ಬೇಡಿಕೆ ಈಡೇರಿಕೆಯ ಭರವಸೆ: ಅನಿರ್ಧಿಷ್ಟಾವಧಿ ಹೋರಾಟ ಕೈಬಿಟ್ಟ BBMP ನೌಕರರು

Update: 2023-02-09 13:05 GMT

ಬೆಂಗಳೂರು, ಫೆ.8: ಹೆಲ್ತ್ ಕಾರ್ಡ್ ನ್ಯೂನತೆ ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ಈಡೇರಿಸಲು ಬದ್ಧವಾಗಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭರವಸೆ ನೀಡಿದ ಹಿನ್ನೆಲೆ ಬಿಬಿಎಂಪಿ ನೌಕರರು ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಹೋರಾಟವನ್ನು ಅಂತ್ಯಗೊಳಿಸಿದರು.

ಗುರುವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ನೌಕರರ ಮನವಿ ಪತ್ರ ಸ್ವೀಕರಿಸಿ ಆಯುಕ್ತರು ಮಾತನಾಡಿದರು.

ಬೇಡಿಕೆಗಳ ಸಂಬಂಧ ಸಂಘದ ಪ್ರಮುಖರೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಬಿಬಿಎಂಪಿ ಮಟ್ಟದ ಬೇಡಿಕೆಗಳನ್ನು ಈಡೇರಿಸಲು ನಾವು ಬದ್ಧವಾಗಿದೆ. ಇನ್ನೂ, ಕೆಲ ಬೇಡಿಕೆಗಳ ಕುರಿತು ಸರಕಾರದ ಗಮನಕ್ಕೆ ತರಲಾಗುವುದು ಎಂದು ಅವರು ಒತ್ತಾಯಿಸಿದರು.

ಹೊಸ ನೇಮಕಾತಿ ಯಾಕೆ, ಇರುವ ಜನರನ್ನೆ ಬಳಸಿ ಕೆಲಸ ಮಾಡಿಸಿ ಎಂದು ಕೆಲವೊಮ್ಮೆ ಸರಕಾರ ಚಿಂತನೆ ಮಾಡುತ್ತೇ. ಈ ಕಾರಣದಿಂದಲೇ ಕಳೆದ ಹಲವಾರು ವರ್ಷಗಳಿಂದ ಸಮಸ್ಯೆ ಆಗುತ್ತಿದೆ.ಆದರೆ, ಮುಂದಿನ ವರ್ಷ ಖಂಡಿತ ನೇಮಕಾತಿ ಪ್ರಕ್ರಿಯೆ ಜರುಗಲಿದೆ ಎಂದು ಅವರು ಹೇಳಿದರು.

ಹೆಲ್ತ್ ಕಾರ್ಡ್‍ಗೆ ಸಂಬಂಧಪಟ್ಟ ಕೆಲ ಆಸ್ಪತ್ರೆಗಳು ಸರಿಯಾಗಿ ಸಹಕಾರ ನೀಡುತ್ತಿಲ್ಲ ಎನ್ನುವ ಆರೋಪಗಳು ದಿನೆ ದಿನೆ ಕೇಳಿಬರುತ್ತಿದ್ದು, ಈ ಸಂಬಂಧ ಆಸ್ಪತ್ರೆಗಳ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿ, ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.

ಸಂಘದ ಅಧ್ಯಕ್ಷ ಅಮೃತ್ ರಾಜ್ ಮಾತನಾಡಿ, ಬಿಬಿಎಂಪಿ ಮುಖ್ಯ ಆಯುಕ್ತರು ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಅವರ ವ್ಯಾಪ್ತಿಗೆ ಬರುವ 3 ಬೇಡಿಕೆಗಳ ಈಡೇರಿಕೆಗೆ ಒಪ್ಪಿಗೆ ಸೂಚಿಸಿದ್ದಾರೆ. ಉಳಿದ ಬೇಡಿಕೆಗಳನ್ನು ಈಡೇರಿಸಲು ಸರಕಾರದ ಜೊತೆ ಮಾತನಾಡುವುದಾಗಿಯೂ ತಿಳಿಸಿದ್ದಾರೆ. ಈ ಹಿನ್ನೆಲೆ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ ಎಂದು ಪ್ರಕಟಿಸಿದರು.

Similar News