ಬೆಂಗಳೂರು ನಗರದಲ್ಲಿ ಟ್ರ್ಯಾಕ್ಟರ್ ಸಂಚಾರ ನಿಷೇಧ ಆದೇಶಕ್ಕೆ ಆಕ್ರೋಶ: ಮಾಲಕರು, ಚಾಲಕರಿಂದ ಧರಣಿ
ಬೆಂಗಳೂರು, ಫೆ.9: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಗಳ ಸಂಚಾರ ನಿಷೇಧಿಸಿರುವ ಪೊಲೀಸರ ಕ್ರಮ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿದ ಕೂಲಿ ಕಾರ್ಮಿಕರು, ಇದೊಂದು ಅವೈಜ್ಞಾನಿಕ ಸುತ್ತೋಲೆ ಆಗಿದ್ದು, ಈ ಕೂಡಲೇ ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಿದರು.
ಗುರುವಾರ ನಗರದ ಫ್ರೀಡಂ ಪಾರ್ಕಿನಲ್ಲಿ ನಮ್ಮ ಕರ್ನಾಟಕ ಸೇನೆ ನೇತೃತ್ವದಲ್ಲಿ ಜಮಾಯಿಸಿದ ಟ್ರ್ಯಾಕ್ಟರ್ ಕಾರ್ಮಿಕರು, ನಗರ ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ನಗರದಲ್ಲಿ ಟ್ರ್ಯಾಕ್ಟರ್ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿರುವ ಕ್ರಮ ಸರಿಯಲ್ಲ. ಇದರಿಂದ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸೇನೆ ರಾಜ್ಯಾಧ್ಯಕ್ಷ ಎಂ.ಬಸವರಾಜ್ ಪಡುಕೋಣೆ, ಬೆಂಗಳೂರಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಯಲ್ಲಿ ಈ ಟ್ರ್ಯಾಕ್ಟರ್ ಗಳು ಹೆಚ್ಚು ಬಳಸಲಾಗುತ್ತದೆ. ಪೊಲೀಸರ ಹೊಸ ಕ್ರಮದಿಂದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಿಂದ ವಲಸೆ ಬಂದ ಲಕ್ಷಾಂತರ ಮಂದಿ ಬಡವರು, ಕೂಲಿ ಕಾರ್ಮಿಕರು, ಟ್ರ್ಯಾಕ್ಟರ್ ಚಾಲಕರು ಹಾಗೂ ಸಹಾಯಕರು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಟ್ರ್ಯಾಕ್ಟರ್ ಮಾಲಕರ ಘಟಕ (ನಮ್ಮ ಕರ್ನಾಟಕ ಸೇನೆ ಸಂಯೋಜಿತ) ಅಧ್ಯಕ್ಷ ಲಿಂಗಪ್ಪ ಹುಲ್ಲೂರು ಮಾತನಾಡಿ, ಪ್ರತಿ ಟ್ರ್ಯಾಕ್ಟರ್ ಗೆ ಚಾಲಕ, ಒಬ್ಬ ಸಹಾಯಕ ಹಾಗೂ ಇಬ್ಬರು ಕೂಲಿಯಾಳು ಸೇರಿದಂತೆ ಕನಿಷ್ಠ ನಾಲ್ವರಿಗೆ ಉದ್ಯೋಗ ಸಿಗುತ್ತದೆ.
ಆದರೆ, 40 ಸಾವಿರ ಟ್ರ್ಯಾಕ್ಟರ್ ಗಳ ಕೆಲಸ ಸ್ಥಗಿತಗೊಂಡರೆ ಒಂದು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಆತಂಕ ಸೃಷ್ಟಿಯಾಗಿದೆ. ಹಾಗಾಗಿ ಬೆಂಗಳೂರು ಸಂಚಾರಿ ಪೊಲೀಸರು ನಗರದಲ್ಲಿ ಏಕಾಏಕಿ ಟ್ರ್ಯಾಕ್ಟರ್ ಸಂಚಾರ ನಿಷೇಧಿಸಿ ಹೊರಡಿಸಿರುವ ಆದೇಶ ಅವೈಜ್ಞಾನಿಕವಾದುದು. ಆದ್ದರಿಂದ ಇದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.