ರಾಜಕೀಯ ಪ್ರಾತಿನಿಧ್ಯ, ನೇಕಾರರ ಸಮುದಾಯಗಳ ಅಭಿವೃದ್ದಿ ನಿಗಮಕ್ಕೆ ನೇಕಾರ ಸಮುದಾಯದ ಸ್ವಾಮೀಜಿಗಳ ಒತ್ತಾಯ

Update: 2023-02-14 07:57 GMT

ಬೆಂಗಳೂರು, ಫೆ.13: ರಾಜ್ಯದಲ್ಲಿ ಸುಮಾರು 60 ಲಕ್ಷದಷ್ಟು ಜನಸಂಖ್ಯೆಯನ್ನು ಹೊಂದಿರುವ ನೇಕಾರ ಸಮುದಾಯಗಳಿಗೆ ರಾಜಕೀಯ ಪಕ್ಷಗಳು ಕನಿಷ್ಠ 5 ಕ್ಷೇತ್ರಗಳಲ್ಲಿ ಟಿಕೆಟ್ ನೀಡಿ ಸಮಾಜದ ರಾಜಕೀಯ ಬಲಾಡ್ಯತೆಗೆ ಮುಂದಾಗಬೇಕು. ಅಲ್ಲದೇ, ಮುಂದಿನ ಆಯವ್ಯಯದಲ್ಲಿ ಸರ್ಕಾರ ನೇಕಾರ ಸಮುದಾಯಗಳ ಅಭಿವೃದ್ದಿಗೆ ʼನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮ'   ಪ್ರಾರಂಭಿಸಬೇಕು ಎಂದು ನೇಕಾರರ ಸಮುದಾಯಗಳ ಮಠಾಧೀಶರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಹಂಪೆಯ ಶ್ರೀ ಗಾಯತ್ರಿಪೀಠ ಮಹಾಸಂಸ್ಥಾನದ ಶ್ರೀ ದಯಾನಂದ ಪುರಿ ಸ್ವಾಮೀಜಿ, ಗುಳೇದಗುಡ್ಡ ಶ್ರೀ ಗುರುಬಸವ ಕೇಂದ್ರದ 1008 ಜಗದ್ಗುರು ಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ದೊಡ್ಡಬಳ್ಳಾಪುರದ ಶ್ರೀ ದಿವ್ಯ ಜ್ಞಾನಾನಂದಗಿರಿ ಸ್ವಾಮೀಜಿ, ಹರಿಹರದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಹಳೇ ಹುಬ್ಬಳಿಯ ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ಬಾಗಲಕೋಟೆಯ ಶ್ರೀ ಘನಲಿಂಗ ಮಹಾಸ್ವಾಮಿಗಳು ಮತ್ತು ಯಾದಗಿರಿಯ ಡಾ. ಈಶ್ವರಾನಂದ ಸ್ವಾಮೀಜಿ ಈ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಹಂಪೆಯ ಶ್ರೀ ಗಾಯತ್ರಿಪೀಠ ಮಹಾಸಂಸ್ಥಾನದ ಶ್ರೀ ದಯಾನಂದ ಪುರಿ ಸ್ವಾಮೀಜಿ ಮಾತನಾಡಿ, ನೇಕಾರಿಕೆಯನ್ನು ಕುಲವೃತ್ತಿಯನ್ನಾಗಿಸಿಕೊಂಡಿರುವ ರಾಜ್ಯದ ನೇಕಾರರು ಹಿಂದುಳಿದ ವರ್ಗಗಳ ಗುಂಪಿಗೆ ಸೇರಿದವರಾಗಿದ್ದಾರೆ. ರಾಜ್ಯದಲ್ಲಿ 29 ಒಳಪಂಗಡಗಳ ಹೆಸರಿನಲ್ಲಿ ಗುರುತಿಸಿಕೊಂಡಿರುವ ನೇಕಾರ ಸಮುದಾಯವು ಸುಮಾರು 60 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ನೇಕಾರಿಕೆಯನ್ನು ಅವಲಂಬಿಸಿಕೊಂಡಿರುವ ನೇಕಾರರು ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮುದಾಯ ಮತ್ತು ಸಮುದಾಯ ಅವಲಂಬಿಸಿರುವ ನೇಕಾರಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳಿಗೆ ಹಾಗೂ ರಾಜ್ಯ ಸರಕಾರಕ್ಕೆ ಒಕ್ಕೊರಲಿನ ಒತ್ತಾಯವನ್ನು ಮಾಡುತ್ತಿದ್ದೇವೆ ಎಂದರು.

ಗುಳೇದಗುಡ್ಡ ಶ್ರೀ ಗುರುಬಸವ ಕೇಂದ್ರದ 1008 ಜಗದ್ಗುರು ಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಮಾತನಾಡಿ, ನೇಕಾರರು ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರವು ಆದ್ಯ ಗಮನಹರಿಸಬೇಕು. ನೇಕಾರ ಪರವಾದ ಸಂಘಟನೆಗಳು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಸಿದ ಹೋರಾಟದ ಫಲವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ನೇಕಾರ ಸಮ್ಮಾನ್ ಯೋಜನೆಯ ಮೊತ್ತವನ್ನು 5,000 ರೂ.ಗಳವರೆಗೆ ಹೆಚ್ಚಳ, ಎರಡು ಲಕ್ಷ ರೂ.ವರೆಗೆ ಶೂನ್ಯ ಬಡ್ಡಿರಹಿತ ಸಾಲದ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಅವರಿಗೆ ಸಮಸ್ತ ನೇಕಾರ ಸಮುದಾಯಗಳ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.

