×
Ad

ಸುರತ್ಕಲ್‌: ಕಾರ್ಮಿಕರ ನಡುವೆ ಹೊಡೆದಾಟ; ಓರ್ವ ಮೃತ್ಯು, ಇಬ್ಬರಿಗೆ ಗಾಯ

Update: 2023-02-13 00:24 IST

ಸುರತ್ಕಲ್‌: ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಾರ್ಮಿಕರ ಮಧ್ಯೆ ಹೊಡೆದಾಟ ನಡೆದು ಓರ್ವ ಮೃತಪಟ್ಟು, ಮತ್ತಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶನಿವಾರ ರಾತ್ರಿ ಕುಳಾಯಿ ಮಾರ್ಬಲ್‌ ಸಂಸ್ಥೆಯ ಬಳಿ ವರದಿಯಾಗಿದೆ.

ಮೃತ ಯುವಕನ್ನು ಬಿಹಾರ ಮೂಲದ ಚೋಟು ಕುಮಾರ್ (21) ಎಂದು ಗುರುತಿಸಲಾಗಿದ್ದು, ಮೃತ ಛೋಟು ಮತ್ತು ಆರೋಪಿಗಳು ಕುಳಾಯಿಯ ಮಾರ್ಬಲ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಶನಿವಾರ ರಾತ್ರಿ ಊಟಕ್ಕೆ ಸಂಬಂಧಿಸಿಂತೆ ಮೂವರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಅದು ಅತಿರೇಕಕ್ಕೆ ತೆರಳಿ ಹೊಡೆದಾಡಿಕೊಂಡಿದ್ದರು ಎನ್ನಲಾಗಿದೆ. ಹೊಡೆದಾಟದಲ್ಲಿ ಮೂವರೂ ಗಾಯಗೊಂಡಿದ್ದು, ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಛೋಟು ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಸಂಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡಿದ್ದ ಮತ್ತಿಬ್ಬರು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಸುರತ್ಕಲ್‌ ಪೊಲೀಸರು ಐಪಿಸಿ ಸೆಕ್ಷನ್‌ 302 ಅಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಪಣಂಬೂರು ಎಸಿಪಿ, ಸುರತ್ಕಲ್ ಇನ್‌ಸ್ಪೆಕ್ಟರ್ ಸಹಿತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Similar News