ಬಿಳಿಯರು ನಿದ್ರೆಯಲ್ಲಿ ಕಾಣುತ್ತಿದ್ದ ದುಃಸ್ವಪ್ನಗಳನ್ನು ನಿಜವಾಗಿಸಿದ್ದ ವೆಸ್ಟ್ ಇಂಡೀಸ್

ಮೆಂಫಿಸ್ ಪೋಲೀಸರ ಕ್ರೌರ್ಯಕ್ಕೆ ಬಲಿಯಾದ ಟೈರ್ ನಿಕೋಲಸ್ ನೆನಪಲ್ಲಿ...

Update: 2023-02-11 06:39 GMT

ಎಲ್ಲಾ ಕ್ರೀಡೆಗಳನ್ನು ಒಳಗೊಂಡು ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ತಂಡ ಯಾವುದು ಎಂದು ನನ್ನನ್ನು ಕೇಳಿದರೆ ನಾನು ಒಂದು ಕ್ಷಣವೂ ಯೋಚಿಸದೆ ಹೇಳುವೆ, ಅದು ಎಂಬತ್ತರ ದಶಕದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವೆಂದು. ಈ ತಂಡದ ಪ್ರಾಬಲ್ಯ ಹೇಗಿತ್ತೆಂದರೆ ಜೂನ್ 1980ರಿಂದ ಮಾರ್ಚ್ 1995ರವರೆಗೆ ಇವರೊಂದು ಸರಣಿಯಲ್ಲೂ ಸೋಲಲಿಲ್ಲ. ತಮ್ಮ ದೇಶದ ಒಳಗೂ, ಹೊರಗೂ ಎಲ್ಲಾ ತಂಡಗಳನ್ನೂ ಸದೆಬಡಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡಿ, ಬಹುಶಃ ಬೇರಾವುದೇ ಸ್ಥಳೀಯ ತಂಡ ಕೂಡ ಇಷ್ಟು ಸುದೀರ್ಘ ಕಾಲ ಪ್ರಾಬಲ್ಯ ಸಾಧಿಸಿರಲಿಲ್ಲವೇನೋ.  

ಕೌತುಕವೆಂಬಂತೆ ಗುಲಾಮಗಿರಿ ಇಲ್ಲದಿದ್ದರೆ ಕ್ರಿಕೆಟ್ ಕೆರೆಬಿಯನ್ ದ್ವೀಪಗಳಿಗೆ ಹೋಗುತ್ತಲೇ ಇರಲಿಲ್ಲ. ಭಾರತಕ್ಕೆ ಪರಿಚಯಿಸಿದಂತೆ ವೆಸ್ಟ್ ಇಂಡೀಸಿಗೂ ವಸಾಹತುಶಾಹಿಗಳು ಪರಿಚಯಿಸಿದ ಕ್ರೀಡೆ- ಕ್ರಿಕೆಟ್. ಮೊದಲಿಗೆ ವೆಸ್ಟ್ ಇಂಡೀಸ್ ದ್ವೀಪಗಳಲ್ಲಿದ್ದ ಕಪ್ಪುವರ್ಣದವರು ಕ್ರಿಕೆಟ್ ಆಟದ ಮೂಕ ಪ್ರೇಕ್ಷಕರಾಗಿದ್ದರಷ್ಟೆ. ನಂತರದ ದಿನಗಳಲ್ಲಿ ಅವರಿಗೆ ನಿಧಾನವಾಗಿ ಆಟ ಅರ್ಥವಾಗತೊಡಗಿತ್ತು. ದೂರ ಹೊಡೆದ ಚೆಂಡನ್ನು ತರಲಿಕ್ಕೆ ಕಪ್ಪುವರ್ಣದವರನ್ನು ಬಳಸಿಕೊಳ್ಳಲು ಬಿಳಿಯರು ಶುರು ಹಚ್ಚಿಕೊಂಡ ಮೇಲಂತೂ ಕಪ್ಪುವರ್ಣದವರಿಗೆ ಆಟದ ನಿಯಮಗಳು ಮತ್ತಷ್ಟು ಅರ್ಥವಾದವು. ಮಾಲೀಕರಾದ ಬಿಳಿಯರು ಒಂದೇ ಜಾಗದಲ್ಲಿ ನಿಂತು ಬ್ಯಾಟಿಂಗ್ ಮಾಡಿದರೆ, ದಶಕಗಳ ಕಾಲ ಆ ಬಿರುಬಿಸಿಲಿನಲ್ಲಿ ಮೈ ಮುರಿಯುವಂತಹ ಕಾಯಕವಾಗಿದ್ದ ಬೌಲಿಂಗ್ ಮಾಡಲು ಮಾತ್ರ ಕಪ್ಪುವರ್ಣದವರಿಗೆ ಅವಕಾಶವಿತ್ತು!

