ಪಲಿಮಾರು ಅವರಾಲುವಿನಲ್ಲಿ ಅಕ್ರಮ ಮರಳುಗಾರಿಕೆ ಆರೋಪ: ಪೊಲೀಸರಿಂದ ದಾಳಿ

Update: 2023-02-16 17:16 GMT

ಪಡುಬಿದ್ರಿ: ಪಲಿಮಾರು ಗ್ರಾಮದ ಅವರಾಲು ಕೊಪ್ಪಲ ಎಂಬಲ್ಲಿ ಅಕ್ರಮ ಮರಳುಗಾರಿಕಾ ಪ್ರದೇಶಕ್ಕೆ ಪಡುಬಿದ್ರಿ ಪೊಲೀಸರು ಗುರುವಾರ ದಾಳಿ ನಡೆಸಿದ್ದಾರೆ.

ಅವರಾಲುವಿನ ಕೊಪ್ಪಲದ ಶಾಂಭವಿ ನದಿಯಲ್ಲಿ ನಡೆಯುತಿದ್ದ  ಮರಳುಗಾರಿಕೆಯ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು. ಈ ಬಗ್ಗೆ ವಾರ್ತಾಭಾರತಿ  ವರದಿಯನ್ನು  ಬುಧವಾರ ಪ್ರಕಟಿಸಿತ್ತು.

ಪಡುಬಿದ್ರಿ ಠಾಣೆಯ ಪಿಎಸ್‍ಐ ಪುರುಷೋತ್ತಮ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ಸಂದರ್ಭ ಪೊಲೀಸರು ಮರಳುಗಾರಿಕೆಗಾಗಿ ಬಳಸಿಕೊಳ್ಳಲು ಉಡುಪಿ ಜಿಲ್ಲೆಯ ಶಾಂಭವಿ ನದಿ ದಂಡೆಯಲ್ಲಿ ಇಟ್ಟಿದ್ದ ದೊಡ್ಡ ದೋಣಿಯೊಂದನ್ನು ವಶಪಡಿಸಿಕೊಂಡಿದ್ದಾರೆ.

ದಾಳಿಯಾಗಬಹುದೆಂಬ ಮುನ್ಸೂಚನೆಯನ್ನು ಅರಿತಿರುವ ದಂಧೆಕೋರರು ತಾತ್ಕಾಲಿಕವಾಗಿ ತಮ್ಮ ಕಾನೂನು ಬಾಹಿರ ಚಟುವಟಿಕೆಯನ್ನು ನಿಲ್ಲಿಸಿದ್ದರೂ, ಶಾಂಭವಿ ಹೊಳೆಯ ಆಚೆಯ ದ.ಕ., ಗಡಿಭಾಗದಿಂದ ಎಲ್ಲಾ ಬೆಳವಣಿಗೆಗಳನ್ನು ಗಮನಿಸುವ ಇವರು ಸಮಯ ಸಾಧಿಸಿ ತಮ್ಮ ದಂಧೆಯನ್ನು ಮುಂದುವರಿಸುತ್ತಲೇ ಬಂದಿದ್ದಾರೆ ಎಂದು ಪೊಲೀಸ್ ಮಾಹಿತಿಗಳು ತಿಳಿಸಿವೆ.

ರಾತ್ರಿಯ ವೇಳೆ ಇಲ್ಲಿನ ನದಿ ಪಾತ್ರದಿಂದ ಅಗೆದು ತೆಗೆಯುತ್ತಿರುವ ಮರಳನ್ನು ಉಡುಪಿ ಜಿಲ್ಲೆಯ ಭಾಗದಿಂದ ದ. ಕ. ಜಿಲ್ಲೆಯ ಬಾಂದೊಟ್ಟು ಎಂಬಲ್ಲಿ ಶೇಖರಿಸಿಡಲಾಗುತ್ತಿರುವ ಕುರಿತಾಗಿ ಸ್ಥಳೀಯರು ನೀಡಿದ ಮಾಹಿತಿಯೂ ಸೇರಿದಂತೆ ಎಲ್ಲಾ ವಿವರಗಳ ಕುರಿತಾಗಿ ವರದಿಯನ್ನು ಸಿದ್ಧಪಡಿಸಿ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಗೆ ಸಲ್ಲಿಸಲಾಗುವುದು ಎಂದು ಪಿಎಸ್‍ಐ ಪುರುಷೋತ್ತಮ್ ಮಾಹಿತಿ ನೀಡಿದ್ದಾರೆ. 

Similar News