ಬಜ್ಪೆ: ವಿವಿಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ 4 ಮಂದಿ ಆರೋಪಿಗಳ ಸೆರೆ

Update: 2023-02-17 17:45 GMT

ಬಜ್ಪೆ: ಪೊಲೀಸ್ ಠಾಣೆಯಲ್ಲಿ 2020ನೇ ಇಸವಿಯಲ್ಲಿ ದಾಖಲಾದ ಬೈಕ್ ಕಳವು ಪ್ರಕರಣದಲ್ಲಿ ತಲೆಮರೆಸಿ ಕೊಂಡಿದ್ದ ಮಂಗಳೂರು ಉಳಾಯಿಬೆಟ್ಟು ನಿವಾಸಿ ಪ್ರದೀಪ್ ಪೂಜಾರಿ (27) ಎಂಬಾತನನ್ನು ಫೆ.16ರಂದು ಕುಳಾಯಿ ಎಂಬಲ್ಲಿಂದ ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ.

ಪ್ರದೀಪ್ ಪೂಜಾರಿ ವಿರುದ್ಧ ಕೊಲೆ (ಮಾಡುರು ಯುಸೂಫ್), ಕೊಲೆಗೆ ಯತ್ನ, ಪೊಲೀಸರ ಮೇಲೆ ಹಲ್ಲೆ ಮತ್ತು ಬೈಕ್ ಕಳವಿಗೆ ಸಂಬಂಧಿಸಿದಂತೆ ಮಂಗಳೂರು ಮತ್ತು ದ.ಕ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ.

ಬಜ್ಪೆ ಪೊಲೀಸ್ ಠಾಣೆಯಲ್ಲಿ 2012ನೇ ಇಸವಿಯಲ್ಲಿ ದಾಖಲಾದ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮಂಗಳೂರು ಬೋಳೂರು ಕಟ್ಟೆಯ ನಿವಾಸಿ ಪ್ರಶಾಂತ್ (39) ಎಂಬಾತನನ್ನು ಫೆ.15ರಂದು ಕುಂದಾಪುರದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ.

ಬಜ್ಪೆ ಪೊಲೀಸ್ ಠಾಣೆಯಲ್ಲಿ 2019ನೇ ಇಸವಿಯಲ್ಲಿ ದಾಖಲಾದ ದರೋಡೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ನಿವಾಸಿ ತಾರ್ಹಿಬ್ ಅಫ್ನಾನ್ ಪಟೇಲ್(33) ಎಂಬಾತನನ್ನು ಫೆ.15ರಂದು ಭಟ್ಕಳದಲ್ಲಿ ವಶಕ್ಕೆ ಪಡೆಯಲಾಗಿದೆ.

ಬಜ್ಪೆ ಪೊಲೀಸ್ ಠಾಣೆಯಲ್ಲಿ 2021ನೇ ಇಸವಿಯಲ್ಲಿ ದಾಖಲಾದ MMRD ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಉಡುಪಿಯ ಶಿವಳ್ಳಿಯ ನಿವಾಸಿ ಸುರೇಶ್ ಕುಮಾರ್ (38) ಎಂಬಾತನನ್ನು ಫೆ.15ರಂದು ಕುಂದಾಪುರದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ.

ಬಜ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 4 ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯದ ಮುಂದೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗೆ ಬಲೆ ಬಿಸಿದ ಬಜ್ಪೆ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ರವರ ತಂಡ ವಿಳಾಸ ಬದಲಿಸಿ ಬೇರೆ ಬೇರೆ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದ ಅವರನ್ನು ಪತ್ತೆ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

Similar News