ಬೌಲಿಂಗ್ ಅನ್ನುವುದು ಕಪ್ಪುವರ್ಣದವರ inferior ಸ್ಟೇಟಸ್ಗೆ ಹೊಂದುವಂತಹ ಕಾಯಕವಾಗಿತ್ತು. ಬ್ಯಾಟಿಂಗ್ ಒಂದು ಕಲಾ ಪ್ರಕಾರ, ಅದು ಸೊಗಸಾದ್ದು, ಕೌಶಲ್ಯಭರಿತ ಮತ್ತು ತಾಂತ್ರಿಕವಾದುದು. ಆದುದರಿಂದ ಆ ಕಲಾ ಪ್ರಕಾರದಲ್ಲಿ ಬಿಳಿಯರು ಮಾತ್ರ ಪ್ರಬುದ್ಧತೆ, ಪ್ರಾವೀಣ್ಯತೆ ಸಾಧಿಸಬಹುದೆಂಬ ನಂಬಿಕೆಯಿತ್ತು. ಇಂದಿಗೂ ಈ ನಂಬಿಕೆ ಹಾಗೆಯೇ ಉಳಿದಿದೆ. ಬೌಲರ್ಗಳು ಮಾತ್ರ ಪಂದ್ಯ ಗೆಲ್ಲಿಸಬಲ್ಲರು ಎಂಬ ಮಾತು ಸತ್ಯವಾದರೂ, ಕ್ರಿಕೆಟ್ ಇವತ್ತಿಗೂ ದಾಂಡಿಗನ ಆಟವೇ ಆಗಿದೆ. ಈ ಕ್ರೀಡೆಯ ನಿಯಮಗಳು, ಬೌಂಡರಿಯ ವಿಸ್ತಾರ, ಪಂದ್ಯ ನೋಡಲು ಬರುವ  ಸಾಕಷ್ಟು ವೀಕ್ಷಕರ ಒಲವು ಬ್ಯಾಟ್ಸಮನ್ ಪರವಾಗಿಯೇ ಇರುತ್ತದೆ. ಎಲ್ಲಕಿಂತ ಮಿಗಿಲಾಗಿ ಕ್ರೀಡೆಯಲ್ಲಿ ಬ್ಯಾಟ್ಸಮನ್ಗಳಿಗೆ ಸಿಗುವ ಆದ್ಯತೆ, ಫೇಮ್, ಹಣ, ಜನಪ್ರಿಯತೆ ಬೌಲರುಗಳಿಗೆ ಎಂದಿಗೂ ಸಿಗಲಾರದು.

ಕಪ್ಪುವರ್ಣದವರಾದ ಲಿಯರಿ ಕಾನ್ಸ್ಟಂಟೈನ್ ಮತ್ತು ಹೆಡ್ಲಿಯಂತಹ ಕಡೆಗಣಿಸಲಾಗದ ಪ್ರತಿಭೆಗಳು ಹೊರಹೊಮ್ಮಿದಾಗ ಬೇರೆ ದಾರಿಯಿಲ್ಲದೆ ವೆಸ್ಟ್ ಇಂಡೀಸ್ ತಂಡದಲ್ಲವರಿಗೆ 1950ರಲ್ಲಿ ಅವಕಾಶ ಕಲ್ಪಿಸಲಾಯಿತು. ಬಿಳಿಯರ ಹಿಡಿತದಲ್ಲಿದ್ದ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಅಲ್ಲಿನ ಪೀಪಲ್ ನ್ಯಾಷನಲ್ ಪಾರ್ಟಿಯ ಒತ್ತಡಕ್ಕೆ ಮಣಿದು ಹೆಡ್ಲಿಯಂತಹ ಪ್ರತಿಭೆಗೆ ತಂಡದ ನಾಯಕತ್ವದ ಜವಾಬ್ದಾರಿಯನ್ನು ನಾಮಕಾವಸ್ತೆ ನೀಡಿ, ಆ ಜವಾಬ್ದಾರಿಯನ್ನು ಕೇವಲ ಒಂದು ಪಂದ್ಯಕ್ಕೆ ಸೀಮಿತಗೊಳಿಸಿತು. ಈ ಎಲ್ಲಾ ಅವಮಾನಗಳ ನಡುವೆಯೂ ಹೆಡ್ಲಿ ಪ್ರದರ್ಶನ ಸ್ಮರಣೀಯವಾಗಿತ್ತು. ಆತನನ್ನು ಎಲ್ಲರೂ "ಬ್ಲಾಕ್ ಬ್ರಾಡ್ಮನ್" ಎಂದು ಕರೆಯುವಷ್ಟು. ಈ ರೀತಿಯ ಹೋಲಿಕೆಯಲ್ಲೇ ಹುಳುಕಿದೆ ಎಂಬುದನ್ನು ನಾವು ಗಮನಿಸಬೇಕು. ಬಿಳಿಯನಿಗೆ ಕಪ್ಪು ವರ್ಣದವರನ್ನು ಹೀಗೆ ಹೋಲಿಸುವುದಾದರೂ ಏಕೆ? ಒಬ್ಬ "ಬ್ಲಾಕ್ ಬ್ರಾಡ್ಮನ್" ಇರುವಂತೆ ಬಿಳಿಯ ಪೆಲೆ, ಬಿಳಿಯ ಮೊಹಮ್ಮದ್ ಅಲಿ, ಬಿಳಿಯ ಮೈಕಲ್ ಜೊರ್ಡೊನ್ ಇರಲು ಸಾಧ್ಯವೆ?

