ರಾಜ್ಯಪಾಲರ ಭಾಷಣ: ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿ ಸದನಕ್ಕೆ ಹಲವು ನಾಯಕರು ಗೈರು
ಬೆಂಗಳೂರು, ಫೆ. 10: ವರ್ಷದ ಮೊದಲ ವಿಧಾನ ಮಂಡಲ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡುವ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೇರಿ ವಿಪಕ್ಷಗಳ ಹೆಚ್ಚಿನ ಸಂಖ್ಯೆಯ ಸದಸ್ಯರು ಗೈರು ಹಾಜರಾಗಿದ್ದರು.
ಶುಕ್ರವಾರ ನಿಗದಿಯಂತೆ ಬೆಳಗ್ಗೆ 11ಗಂಟೆಗೆ ವಿಧಾನಸಭೆ ಸಭಾಂಗಣಕ್ಕೆ ರಾಜ್ಯಪಾಲರ ಆಗಮಿಸಿದ ಸಂದರ್ಭದಲ್ಲಿ ಪ್ರತಿಪಕ್ಷಗಳ ಸಾಲಿನಲ್ಲಿನ ಬಹುತೇಕ ಕುರ್ಚಿಗಳು ಖಾಲಿಯಾಗಿದ್ದವು. ರಾಜ್ಯಪಾಲರು ಭಾಷಣ ವೇಳೆ ವಿಪಕ್ಷ ಸದಸ್ಯರು ಹಾಜರಿರುವುದು ಸಂಪ್ರದಾಯ. ಆದರೆ, ಇದು ಚುನಾವಣಾ ವರ್ಷವಾಗಿದ್ದು ಎಲ್ಲ ರಾಜಕೀಯ ಪಕ್ಷಗಳು ಹಾಗೂ ಬಹುತೇಕ ಶಾಸಕರೂ ಪ್ರಚಾರದತ್ತ ಗಮನಹರಿಸಿದ್ದಾರೆ.
ಪ್ರತಿಪಕ್ಷ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಮಾಡಿದರೆ, ಜೆಡಿಎಸ್ ಪಂಚರತ್ನ ಯಾತ್ರೆ ನಡೆಸುತ್ತಿದೆ. ಆಡಳಿತಾರೂಢ ಬಿಜೆಪಿ ಮೊದಲ ಹಂತದಲ್ಲಿ ಜನಸಂಕಲ್ಪ ಯಾತ್ರೆ ಮುಗಿಸಿ, ಇದೀಗ ಎರಡನೆ ಹಂತದಲ್ಲಿ ವಿಜಯ ಸಂಕಲ್ಪ ಯಾತ್ರೆ ಸಿದ್ಧತೆ ನಡೆಸಿದೆ. ಆ ಮೂಲಕ ಮೂರು ಪಕ್ಷಗಳು ಜನರನ್ನು ತಲುಪಲು ಇನ್ನಿಲ್ಲದ ಕಸರತ್ತು ನಡೆಸಿವೆ.
ಪ್ರತಿಪಕ್ಷದ ಮೊದಲ ಸಾಲಿನಲ್ಲಿ ಸಿದ್ದರಾಮಯ್ಯನವರನ್ನು ಹೊರತುಪಡಿಸಿ ಉಳಿದೆಲ್ಲಾ ಸದಸ್ಯರು ಹಾಜರಿದ್ದರು. ಇನ್ನೂ ಎರಡು, ಮೂರು ಮತ್ತು ನಾಲ್ಕನೆ ಸಾಲು ಸಂಪೂರ್ಣ ಖಾಲಿಯಾಗಿತ್ತು. ಕೊನೆಯ ಸಾಲಿನಲ್ಲಿ ಕೇವಲ ಬೆರಳೆಣಿಕೆಯಷ್ಟು ಸದಸ್ಯರು ಕಂಡು ಬಂದರು. ಪ್ರತಿಪಕ್ಷ ಉಪನಾಯಕ ಯು.ಟಿ. ಖಾದರ್, ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್, ರಮೇಶ್‍ಕುಮಾರ್, ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಸಲೀಂ ಅಹ್ಮದ್ ಸೇರಿದಂತೆ ಆಯ್ದ ಕೆಲ ಸದಸ್ಯರು ಉಪಸ್ಥಿತರಿದ್ದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಆ ಪಕ್ಷದ ಹಲವು ಸದಸ್ಯರು ಗೈರು ಹಾಜರಾಗಿದ್ದರು. ಹೀಗಾಗಿ ಬಹುತೇಕ ಆಡಳಿತ ಪಕ್ಷದ ಸಾಲಿನಲ್ಲಿ ಸದಸ್ಯರಿದ್ದರೆ ಪ್ರತಿಪಕ್ಷಗಳ ಸಾಲಿನಲ್ಲಿ ಬಹುತೇಕ ಕುರ್ಚಿಗಳು ಖಾಲಿ ಖಾಲಿಯಾಗಿದದ್ದು ಎದ್ದು ಕಾಣುತ್ತಿತ್ತು.