿಕ  ಕ್ರೂಸ್ ಕ್ಷಿಪಣಿಗಳನ್ನು ನೆಲೆಗೊಳಿಸಲಾಗಿದೆ. ಆದ್ದರಿಂದ  ತನ್ನ ಹಳೆಯ ಫೈಟರ್ ಜೆಟ್ ವಿಮಾನಗಳನ್ನು ದಾಳಿಯ ಸಂದರ್ಭದಲ್ಲಿ ನಿಕಟ ಗುರಿಗಳನ್ನು ನಾಶಪಡಿಸಲು ಇರಾನ್ ಬಳಸಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇಸ್ರೇಲ್ ಸೇರಿದಂತೆ ನಮ್ಮ ಶತ್ರುಗಳಿಂದ ಯಾವುದೇ ದಾಳಿ ನಡೆದರೂ ಅದಕ್ಕೆ ಈಗಲ್ 44 ಸೇರಿದಂತೆ ನಮ್ಮ ಹಲವು ವಾಯುನೆಲೆಗಳಿಂದ ಉಗ್ರ ಪ್ರತಿಕ್ರಿಯೆ ಎದುರಾಗಲಿದೆ ಎಂದು ಇರಾನ್ ಸಶಸ್ತ್ರದಳದ ಮುಖ್ಯಸ್ಥ ಮೇಜರ್ ಜನರಲ್ ಮುಹಮ್ಮದ್ ಬಘೇರಿ ಹೇಳಿದ್ದಾರೆ.

ಕಳೆದ ವಾರ ಅಮೆರಿಕ ಮತ್ತು ಇಸ್ರೇಲ್ ಸೇನೆ ನಡೆಸಿದ ಜಂಟಿ ಸಮರಾಭ್ಯಾಸಕ್ಕೆ ಪ್ರತಿಯಾಗಿ, ತನ್ನ ಶಕ್ತಿಯನ್ನು ಪ್ರದರ್ಶಿಸಲು ಇರಾನ್ ಈ ಭೂಗತ ವಾಯುನೆಲೆಯನ್ನು ಅನಾವರಣಗೊಳಿಸಿರಬಹುದು  ಎಂದು `ಅಲ್‍ಜಝೀರಾ' ವರದಿ ಮಾಡಿದೆ.

Similar News