ಆದರೆ ಕೇವಲ ಒಂದು ಪಂದ್ಯದ ನಾಯಕನಾಗಿದ್ದ ಹೆಡ್ಲಿ, ವೆಸ್ಟ್ ಇಂಡೀಸ್ ಗುಲಾಮರ ಸ್ಫೂರ್ತಿಯಾಗಿಬಿಟ್ಟಿದ್ದ. ನಾವು ಕೂಡ ಬಿಳಿಯರ/ಆಳುವವರ ಸಮಾನವಾಗಿ ನಿಲ್ಲಬಲ್ಲೆವು ಎಂಬ ಆತ್ಮವಿಶ್ವಾಸ ಹುಟ್ಟಿಸಿದ್ದ. ಹೆಡ್ಲಿ ಆಡಿದ ಮತ್ತು ಅವನ ನಂತರದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳು inconsistent ತಂಡವಾಗಿದ್ದವು. ತಂಡ  ಒಂದು ದಿನ ಅತ್ಯುತ್ತಮವಾಗಿ ಆಡಿದರೆ, ಮತ್ತೊಂದು ದಿನ ಕಳಪೆ ಪ್ರದರ್ಶನ ನೀಡುತ್ತಿತ್ತು. ತಂಡವನ್ನು ಬಣ್ಣಿಸಲೆಂದೇ "ಕ್ಯಾಲಿಪ್ಸೋ ಕ್ರಿಕೆಟ್" ಎಂಬ ಪದ ಕಾಯಿನ್ ಮಾಡಲಾಯಿತು. ಈ ತಂಡ ಮನರಂಜಿಸುತಿತ್ತು. ಆದರೆ ಸತತವಾಗಿ ಗೆಲ್ಲುತ್ತಿರಲಿಲ್ಲ. ವೆಸ್ಟ್ ಇಂಡೀಸ್ ಆಸ್ಟ್ರೇಲಿಯಾ/ಇಂಗ್ಲೆಂಡ್ ದೇಶಗಳಲ್ಲಿ ಜನಪ್ರಿಯವಾದರೂ, ಕಪ್ಪುವರ್ಣದವರ ತಂಡವೊಂದು ಬಿಳಿಯರ ಅಹಂ ಮುರಿಯಲಾಗಿರಲಿಲ್ಲ. 

ಇದೆಲ್ಲವೂ ಬದಲಾಗುವುದರಲ್ಲಿತ್ತು. 1950ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ ನೆಲದಲ್ಲಿ ವೆಸ್ಟ್ ಇಂಡೀಸ್  ಟೆಸ್ಟ್ ಒಂದನ್ನು ಜಯಿಸಿತು. ನಂತರ ಸರಣಿ ಗೆದ್ದಾಗಲಂತೂ ವೆಸ್ಟ್ ಇಂಡೀಸ್ ದ್ವೀಪಗಳೆಲ್ಲಲ್ಲಾ ಹರ್ಷೋದ್ಗಾರ. ಆದರೆ ವೆಸ್ಟ್ ಇಂಡೀಸ್ ತಂಡ ಸುದೀರ್ಘವಾಗಿ ಪ್ರಾಬಲ್ಯ ಸಾಧಿಸುವತ್ತ ನಿರ್ಣಾಯಕ ತಿರುವು ಪಡೆದದ್ದು 1975-76ರಲ್ಲಿ. ವೆಸ್ಟ್ ಇಂಡೀಸ್ ದೈತ್ಯರನ್ನು ಬಡಿದೆಬ್ಬಿಸಿದ ಸರಣಿಯದು. ಅದು ಆಸ್ಟ್ರೇಲಿಯಾ ಸರಣಿ. ಮೈದಾನದಲ್ಲಿದ್ದ ಆಸ್ಟ್ರೇಲಿಯನ್ ಆಟಗಾರರು ಸಭ್ಯರಾದರೂ ವೀಕ್ಷಕರ ಬೈಗುಳ, ಹೀಯಾಳಿಕೆ ನಿರಂತರ. ಡೆನ್ನಿಸ್ ಲಿಲ್ಲಿ, ಜೆಫ್ ಥಾಮ್ಸನ್ ಮಾರಕ ಬೌಲಿಂಗ್ ವೆಸ್ಟ್ ಇಂಡೀಸ್ ಆಟಗಾರರ ಮೈನಡುಗಿಸಿಬಿಟ್ಟಿತ್ತು. ಲಿಲ್ಲಿ, ಜೆಫ್ ಒಂದೊಂದು ಎಸೆತಗಳು ಬೆಂಕಿಯ ಉಂಡೆಗಳಾಗಿದ್ದವು. ಕೆಲವರ ಮೂಳೆ ಮುರಿದರೆ ತಂಡದ ಎಲ್ಲರಿಗೂ ಮೂಗೇಟುಗಳಾದವು. ಆರು ಪಂದ್ಯಗಳ ಆ ಸರಣಿಯನ್ನ ಆಸ್ಟ್ರೇಲಿಯಾ ಅನಾಯಾಸವಾಗಿ 5-1ರಿಂದ ಗೆದ್ದಿತ್ತು.

