ಬೆಂಗಳೂರು | ವೃದ್ಧರ ಬೆದರಿಸಿ ಸುಲಿಗೆ; ನಕಲಿ ಪೊಲೀಸರ ಬಂಧನ
ಬೆಂಗಳೂರು, ಫೆ.10: ವೃದ್ಧರೊಬ್ಬರನ್ನು ಬೆದರಿಸಿ ಸುಲಿಗೆ ಮಾಡಿ ಪರಾರಿಯಾಗಿದ್ದ ಆರೋಪದಡಿ ನಕಲಿ ಪೊಲೀಸರನ್ನು ಇಲ್ಲಿನ ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಪೂಜಿನಗರದ ಮಂಜುನಾಥ, ಶ್ರೀನಗರದಕಾಳಿದಾಸ ಸರ್ಕಲ್‍ನ ಅರುಣ್ ಕುಮಾರ್ ಹಾಗೂ ಗಿರಿನಗರದ ಕಸ್ತೂರ್ ಬಾ ಕಾಲೋನಿಯ ನಾಗರಾಜ (31) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಫೆ.7ರಂದು ಮೈಸೂರು ರಸ್ತೆಯ ಸ್ಯಾಟ್‍ಲೈಟ್ ಬಸ್ ನಿಲ್ದಾಣದಿಂದ ಕೊಯಮತ್ತೂರಿಗೆ ಹೋಗಲು ನಡೆದು ಹೋಗುತ್ತಿದ್ದವೃದ್ಧ ಸುದರಂ ಅವರ ಬಳಿಗೆ ಕಪ್ಪು ಬಣ್ಣದ ಜಾಕೆಟ್ ಧರಿಸಿ ಬಂದ ಬಂಧಿತರಲ್ಲಿ ಇಬ್ಬರು ತಾವು ಪೊಲೀಸರೆಂದು ಹೇಳಿಕೊಂಡು ನಿಮ್ಮ ಬ್ಯಾಗನ್ನು ಪರಿಶೀಲಿಸಬೇಕೆಂದು ಸ್ವಲ್ಪ ದೂರ ಕರೆದೊಯ್ದರು.
ಅಲ್ಲಿಗೆ ಕಾರಿನಲ್ಲಿ ಬಂದ ಮತ್ತೊಬ್ಬ ಸೇರಿ ಮೂವರು ಬೆದರಿಸಿ 6 ಲಕ್ಷ ರೂ.ನಗದು 3 ಲಕ್ಷ ರೂ.ಬೆಲೆಯ ಚಿನ್ನದ ಬಿಸ್ಕೆಟ್ ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಸುದರಂ ನೀಡಿದ ದೂರು ದಾಖಲಿಸಿದ ಬ್ಯಾಟರಾಯನಪುರ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇವರಿಂದ 6 ಲಕ್ಷ ರೂ.ನಗದು, 167ಗ್ರಾಂ ತೂಕದ 1 ಚಿನ್ನದ ಗಟ್ಟಿ, ಆಟೊ ಹಾಗೂ ಕಾರನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಆರೋಪಿಗಳಲ್ಲಿ ಮಂಜುನಾಥ ಹೋಂಗಾರ್ಡ್ ಆಗಿದ್ದರೆ, ಇನ್ನಿಬ್ಬರು ಆಟೊ ಚಾಲಕರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಹೇಳಿದ್ದಾರೆ.