ಹಾಸಿಗೆಯಲ್ಲಿ ಮಲಗಿದ ಕಾರಣ ಬೆನ್ನುನೋವು: ಗ್ರಾಹಕನಿಗೆ ಹಣ ಮರುಪಾವತಿ, 7000 ರೂ. ಪರಿಹಾರ ನೀಡಲು ಆದೇಶ
ಬೆಂಗಳೂರು: ಹೊಸದಾಗಿ ಖರೀದಿಸಿದ ಹಾಸಿಗೆಯಿಂದ ಬೆನ್ನು ನೋವಿಗೀಡಾಗಿದ್ದ 73 ವರ್ಷದ ಶಿಕ್ಷಣ ತಜ್ಞರೊಬ್ಬರು ಈ ಸಂಬಂಧ ಪ್ರಸಿದ್ಧ ಹಾಸಿಗೆ ತಯಾರಿಕಾ ಕಂಪನಿಯ ವಿರುದ್ಧ ಬೆಂಗಳೂರಿನ ನಗರ ಗ್ರಾಹಕ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ದಾವೆಯಲ್ಲಿ ವಿಜಯಿಯಾಗಿದ್ದು, ಅವರಿಗೆ ಹಾಸಿಗೆ ಖರೀದಿಗೆ ವೆಚ್ಚ ಮಾಡಿದ್ದ ರೂ. 27,455 ಹಾಗೂ ಪರಿಹಾರ ಮೊತ್ತ ರೂ. 7,000 ಅನ್ನು ಮರುಪಾವತಿಸುವಂತೆ ಗ್ರಾಹಕ ನ್ಯಾಯಾಲಯವು ಸೂಚಿಸಿದೆ ಎಂದು timesofindia ವರದಿ ಮಾಡಿದೆ.
ನಾಗರಬಾವಿಯ ನಿವಾಸಿಯಾದ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಆರ್.ಎಸ್. ದೇಶಪಾಂಡೆ ಡಿಕೆನ್ಸನ್ ರಸ್ತೆಯಲ್ಲಿರುವ ಮಳಿಗೆಯೊಂದಕ್ಕೆ ಭೇಟಿ ನೀಡಿ, ಉನ್ನತ ಶ್ರೇಣಿಯ ಡಿಸೈರ್ ಟಾಪ್ ಹಾಸಿಗೆಯನ್ನು ರೂ. 27,455 ತೆತ್ತು ಖರೀದಿಸಿದ್ದರು. ಆ ಹಾಸಿಗೆಯನ್ನು ಬಳಸತೊಡಗಿದ ಕೆಲವೇ ದಿನಗಳಲ್ಲಿ ಹಾಸಿಗೆಯ ಮಧ್ಯ ಭಾಗದಲ್ಲಿ ಉಬ್ಬು ಕಾಣಿಸಿಕೊಂಡು, ಮಲಗಿದಾಗ ತೀವ್ರ ಬೆನ್ನು ನೋವು ಉಂಟು ಮಾಡುತ್ತಿತ್ತು ಎನ್ನಲಾಗಿದೆ.
ಸತತ ಫೋನ್ ಕರೆ ಹಾಗೂ ದೂರು ನೀಡಿದರೂ ಆ ಹಿರಿಯ ನಾಗರಿಕರಿಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಕೊನೆಗೆ ಮಳಿಗೆಗೆ ಭೇಟಿ ನೀಡಿದಾಗ ಬಾಗಿಲು ಮುಚ್ಚಿರುವುದು ಕಂಡು ಬಂದಿದೆ. ಮಾರ್ಚ್, 2020ರ ವೇಳೆಗೆ ಕೋವಿಡ್-19 ಸಾಂಕ್ರಾಮಿಕ ವ್ಯಾಪಿಸಿ, ಇಡೀ ದೇಶಾದ್ಯಂತ ಲಾಕ್‌ಡೌನ್ ಹೇರಿದ್ದರಿಂದ ಮಳಿಗೆಯ ಅಧಿಕಾರಿಗಳನ್ನು ಸಂಪರ್ಕಿಸುವುದು ಆಗಿಲ್ಲ ಎಂದು ವರದಿಯಾಗಿದೆ.
ಇದಾದ ನಂತರ, ದೇಶಪಾಂಡೆಯವರು, ತಾವು ಅನುಭವಿಸುತ್ತಿರುವ ಸಮಸ್ಯೆಯನ್ನು ವಿವರಿಸಿ ಕಂಪನಿಗೆ ಹತ್ತಾರು ಇಮೇಲ್ ಕಳಿಸಿದ್ದಾರೆ. ತಾನು ಖರೀದಿಸಿರುವ ಹಾಸಿಗೆಗೆ ಆರು ತಿಂಗಳ ವಾರಂಟಿ ಇರುವ ಕುರಿತೂ ಗಮನಕ್ಕೆ ತಂದಿದ್ದಾರೆ. ಹೀಗಿದ್ದೂ ಹಾಸಿಗೆ ಕಂಪನಿಯಿಂದ ಯಾವುದೇ ಪ್ರತಿಸ್ಪಂದನೆ ದೊರೆತಿಲ್ಲ. ಇದರಿಂದ ರೋಸಿ ಹೋದ ಅವರು, ಶಾಂತಿನಗರದಲ್ಲಿರುವ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ದೂರಿನ ವಿಚಾರಣೆ ನಡೆಸಿದ ಆಯೋಗವು, ಜನವರಿ 19ರಂದು ಹಾಸಿಗೆ ತಯಾರಿಕಾ ಕಂಪನಿಗೆ ಹಾಸಿಗೆ ಖರೀದಿ ವೆಚ್ಚವಾದ ರೂ. 27,455 ಅನ್ನು ಬಡ್ಡಿಯೊಂದಿಗೆ ಮರಳಿಸಬೇಕು. ಹಿರಿಯ ನಾಗರಿಕರಿಗೆ ತಯಾರಿಕಾ ನ್ಯೂನತೆಯಿಂದ ಸಮಸ್ಯೆ ಉಂಟು ಮಾಡಿದ್ದಕ್ಕೆ ರೂ. 5,000 ಪರಿಹಾರ ನೀಡಬೇಕು ಹಾಗೂ ಅವರು ಭರಿಸಿರುವ ನ್ಯಾಯಾಲಯ ವೆಚ್ಚದ ಭಾಗವಾಗಿ ರೂ. 2,000 ಹೆಚ್ಚುವರಿಯಾಗಿ ಪಾವತಿಸಬೇಕು ಎಂದು ಆದೇಶಿಸಿದೆ.
ಇದಲ್ಲದೆ ಒಟ್ಟು ಮೊತ್ತವನ್ನು ಆದೇಶವಾದ ದಿನದಿಂದ 45 ದಿನಗಳೊಳಗಾಗಿ ಪಾವತಿಸಬೇಕು ಎಂದೂ ಕಂಪನಿಗೆ ನಿರ್ದೇಶಿಸಿದೆ.