ಪ್ರತಿ ಬಾರಿ ಲಿಲ್ಲಿ ಎಸೆತೆ ಎಸೆಯುವಾಗಲೂ ಪ್ರೇಕ್ಷಕರು ಲಿಲ್ಲಿ!ಲಿಲ್ಲಿ! ಕಿಲ್!ಕಿಲ್! ಎಂದು ಕೂಗುತ್ತಿದ್ದರು. ಗೋರ್ಡಾನ್ ಗ್ರೀನಿಡ್ಜ್ ಅವರನ್ನ ಪ್ರೇಕ್ಷಕರು ಅವಮಾನಿಸಿದರು. ವೀವ್ ರಿಚರ್ಡ್ಸ್ ಅವರನ್ನು ಸ್ಟಾಂಡ್ನಲ್ಲಿ ಕುಳಿತ್ತಿದ್ದವರು ಪದೇ ಪದೆ ಕೆಟ್ಟ ಪದ ಬಳಸಿ ಕರೆಯುತ್ತಿದ್ದರು. “ಆ ದಿನಗಳು ಒಬ್ಬ ಕ್ರಿಕೆಟಿಗನಾಗಿ ಮತ್ತು ಮನುಷ್ಯನಾಗಿ ಅಸಹನೀಯವಾಗಿದ್ದವು" ಎಂದು ವೀವ್ ನೆನಪಿಸಿಕೊಳ್ಳುತ್ತಾನೆ.

ಆಸ್ಟ್ರೇಲಿಯಾದಲ್ಲಿ ಅನುಭವಿಸದ ಈ ಹೀನಾಯ ಸೋಲು, ಅಸಹನೀಯ ಅವಮಾನ ಜಗತ್ತು ಕಾಣಲಿರುವ ಶ್ರೇಷ್ಠ ತಂಡವೊಂದಕ್ಕೆ ನಾಂದಿ ಹಾಡಿತ್ತು. ಆಸ್ಟ್ರೇಲಿಯಾದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಬೆಂಬಿಡದ ಭೂತದಂತೆ ಕಾಡಿದ್ದು, ಆಸ್ಟ್ರೇಲಿಯನ್ ಬೌಲರ್ಗಳು. “ನಮ್ಮದೇ ತಂಡದ ವೇಗಿಗಳ ಎದುರು ಆಸ್ಟ್ರೇಲಿಯಾದವರು ಹೇಗೆ ಆಡಬಲ್ಲರು” ಎಂದು ಲೆಕ್ಕ ಹಾಕತೊಡಗಿದ್ದ ವೆಸ್ಟ್ ಇಂಡೀಸ್ ನಾಯಕ ಕ್ಲೈವ್ ಲಾಯ್ಡ್! ಆಗಾಗಲೇ ಒಂದು ಭಯಾನಕ ಮತ್ತು ಮಾರಕ ಬೌಲಿಂಗ್ ಘಟಕವೊಂದನ್ನ ಕಟ್ಟಲು ಶುರುಮಾಡಿದ್ದ! 

ಈ ಘಟಕದ ಪ್ರಥಮ ಬೌಲರ್ ಮೈಕಲ್ ಹೋಲ್ಡಿಂಗ್, ಆತ "ಪಿಸುಗುಡುವ ಸಾವು". ಸದ್ದಿಲ್ಲದೇ ಓಡಿಬಂದು ವೇಗವಾಗಿ ಚೆಂಡನ್ನು ಎಸೆಯುವ ಮಾಂತ್ರಿಕ. ಅಂಪೈರ್ ಆಗಿ ನಿಲ್ಲುತ್ತಿದ್ದ ಡಿಕ್ಕಿ ಬರ್ಡ್ "ಏನೋ ಮಾರಾಯ ನೀ ಓಡಿ ಬರುವ ಸದ್ದು ನನಗೂ ಕೇಳಿಸಲ್ವಲ್ಲೋ" ಎನ್ನುತ್ತಿದ್ದರಂತೆ. ಅಷ್ಟು ಮೆಲುವಾದ ಓಟ ಹೋಲ್ಡಿಂಗ್ನದ್ದು. ಆಂಡಿ ರಾಬರ್ಟ್ಸ್ "ದ ಹಿಟ್ ಮ್ಯಾನ್" ಕೈಗೆ ಚೆಂಡು ಹೋದರೆ ವಿಕೆಟ್ ಉರುಳುವುದು ಖಚಿತ. ಕಾಲಿನ್ ಕ್ರಾಫ್ಟ್ ಒಬ್ಬ "ನಗೆ ಮೊಗದ ಹಂತಕ". ಈ ಘಟಕಕ್ಕೆ ಮಾಲ್ಕಮ್ ಮಾರ್ಷಲ್, ಜೋಯಲ್ ಗಾರ್ನರ್ ಕೊಡುಗೆ ಅಪಾರ. 

