ಸುಮ್ಮನೆ ಮಾತನಾಡಿದರೆ ಆಗುವುದಿಲ್ಲ, ಸಿಎಂ ಆಗಲು ಹಣೆಬರಹವೂ ಬೇಕು: ಸಚಿವ ಆರ್.ಅಶೋಕ್

Update: 2023-02-13 12:37 GMT

ಬೆಂಗಳೂರು, ಫೆ. 13: ‘ನಾವು ನೀವು ಸುಮ್ಮನೆ ಮಾತನಾಡಿದರೆ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಅದಕ್ಕೆ ಹಣೆಬರಹವೂ ಬೇಕು’ ಎಂದು ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಶಿವಾನಂದ ಪಾಟೀಲ್ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅಶೋಕ್, ‘ಸಿಎಂ ಆಗಲು ಹಣೆಬರಹವು ಅಗತ್ಯ’ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಮಾಧುಸ್ವಾಮಿ, ‘ವಿಪಕ್ಷದವರೆ ಹೇಳಿದ ಮೇಲೆ ನಾವು (ಆಡಳಿತ ಪಕ್ಷ) ಸಿಎಂ ಆಗಲೇಬೇಕು. ಶಿವಾನಂದ ಸಹಕಾರ ನೀಡಿ ಅಶೋಕ್ ಸಿಎಂ ಮಾಡಿದರೆ ಅವರ ಕ್ಷೇತ್ರಕ್ಕೆ ಮಿನಿವಿಧಾನಸೌಧ ನಿರ್ಮಿಸಲು ಅನುದಾನ ನೀಡುತ್ತೇವೆ’ ಎಂದು ಚಟಾಕಿ ಹಾರಿಸಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಶಿವಾನಂದ ಪಾಟೀಲ್, ‘ಹೊಸದಾಗಿ ರಚನೆಯಾದ ತಾಲೂಕುಗಳಲ್ಲಿ ಆಡಳಿತ ಸೌಧ ಕಟ್ಟಡ ನಿರ್ಮಾಣಕ್ಕೆ ಒಂದೇ ಕ್ಷೇತ್ರದಲ್ಲಿ ಎರಡು ಮಿನಿ ವಿಧಾನಸೌಧ ನೀಡಿದ್ದಾರೆ. ಆದರೆ, ನಮ್ಮ ಕ್ಷೇತ್ರದಲ್ಲಿನ ಹೊಸ ತಾಲೂಕಿಗೆ ಒಂದು ಮಿನಿ ವಿಧಾನಸೌದ ನೀಡಿಲ್ಲ. ಈ ರೀತಿಯ ತಾರತಮ್ಯ ಸಲ್ಲ. ಅಲ್ಲದೆ, ಆರ್.ಅಶೋಕ್ ಅತ್ಯಂತ ಪ್ರಭಾವಿ ಸಚಿವರು. ಮಾತ್ರವಲ್ಲ ಮುಂದೆ ಸಿಎಂ ಆಗುವವರು’ ಎಂದು ಕಾಳೆದರು.

ಅನುದಾನ ಕೊಟ್ಟಿಲ್ಲ: ‘ನಮ್ಮ ಕ್ಷೇತ್ರದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮುಜರಾಯಿ ಇಲಾಖೆಯಿಂದ ಅನುದಾನ ನೀಡಿಲ್ಲ. ರಸ್ತೆ, ಸೇತುವೆ ಸಹಿತ ಮೂಲಸೌಕರ್ಯ ಅಭಿವೃದ್ಧಿಗೆ ನೀಡಿದ್ದ ಅನುದಾನವನ್ನು ನಾನು ಆ ಕಾರ್ಯಕ್ಕೆ ಒದಗಿಸಿದ್ದೇನೆ. ಹೀಗಾಗಿ ಕೂಡಲೇ ಅನುದಾನ ನೀಡಬೇಕು ಎಂದು ವಿಪಕ್ಷ ಮುಖ್ಯ ಸಚೇತಕ ಅಜಯ್ ಸಿಂಗ್ ಆಗ್ರಹಿಸಿದರು.

Similar News