×
Ad

ಆಮದು ಬೆಲೆ ಏರಿಕೆಯಿಂದ ವಿದೇಶಿ ಅಡಿಕೆಗೆ ಹೊಡೆತ: ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ

ದೇಶಿಯ ಅಡಿಕೆಗೆ ಭಾರೀ ಬೇಡಿಕೆ ನಿರೀಕ್ಷೆ

Update: 2023-02-15 15:44 IST

ಮಂಗಳೂರು, ಫೆ.15: ಅಡಿಕೆಯ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಕೇಂದ್ರ ಸರಕಾರ ಅಡಿಕೆಯ ಕನಿಷ್ಠ ಆಮದು ಬೆಲೆಯನ್ನು ಈಗ ಇರುವ ಧಾರಣೆ ಕೆ.ಜಿ.ಗೆ 251 ರೂ.ಗಳಿಂದ 351 ರೂಪಾಯಿಗಳಿಗೆ ಪರಿಷ್ಕರಿಸಿ ಆದೇಶ ಹೊರಡಿಸಿದ್ದು, ಇದರಿಂದಾಗಿ ವಿದೇಶಿ ಅಡಿಕೆಯ ಆಮದಿನ ಮೇಲೆ ದೊಡ್ಡ ಹೊಡೆತ ಬೀಳಲಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಅಭಿಪ್ರಾಯಪಟ್ಟಿದ್ದಾರೆ.

ಕ್ಯಾಂಪ್ಕೊ ಸಂಸ್ಥೆಯ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶದಿಂದ ಅಡಿಕೆ ಆಮದಿಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಕೆಲವು ತಿಂಗಳುಗಳಿಂದ ಮಾರುಕಟ್ಟೆಯಲ್ಲಿ ಧಾರಣೆ ಏರಿಳಿತದ ಮೂಲಕ ಅಡಿಕೆಯ ದರ ಅನಿಶ್ಚಿತತೆಯಿಂದ ಕೂಡಿತ್ತು. ಇದರಿಂದ ರೈತರಲ್ಲಿ ಹತಾಶೆಯ ಭಾವನೆಯನ್ನು ಮೂಡಿಸಿತ್ತು ಎಂದರು.

ಕೇಂದ್ರ ಸರಕಾರದ ಕ್ರಮದಿಂದಾಗಿ ಕಳಪೆ ಗುಣಮಟ್ಟದ ವಿದೇಶಿ ಅಡಿಕೆಯ ಆಮದಿನ ಮೇಲೆ ಭಾರಿ ಹೊಡೆತ ಬೀಳಲಿದ್ದು, ಉತ್ತಮ ಗುಣಮಟ್ಟದ ದೇಶೀ ಅಡಿಕೆಗೆ ಬೇಡಿಕೆ ಬರಲಿದೆ ಮತ್ತು ದರದಲ್ಲಿ ಸ್ಥಿರತೆ ಕಾಣಲಿದ್ದು, ಅಡಿಕೆ ಮಾರುಕಟ್ಟೆ ಚೇತರಿಕೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದ ಗೃಹ ಸಚಿವ ಆರಗ ಜ್ಞಾನೇಂದ್ರರ ನೇತೃತ್ವದಲ್ಲಿ ಕ್ಯಾಂಪ್ಕೊ, ಮ್ಯಾಮ್ಕಾಸ್, ಟಿಎಸ್ಎಸ್, ತುಮ್ಕೋಸ್ , ಅಡಿಕೆ ಮಾರಾಟ ಮಹಾಮಂಡಳಿ ಮತ್ತು ಸಹಕಾರಿ ರಂಗದ ಹಿರಿಯರಾದ ಮಂಜಪ್ಪ ಹೊಸಬಾಳೆ ಹಾಗೂ ಸಹಕಾರ ಭಾರತೀಯ ರಾಷ್ಟ್ರೀಯ ನಾಯಕ ರಮೇಶ್ ವೈದ್ಯ ಇವರನ್ನೊಳಗೊಂಡ ನಿಯೋಗವು ದಿಲ್ಲಿಗೆ ತೆರಳಿ ಅಡಿಕೆ ಆಮದು ಕನಿಷ್ಠ ಬೆಲೆಯನ್ನು ಹೆಚ್ಚಿಸುವಂತೆ ಕೃಷಿ ಮತ್ತು ವಾಣಿಜ್ಯ ಸಚಿವರಲ್ಲಿ ಮನವಿಯನ್ನು ಮಾಡಿತ್ತು. ನಂತರದ ದಿನಗಳಲ್ಲಿ ಕ್ಯಾಂಪ್ಕೊದ ನಿರಂತರ ಸಂಪರ್ಕ ಮತ್ತು ಒತ್ತಡದ ಪರಿಣಾಮ ಕೇಂದ್ರ ಸರಕಾರ ಸ್ಪಂದಿಸಿ ಆದೇಶ ಹೊರಡಿಸಿದೆ ಎಂದು ಹೇಳಿದರು.

ಅಡಿಕೆಯ ಆಮದು ಬೆಲೆಯನ್ನು ಹೆಚ್ಚಿಸಿ ಅಡಿಕೆ ಬೆಳೆಗಾರನಿಗೆ ಬೆಂಬಲ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಮತ್ತು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಮತ್ತು ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭ ಕರಂದ್ಲಾಜೆ ಮತ್ತು ರಾಜ್ಯ ಗೃಹ ಸಚಿವರಾದ ಮಾನ್ಯ ಆರಗ ಜ್ಞಾನೇಂದ್ರ ಅವರಿಗೆ ಅಡಿಕೆ ಬೆಳೆಗಾರರ ಹಿತ ರಕ್ಷಕ ಕ್ಯಾಂಪ್ಕೊ ಸಂಸ್ಥೆಯ ಆಡಳಿತ ಮಂಡಳಿ ಕೇಂದ್ರ ಸರಕಾರದ ಕ್ರಮಕ್ಕೆ ಕೃತಜ್ಞತೆ ಸಲ್ಲಿಸಿದೆ ಎಂದು ನುಡಿದರು.

ಅಡಿಕೆಯ ಕನಿಷ್ಠ ಆಮದು ಬೆಲೆಯ ಹೆಚ್ಚಳದಿಂದ ಅಡಿಕೆ ಮಾರುಕಟ್ಟೆ ಚೇತರಿಕೆಯಾಗಲಿದ್ದು, ರೈತರು ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ಅಗತ್ಯಕ್ಕೆ ತಕ್ಕಂತೆ ಮಾರಾಟ ಮಾಡಿ ಅಡಿಕೆ ಧಾರಣೆಯ ಸ್ಥಿರತೆಗೆ ಸಹಕಾರ ನೀಡುವಂತೆ ಕ್ಯಾಂಪ್ಕೊ ಆಡಳಿತ ಮಂಡಳಿ ಮನವಿ ಮಾಡುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕ್ಯಾಂಪ್ಕೊ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಕೆ, ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ.ಕೃಷ್ಣ ಕುಮಾರ್, ನಿರ್ದೇಶಕರಾದ ಕೃಷ್ಣ ಪ್ರಸಾದ್ ಮಡ್ತಿಲ, ರಾಘವೇಂದ್ರ ಭಟ್ ಕೆದಿಲ, ಜಯಪ್ರಕಾಶ್ ಟಿ.ಕೆ, ಜನರಲ್ ಮ್ಯಾನೇಜರ್ ರೇಷ್ಮಾ ಮಲ್ಯ, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಗೋವಿಂದ ಭಟ್ ಉಪಸ್ಥಿತರಿದ್ದರು.

Similar News