ವೀವ್ ರಿಚರ್ಡ್ಸ್ ಆಕ್ರಮಣಕಾರಿ ಬ್ಯಾಟ್ಸಮನ್ ಆಗಿ ರೂಪುಗೊಳ್ಳುತ್ತಿದ್ದ. ಅವ ಬದುಕಿದ್ದು, ಉಸಿರಾಡಿದ್ದು ಕಪ್ಪು ವರ್ಣದವರ ಪರಂಪರೆಯಲ್ಲಿ. ತಾನು ಎಲ್ಲಿಂದ ಬಂದಿದ್ದೇನೆ, ಎಲ್ಲಿಗೆ ಹೋಗುತ್ತಿದ್ದೇನೆ ಮತ್ತು ಅಲ್ಲಿಗೆ ತಲುಪುವುದು ಹೇಗೆಂಬ ಖಚಿತತೆ ಅವನಲ್ಲಿತ್ತು. ಪ್ರತಿಬಾರಿ ಸೊಕ್ಕಿನಿಂದ, ತಲೆಯೆತ್ತಿ ಮೈದಾನಕ್ಕೆ ಪ್ರವೇಶ ನೀಡುತ್ತಿದ್ದ, ಬೌಲರ್ ಮತ್ತು ಫೀಲ್ಡರ್ಗಳನ್ನು ಗುರಾಯಿಸುತ್ತಿದ್ದ, "ನಿಮ್ ಧಿಮಾಕಿಗೆ, ಧಮಕಿಗೆ ಹಾಳು ತಾರತಮ್ಯಕ್ಕೆ ಹೆದರಿ ನಾನು ತಲೆಬಾಗಲ್ಲ ಹೋಗ್ರೋ" ಎನ್ನುವಂತೆ ಪ್ರತಿಭಟನೆಯ ಸಂಕೇತವಾಗಿ ಯಾವಾಗಲೂ ಚ್ಯೂಯಿಂಗ್ ಗಮ್ ಜಗಿಯುತ್ತಿದ್ದ. ಎಷ್ಟೇ ವೇಗದ ಬೌಲರ್ ಇದ್ದರೂ ಅವನೆದುರು ಹೆಲ್ಮೆಟ್ ಧರಿಸಿ ನಿಲ್ಲುತ್ತಿರಲಿಲ್ಲ. ವೆಸ್ಟ್ ಇಂಡೀಸ್ ತಂಡ ಉಣ್ಣೆಯ ಕಂದು ಕೆಂಪು ಬಣ್ಣದ ಕ್ಯಾಪ್ ಮಾತ್ರ ತೊಡುತ್ತಿದ್ದ. ಆತನೊಬ್ಬ ನಡೆದಾಡುವ ಪ್ರತಿರೋಧ. ಒಂದೂ ಮಾತನ್ನಾಡದೆ ಕಪ್ಪು ಶಕ್ತಿಯ ರುಚಿಯನ್ನು ಎದುರಾಳಿಗೆ ಪರಿಚಯಿಸುತ್ತಿದ್ದ. ಇದೆಲ್ಲವೂ ಆತನ ಉದ್ದೇಶಪೂರ್ವಕ ನಡೆಗಳೇ ಆಗಿದ್ದವು. ಆಕ್ರಮಣಶೀಲತೆಗೆ ಆಕ್ರಮಣಶೀಲತೆಯೇ ಉತ್ತರವೆಂಬಂತೆ! ನೀವು ದಾಳಿ ಮಾಡಿದರೆ, ನಾವು ದಾಳಿ ಮಾಡುತ್ತೇವೆ. ನಾವು ನಿಮ್ಮಷ್ಟೇ ಸಮರ್ಥರು. ನಿಮಗೆ ಸಮಾನರು ಎಂದು ತನ್ನ ಆಟದಿಂದ ಸಾರುತ್ತಿದ್ದ. 

ಈ ಬಲಿಷ್ಠ ಸಾರ್ವಕಾಲಿಕ ಶ್ರೇಷ್ಠ ವೆಸ್ಟ್ ಇಂಡೀಸ್ ತಂಡ ರೂಪುಗೊಳ್ಳುವಾಗ ವಸಾಹತುಶಾಯಿಗಳಿಂದ ದ್ವೀಪಗಳು ಸ್ವಾತಂತ್ರ್ಯ ಪಡೆಯುತ್ತಿದ್ದವು. ಕಪ್ಪುವರ್ಣದವರಲ್ಲಿ  ಬ್ರಿಟಿಷ್ ಮೌಲ್ಯ, ಶಿಸ್ತುಗಳನ್ನು ತುಂಬಿ  ಮತ್ತಷ್ಟು ಕೀಳರಿಮೆ ತುಂಬಲು ಬಳಕೆಯಾಗುತ್ತಿದ್ದ ಕ್ರಿಕೆಟ್ ಕಪ್ಪು ಪ್ರತಿರೋಧದ ಅಭಿವ್ಯಕ್ತಿಯಾಯಿತು. ಗರ್ವದಿಂದ ಎದೆಯೆತ್ತಿ ನಿಲ್ಲುವ ಗಳಿಗೆಗಳವು. ಬಿಳಿಯರು ಕಸಿದುಕೊಂಡಿದ್ದ ಎಲ್ಲವನ್ನೂ. ಪ್ರಮುಖವಾಗಿ ಆತ್ಮಗೌರವವನ್ನು ಕಪ್ಪುವರ್ಣದವರು  ಮರುಪಡೆಯುವ ದಿನಗಳವು.

ತಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದರೂ ಅಮೇರಿಕಾದಲ್ಲಿ ನೆಡೆಯುತ್ತಿದ್ದ ದಬ್ಬಾಳಿಕೆ, ಕೊಲೆ, ಬರ್ಬರ ಕೃತ್ಯಗಳು ವೀವ್ ರಿಚರ್ಡ್ಸ್ ನಿದ್ದೆ ಕೆಡಿಸಿದ್ದವು. ಆತ ಪ್ರತಿ ಆಟದಲ್ಲೂ ಹಸಿರು, ಗೋಲ್ಡ್, ಕೆಂಪು ಬಣ್ಣದ ಪಟ್ಟಿಯಿರುವ wristband ತೊಡುತ್ತಿದ್ದ. ಆಫ್ರಿಕನ್ ಸೀಮೆಯ ಪ್ರತೀಕ ಹಸಿರಾದರೆ, ಗೋಲ್ಡ್ ಆಫ್ರಿಕನ್ನರು ಬಿಳಿಯರ ಆಕ್ರಮಣದಿಂದ ಕಳೆದುಕೊಂಡದ್ದರ ಸಂಕೇತ ಮತ್ತು ಕೆಂಪು ಅದಕ್ಕಾಗಿ ಚೆಲ್ಲಿದ ರಕ್ತದ ಮಾಸದ ನೆನಪು! ವೀವ್ ಎಲ್ಲೆಡೆ ಸಂಚಲನ ಮೂಡಿಸಿದ ದಿನಗಳಲ್ಲಿ ಈ ಬ್ಯಾಂಡ್ ಇಂಗ್ಲೆಂಡ್ ಆಸ್ಟ್ರೇಲಿಯಾದ ಶಾಪ್ಗಳಲ್ಲಿ ಮಾರಾಟವಾಗುತ್ತಿದ್ದವು. ಬಿಳಿಯ ತಂದೆ ತಾಯಂದಿರು ತಮ್ಮ ಪುಟ್ಟ ಮಕ್ಕಳಿಗೆ ಈ ಬ್ಯಾಂಡ್ ಕೊಡಿಸುತ್ತಿದ್ದರು, ಬಹುಶ ಆ ಬಣ್ಣಗಳು ಯಾವುದರ ಪ್ರತೀಕವೆಂದು ಅವರಿಗೆ ಅರಿವಿರಲಿಲ್ಲ ಅನ್ನಿಸುತ್ತೆ.

ಮತ್ತೊಮ್ಮೆ ಆಸ್ಟ್ರೇಲಿಯಾಕ್ಕೆ ತೆರಳಿದ ವೆಸ್ಟ್ ಇಂಡೀಸ್ ತಂಡ ಕಳೆದ ಬಾರಿ ನುಂಗಿದ್ದ ಕಹಿ ಗುಳಿಗೆಗಳನ್ನು ಈ ಬಾರಿ ಆಸ್ಟ್ರೇಲಿಯಾಕ್ಕೆ ನುಂಗಿಸಿತ್ತು. ಲಿಲ್ಲಿ! ಕಿಲ್! ಎಂದು ಅಂದು ಕೂಗಿದ್ದ ಪ್ರೇಕ್ಷಕರು ತನ್ನದೇ ಆಟಗಾರನಿಗೆ ಎಸೆತ ಬಡಿದಾಗ, ಈ ಎಸೆತ ಸರಿಯಿಲ್ಲ ಎಂದು ಗೊಣಗತೊಡಗಿದರು. ಜಗತ್ತಿನಾದ್ಯಂತ ಎಲ್ಲಾ ತಂಡಗಳನ್ನು ಮುಲಾಜಿಲ್ಲದೆ ಸದೆ ಬಡಿಯುತ್ತ ಸಾಗಿದ ಈ ಕಪ್ಪು ವರ್ಣದ ತಂಡ ಬಿಳಿಯರಿಗೆ ನುಂಗಲಾರದ ತುತ್ತಾಯಿತು. ಬಹುದಿನಗಳಿಂದ ಕಾಯ್ದುಕೊಂಡು ಬಂದಿದ್ದ ಮೇಲರಿಮೆ ಈಗ ಅಪಾಯದಲ್ಲಿತ್ತು. ವೆಸ್ಟ್ ಇಂಡೀಸ್ ಮಾರಕ ಬೌಲಿಂಗ್ ಘಟಕಕ್ಕೆ ಇಡೀ ವಿಶ್ವ ಮಂಡಿಯೂರಿ ಶರಣಾಗಿತ್ತು.

ಇತ್ತೀಚೆಗೆ ವಿಂಡೀಸ್ ತಂಡದ ಆ ದಿನಗಳ ಪ್ರಾಬಲ್ಯ, ಪ್ರತಿಭೆಯನ್ನು ಒಪ್ಪಿಕೊಂಡು ನೂರಾರು ಪುಸ್ತಕಗಳು ಪ್ರಕಟವಾಗಿವೆ, ಚಲನಚಿತ್ರಗಳಾಗಿವೆ. ಎಲ್ಲರೂ ತಂಡದ ಲೆಗೆಸಿ ಶಾಶ್ವತವಾಗಿ ಉಳಿಯಲಿದೆ ಎಂದು ಸಮ್ಮತಿ ಸೂಚಿಸುತ್ತಾರೆ. ಆದರೆ ಆ ದಿನಗಳಲ್ಲಿ ಬಿಳಿಯ ರಾಷ್ಟೀಯ ತಂಡಗಳನ್ನು ಹೀನಾಯವಾಗಿ ಪರಾಭವಗೊಳಿಸಿ, ಬಿಳಿಯ ಮೇಲರಿಮೆಯನ್ನ ತಮ್ಮ ಅದ್ಭುತ ಆಟದಿಂದಲೇ ಪ್ರಶ್ನಿಸುತ್ತಿದ್ದ ಸಂಪೂರ್ಣ ಕಪ್ಪು ವರ್ಣದವರ ತಂಡದ ಸಾಧನೆಗೆ ಮಸಿ ಬಳಿಯುವ ಕೆಲಸದಲ್ಲಿ ಕೆಲ ಕ್ರಿಕೆಟ್ ಸಂಸ್ಥೆ ಮತ್ತು ಮಾಧ್ಯಮಗಳು ತೊಡಗಿಕೊಂಡಿದ್ದವು. 

