ಬೆಂಗಳೂರಿನ ಜೈನ್ ವಿವಿಯಲ್ಲಿ ಅಂಬೇಡ್ಕರ್ ಕುರಿತು ವಿವಾದತ್ಮಕ ನಾಟಕ ಪ್ರದರ್ಶನ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

Update: 2023-02-10 15:25 GMT

ಬೆಂಗಳೂರು, ಫೆ.10: ಜಯನಗರದ 9ನೆ ಬ್ಲಾಕ್ ಬಳಿ ಇರುವ ಜೈನ್ ವಿಶ್ವ ವಿದ್ಯಾಲಯದ ಮ್ಯಾನೇಜ್‍ಮೆಂಟ್ ಸ್ಟಡೀಸ್‍ನಲ್ಲಿ ವಿದ್ಯಾರ್ಥಿಗಳು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಪರಿಶಿಷ್ಟ ಜಾತಿ ಸೇರಿದಂತೆ ದಲಿತ ಸಮುದಾಯ ಅವಹೇಳನ ಮಾಡಿದ ವಿವಾದಾತ್ಮಕ ಕಿರು ನಾಟಕ ಪ್ರದರ್ಶಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ.

ಕಿರು ನಾಟಕದಲ್ಲಿ ಕೆಳಜಾತಿಯ ಹಿನ್ನೆಲೆಯ ವ್ಯಕ್ತಿಯೊಬ್ಬ ಮೇಲ್ಜಾತಿ ಮಹಿಳೆಯೊಂದಿಗೆ ಡೇಟಿಂಗ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಪ್ರದರ್ಶಿಸಲಾಗಿದೆ. ಇದೇ ವೇಳೆ ಆತ, ‘ತಾನು ದಲಿತ' ಎಂದು ಹೇಳಿಕೊಳ್ಳುವ ಸನ್ನಿವೇಶ ಬರುತ್ತದೆ. ಆಗ ‘ಡೋಂಟ್ ಟಚ್ ಮಿ, ಟಚ್ ಮಿ’ ಎಂಬ ಹಾಡನ್ನು ಹಾಕಿರುವುದು ಕಂಡು ಬಂದಿದೆ. ಹಾಗೆಯೇ ಈ ನಾಟಕದಲ್ಲಿ ಬಿ.ಆರ್.ಅಂಬೇಡ್ಕರ್ ಅವರನ್ನು ‘ಬಿಯರ್ ಅಂಬೇಡ್ಕರ್’ ಎಂದು ಅವಹೇಳನ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕಾಲೇಜು ಉತ್ಸವದಲ್ಲಿ ವಿದ್ಯಾರ್ಥಿಗಳು ಹೀಗೆ ಬಿ.ಆರ್.ಅಂಬೇಡ್ಕರ್ ಮತ್ತು ಪರಿಶಿಷ್ಟ ಜಾತಿ ಸೇರಿದಂತೆ ದಲಿತ ಸಮುದಾಯವನ್ನು ಒಳಗೊಂಡ ವಿವಾದಾತ್ಮಕ ಕಿರು ನಾಟಕವನ್ನು ಪ್ರದರ್ಶಿಸಿದ್ದಾರೆ. ಅಲ್ಲದೇ ದಲಿತರು ಮತ್ತು ಪರಿಶಿಷ್ಟ ಜಾತಿಯ ಬಗ್ಗೆ ವಿವಿಧ ಹಾಸ್ಯಗಳನ್ನು ವಿದ್ಯಾರ್ಥಿಗಳು ಮಾಡಿದ್ದಾರೆ. ಹಾಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗವು ಕಾಲೇಜು ಆಡಳಿತ ಮಂಡಳಿಯ ವಿರುದ್ದ ಸ್ವಯಂ ದೂರು ದಾಖಲಿಸಿಕೊಳ್ಳಲು ದಲಿತ ಮುಂಖಂಡರು ಒತ್ತಾಯಿಸುತ್ತಿದ್ದಾರೆ.

ಮುಂಬೈನ ದಲಿತ ಕಾರ್ಯಕರ್ತನೊಬ್ಬ ಈ ಸ್ಕಿಟ್ ಪ್ರದರ್ಶನದ ವಿರುದ್ಧ ಈಗಾಗಲೇ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದ್ದು, ದೂರಿನ ಪ್ರತಿಯೂ ವೈರಲ್ ಆಗುತ್ತಿದೆ. ಆದರೆ ಕಾಲೇಜಿನ ಆಡಳಿತ ಮಂಡಳಿಯು ಇದುವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಕಿರು ನಾಟಕಕ್ಕೆ ಆಕ್ಷೇಪಗಳು ಹೆಚ್ಚಾದ ನಂತರ ನಾಟಕ ಪ್ರದರ್ಶಿಸಿದ್ದ ‘ದಿ ಡೆಲ್ರಾಯ್ಸ್ ಬಾಯ್ಸ್’  ತಂಡವು ಎಲ್ಲರ ಬಳಿ ಕ್ಷಮೆಯಾಚಿಸಿದೆ ಎಂದು ತಿಳಿದು ಬಂದಿದೆ.

Similar News