ದೊಡ್ಡಬಳ್ಳಾಪುರದ ಶ್ರೀ ದಿವ್ಯ ಜ್ಞಾನಾನಂದಗಿರಿ ಸ್ವಾಮೀಜಿ ಮಾತನಾಡಿ, ರಾಜ್ಯದ ಪ್ರತಿಯೊಂದು ಚುನಾವಣೆಯಲ್ಲೂ ನೇಕಾರರು ಪ್ರಮುಖ ಪಾತ್ರವನ್ನು ವಹಿಸುತ್ತಾ ಬಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸಮುದಾಯವು ಶೈಕ್ಷಣಿಕವಾಗಿ ಈಗೀಗ ಒಂದಿಷ್ಟು ಸುಧಾರಣೆಯನ್ನು ಕಾಣುತ್ತಿರುವುದು ನೆಮ್ಮದಿಯ ಸಂಗತಿಯಾದರೂ, ಯಾವುದೇ ಸಮುದಾಯ ಬಲಿಷ್ಠಗೊಳ್ಳಲು ರಾಜಕೀಯ ಪ್ರಾತಿನಿಧ್ಯ ಅತ್ಯಗತ್ಯವಾಗಿರುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನೇಕಾರ ಸಮುದಾಯ ಪ್ರಾತಿನಿಧ್ಯವನ್ನು ಕಂಡುಕೊಳ್ಳುವ ಮೂಲಕ ರಾಜಕೀಯ ಅಸ್ತಿತ್ವವನ್ನು ಹೊಂದಬಹುದಾಗಿದೆ. ಆದಕಾರಣ ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ನೇಕಾರ ಸಮುದಾಯಗಳಿಗೆ ಕನಿಷ್ಠ 5 ಕ್ಷೇತ್ರಗಳಲ್ಲಿ ಟಿಕೆಟ್ ಕೊಟ್ಟು ಸಮಾಜದ ರಾಜಕೀಯ ಬಲಾಢ್ಯತೆಗೆ ಮುಂದಾಗಬೇಕೆಂಬುದು ನೇಕಾರ ಮಠಾಧೀಶರುಗಳ ಒತ್ತಾಯವಾಗಿದೆ ಎಂದರು.  

ಹರಿಹರದ ಶ್ರೀ ಪ್ರಭುಲಿಂಗ ಸ್ವಾಮೀಜಿ ಮಾತನಾಡಿ, ಇದರ ಜೊತೆಗೆ ಸುದೀರ್ಘ ಕಾಲದಿಂದ 'ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮ' ವನ್ನು ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಹಲವಾರು ಬಾರಿ ಸರ್ಕಾರದ ಮುಂದೆ ಇಟ್ಟಿದ್ದೇವೆ. ನಮ್ಮ ಸಮುದಾಯದ ಯುವಕರು ನೇಕಾರಿಕೆಯನ್ನು ಕೈಬಿಟ್ಟು ಇತರ ಉದ್ಯೋಗಗಳನ್ನು ಅವಲಂಬಿಸುತ್ತಿದ್ದಾರೆ. ಪರಿಸ್ಥಿತಿಯಲ್ಲಿ ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದರೆ ನೇಕಾರಿಕೆಯಿಂದ ದೂರ ಉಳಿಯುತ್ತಿರುವ ಜಾತಿ ಆಧಾರಿತ ನೇಕಾರರನ್ನು ಪುನಃ ನೇಕಾರಿಕೆಗೆ ಕರೆತರಲು ಸಾಧ್ಯವಾಗಲಿದೆ. ಆದಕಾರಣ ʼನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮ' ತುರ್ತು ಅಗತ್ಯವಿದೆ. ಸದ್ಯದಲ್ಲೇ ಮಂಡಿಸಲಿರುವ ರಾಜ್ಯ ಬಜೆಟ್ ನಲ್ಲಿ ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮ ರಚನೆಯನ್ನು ಘೋಷಿಸಿ ಅದರ ಕಾರ್ಯನಿರ್ವಹಣೆಗೆ 500 ಕೋಟಿ ರೂ. ಅನುದಾನವನ್ನು ಮೀಸಲಿರಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಹಳೇ ಹುಬ್ಬಳಿಯ ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ಬಾಗಲಕೋಟೆಯ ಶ್ರೀ ಘನಲಿಂಗ ಮಹಾಸ್ವಾಮಿ ಮತ್ತು ಯಾದಗಿರಿಯ ಡಾ. ಈಶ್ವರಾನಂದ ಸ್ವಾಮೀಜಿ ಹಾಗೂ ನೇಕಾರರ ಸಮುದಾಯಗಳ ಮುಖಂಡರುಗಳು ಉಪಸ್ಥಿತರಿದ್ದರು.

Similar News