ಈ ಶರಣಾಗತಿ ಜೀರ್ಣಿಸಿಕೊಳ್ಳಲಾಗದಿದ್ದಾಗ ಮಾಧ್ಯಮಗಳು ಅಖಾಡಕ್ಕೆ ಇಳಿದವು. “ಭಯೋತ್ಪಾದಕರಿವರು, ಕ್ರಿಕೆಟ್ ನಿಯಮಗಳನ್ನು ಬದಲಾಯಿಸಿ ಇವರನ್ನು ಸದೆಬಡೆಯಿರಿ, ಇದೊಂದು ದ್ವೇಷ ಉಗುಳುವ ತಂಡ, ಬರಿ ಬೌನ್ಸರ್ಸ್ ಎಸೆಯುವ ಪಾಪಿಗಳು...” ಎಷ್ಟೆಲ್ಲಾ ಬೈಗುಳಗಳು ದಿನಪತ್ರಿಕೆಗಳಲ್ಲಿ ಕಾಣಿಸಿಕೊಂಡವು. ಬಿಳಿಯರಿಗೆ ಹಳೆಯ ಮನರಂಜನೆಯ ಕ್ಯಾಲಿಪ್ಸೋ ತಂಡ ಬೇಕಾಗಿತ್ತು ಈ ಪ್ರಾಬಲ್ಯ ಸಾಧಿಸುವ ವೆಸ್ಟ್ ಇಂಡೀಸ್ ತಂಡ ಅರಗಿಸಿಕೊಳ್ಳಲಾಗದ್ದಾಗಿತ್ತು. ಬಿಳಿಯರ ಅಂತರಾಳದಲ್ಲಿ "You are superior, this cannot happen" ಎಂದು ರಿಂಗಣಿಸುತಿತ್ತು ಅನ್ನಿಸುತ್ತೆ.

ಮಾಧ್ಯಮ ಯಾವ ಕೀಳು ಮಟ್ಟಕ್ಕೆ ಇಳಿಯಿತು ಅನ್ನುವುದರ ಒಂದೆರಡು ಉದಾಹರಣೆ ನೋಡಿ-

1991ರಲ್ಲಿವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ಪ್ರವಾಸ ಮಾಡುವುದರಲ್ಲಿತ್ತು. ಆಗ ವಿಸ್ಡೆನ್ ಕ್ರಿಕೆಟ್ ಪತ್ರಿಕೆಯ ಸಂಪಾದಕ ಡೇವಿಡ್ ಫಿರ್ತ್ ಹೀಗೆ ಬರೆದ:

"ಇಂಗ್ಲೆಂಡ್ ಮೇಲೆ ಮತ್ತೊಂದು ದಾಳಿ ಮಾಡುವುದರಲ್ಲಿದೆ ವೆಸ್ಟ್ ಇಂಡೀಸ್. ಅವರು ಭಯಾನಕ. ವಿಶ್ವದಲ್ಲೇ ಅತ್ಯಂತ ಯಶ್ವಸಿಯಾದರೂ ಜನಪ್ರಿಯರಲ್ಲದವರು. ಅವರ ಆಟದ ಅಡಿಪಾಯ ಸೇಡು ಮತ್ತು ಹಿಂಸೆ. ಅವರ ಆಟ ಅಹಮ್ಮಿನ ಅಂಚಿನಲ್ಲಿದೆ. ನಮ್ಮ ಅದೃಷ್ಟವೆಂದರೆ ಅವರು ಅವರೊಡನೆ ವೆಸ್ಟ್ ಇಂಡೀಸ್ ಅಂಪೈರ್ ಅನ್ನು ಕರೆತರದಿರುವುದು... ಈ ಪಂದ್ಯಗಳು ಮೈದಾನದ ಹೊರಗಿರುವ ವರ್ಣಾಧಾರಿತ ಉದ್ವೇಗಗಳ ಅಭಿವ್ಯಕ್ತಿಯಷ್ಟೇ." 

ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ಕೊನೆಯ ದಿನಗಳು ಹತ್ತಿರವಾಗುತ್ತಿದಂತೆ, ಫಿಲ್ ಡಿಫ್ರೆಟಿಸ್, ಕ್ರಿಸ್ ಲೆವಿಸ್, ಡೆವನ್ ಮಾಲ್ಕಮ್ ನಂತಹ ಕಪ್ಪುವರ್ಣದವರು ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದರು. ಹೆಂಡೆರ್ಸನ್ ಎನ್ನುವ ಪತ್ರಕರ್ತನೊಬ್ಬ "ಇಷ್ಟು ಕಾಲ ಬಿಳಿಯರಿಂದ ದಬ್ಬಾಳಿಕೆಗೊಳಗಾದ ಕರಿಯರು ನಮ್ಮ ತಂಡದಲ್ಲಿ ಸ್ಥಾನ ಪಡೆದಿದ್ದರೆ, ಅವರು ನಿಜವಾಗಲೂ ನಿಯತ್ತಿನಿಂದ ನಮ್ಮ ದೇಶಕ್ಕಾಗಿ ಆಡುವರೇ? ಎದುರಾಳಿಗಳು ಗೆದ್ದಾಗ ಅವರು ಸಂಭ್ರಮಿಸುವುದಿಲ್ಲವೇ?" ಎಂದು ಪ್ರಶ್ನಿಸಿದ! ತೀವ್ರವಾಗಿ ಘಾಸಿಗೊಂಡ ಈ ಇಂಗ್ಲೆಂಡ್ ಆಟಗಾರರು ಪತ್ರಕರ್ತನ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿ ಗೆದ್ದರು.

ಆ ದಿನಗಳ ವೆಸ್ಟ್ ಇಂಡೀಸ್ ತಂಡ ನನಗೊಂದು ವಿಸ್ಮಯ. ಅವರ ಹೋರಾಟ ನನಗೊಂದು ಮಾದರಿ. ವರ್ಣಭೇದ ನೀತಿಯ ಆ ದಿನಗಳಲ್ಲಿ, ಅಮೇರಿಕಾ, ಯುರೋಪಿಯನ್ ರಾಷ್ಟ್ರಗಳಲ್ಲಿ ಕಪ್ಪುವರ್ಣದವರನ್ನು ಎರಡನೇ ದರ್ಜೆಯ ನಾಗರಿಕರಂತೆ ಕಾಣುತ್ತಿದ್ದ ಆ ದಿನಗಳಲ್ಲಿ ಈ ತಂಡ ಬಿಳಿಯರು ನಿದ್ರೆಯಲ್ಲಿ ಕಾಣುತ್ತಿದ್ದ ದುಃಸ್ವಪ್ನಗಳನ್ನು ನಿಜವಾಗಿಸಿದ್ದರು. ಒಂದು ಪ್ರಬಲ ತಂಡವಾಗಿ Black people were equal in mind, body and spirit ಎಂದು ಸಾಬೀತು ಪಡಿಸಿದ್ದರು.

ಯಾವುದೇ ಕಾರಣವಿಲ್ಲದೆ ಅಮೆರಿಕಾದ ಮೆಂಫಿಸ್ ನಗರದಲ್ಲಿ ಕಪ್ಪುವರ್ಣದ ಯುವಕನನ್ನು ಬರ್ಬರವಾಗಿ ಕೊಂದ ಅಮೆರಿಕನ್ ಪೊಲೀಸರನ್ನ ಕಂಡು "ನನ್ನ ಮಗ ಕೂಗಳತೆಯ ದೂರದಲ್ಲಿದ್ದರೂ ಅವನ ಕೂಗು ನನಗೆ ಕೇಳಲಿಲ್ಲ. ಅವನನ್ನು ನಾನು ಉಳಿಸಿಕೊಳ್ಳಲಾಗಲಿಲ್ಲ. ಇದಕ್ಕಿಂತ ಅತೀವ ದುಃಖ ತಾಯಿಗೆ ಬೇರೊಂದಿದೆಯೇ? ಪೊಲೀಸರು ಅವನ ಹೊಟ್ಟೆಗೆ ಗುದ್ದುವಾಗ, ನನಗೆ ಮನೆಯಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿತ್ತು! ನನಗೆ ಆಗಲಾದರೂ ಅರ್ಥವಾಗಬೇಕಿತ್ತು" ಎಂದು ನೊಂದ ತಾಯಿ ಕಣ್ಣೀರಿಡುವಾಗ ಅವರ ನೋವಲ್ಲಿ ಭಾಗಿಯಾಗಿ ಸಾಂತ್ವನ ಹೇಳಲು ವೆಸ್ಟ್ ಇಂಡೀಸ್ ತಂಡದ ಬಗ್ಗೆ ಬರೆಯಬೇಕೆಂದಿನಿಸಿತು. ವೆಸ್ಟ್ ಇಂಡೀಸ್ ತಂಡ ಕುರಿತು ಬರೆಯುವಾಗ, ಅವರು ಅನುಭವಿಸಿದ ಅಸಹನೀಯ ಯಾತನೆಯ ಕುರಿತು ಯೋಚಿಸುವಾಗ ಭಾರತದ ಅವಕಾಶ ವಂಚಿತ, ಪ್ರತಿಭಾನ್ವಿತ ದಲಿತ ಕ್ರಿಕೆಟಿಗರಾದ ಬಾಲೋ ಸಹೋದರರು ನನ್ನ ಮನದಲ್ಲಿ ಸುಳಿದುಹೋಗದೆ ಇರಲಿಲ್ಲ.

Similar News